– ಪತ್ನಿ ನೋಡಲು ಬಂದ ಉಗ್ರನನ್ನು ಸುತ್ತುವರಿದ ಭದ್ರತಾ ಪಡೆ
– ಉಗ್ರನ ಹತ್ಯೆ ವಿರೋಧಿಸಿ ಕಲ್ಲು ತೂರಾಟ
Advertisement
ಶ್ರೀನಗರ: ಉಗ್ರರನ್ನು ಹೆಡೆ ಮುರಿ ಕಟ್ಟಲು ಪಣತೊಟ್ಟಿರುವ ಭಾರತೀಯ ಭದ್ರತಾ ಪಡೆ 3 ಡಜನ್‌ಗೂ ಜಾಸ್ತಿ ದಾಳಿಗಳ ರೂವಾರಿ ಸಹಿತ ಇಬ್ಬರು ಉಗ್ರರನ್ನು ಬಲಿ ಪಡೆದಿದೆ. ಪುಲ್ವಾಮಾ ವಲಯದಲ್ಲಿ ಮಂಗಳ ವಾರ ಮುಂಜಾವ 4.30ರ ಸುಮಾರಿಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ ಗಡಿ ಭದ್ರತಾ ಪಡೆ ಯೋಧರು ಹಾಗೂ ಜಮ್ಮು – ಕಾಶ್ಮೀರ ಪೊಲೀಸರಿಗೆ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ನೀಡಿತ್ತು. ಇದರಿಂದ ಪೂರ್ವಯೋಜನೆ ಪ್ರಕಾರವೇ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಇದಕ್ಕೆ ಯೋಧರು, ಪೊಲೀಸ್ ಪಡೆ ಪ್ರತಿ ದಾಳಿ ನಡೆಸಿ ಲಷ್ಕರ್ ಇ-ತಯ್ಯಬಾ ಸಂಘಟನೆಯ ಅಗ್ರ ಸದಸ್ಯ, ಪಾಕ್ ಉಗ್ರ ಕಮಾಂಡರ್ ಅಬು ದುಜಾನಾ ಸೇರಿ ಇಬ್ಬರನ್ನು ಹೊಡೆದುರುಳಿಸಿದೆ.
ಕಲ್ಲುತೂರಾಟ: ಉಗ್ರರ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿಯೇ ಸ್ಥಳದಲ್ಲಿ ಕಲ್ಲು ತೂರಾಟ ನಡೆದಿದೆ. ಉಗ್ರರು ತಂಗಿದ್ದ ಮನೆ ಗೊತ್ತುಮಾಡಿಕೊಂಡು ಸುತ್ತುವರಿಯುತ್ತಿದ್ದಂತೆ 100ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಕಾರ್ಯಾಚರಣೆಗೆ ಅಡ್ಡಿಪಡಿಸಲು ಮುಂದಾಗಿದೆ. ಯೋಧರು, ಪೊಲೀಸರ ಮೇಲೆ ಕಲ್ಲು ತೂರಿದ್ದು, ಏಕಕಾಲದಲ್ಲಿ ಇದನ್ನೂ ನಿಭಾಯಿಸಿದ ಭದ್ರತಾ ಸಿಬಂದಿ, ಗುಂಪನ್ನು ಚದುರಿಸಲು ಅಶ್ರುವಾಯು, ಗುಂಡಿನ ಪ್ರಯೋಗ ಮಾಡಿದೆ. ಘಟನೆಯಲ್ಲಿ ಓರ್ವ ನಾಗರಿಕ ಕೂಡ ಅಸುನೀಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಂಡಿಗೆ ಬಲಿಯಾದ ಉಗ್ರರ ಮೃತದೇಹ ಕೆಲವು ಸಮಯ ಪೊಲೀಸರಿಗೆ ಸಿಕ್ಕಿರಲಿಲ್ಲ. ಇದಕ್ಕಾಗಿ ಹುಡುಕಾಟ ನಡೆಸಿದ್ದು, ಆಗಲೂ ಗುಂಪು ಕಲ್ಲುತೂರಲು ಯತ್ನಿಸಿತ್ತು ಎಂದು ಹೇಳಲಾಗಿದೆ. ಉಗ್ರರ ಬೇಟೆ ಹಿನ್ನೆಲೆಯಲ್ಲಿ ಕಾಶ್ಮೀರಾದ್ಯಂತ ಇಂಟರ್‌ನೆಟ್ ಸೇವೆ ತಡೆಹಿಡಿಯಲಾಗಿದೆ. ಪತ್ನಿ ಭೇಟಿಗೆ ಬಂದಿದ್ದ ದುಜಾನಾ
ಪೊಲೀಸರು ನೀಡಿರುವ ಮಾಹಿತಿಯಂತೆ ಪಾಕ್ ಮೂಲದ ಅಬು ದುಜಾನಾ ತನ್ನ ಪತ್ನಿಯನ್ನು ಭೇಟಿ ಮಾಡಲು ಬಂದಿದ್ದ. ಪೊಲೀಸರು ಆತನ ಮೇಲೊಂದು ಕಣ್ಣಿಟ್ಟಿದ್ದರು. ಸೋಮವಾರ ರಾತ್ರಿ ಭೇಟಿ ಸಾಧ್ಯತೆ ಇದೆ ಎನ್ನುವ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು. ಆತ ಬಂದಿರುವುದನ್ನು ಖಚಿತಪಡಿಸಿ ದಾಳಿ ನಡೆಸಿದ್ದಾರೆ. ಪೊಲೀಸರು ಮನೆ ಸುತ್ತುವರಿದ ಸಂಗತಿ ಗೊತ್ತಾದ ಅನಂತರ ದುಜಾನಾ ಮತ್ತು ಜತೆಗಾರರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದನ್ನು ಅರಿತು ದಾಳಿ ನಡೆಸಿದ್ದಾರೆ.
Related Articles
ಪಾಕ್‌ನಲ್ಲಿ ಜನಿಸಿದ ಅಬು ದುಜಾನಾ, ಲಷ್ಕರ್ ಸಂಘಟನೆಯ ಕಾಶ್ಮೀರ ಕಣಿವೆ ಕಮಾಂಡರ್ ಆಗಿದ್ದ. ಆದರೆ ಕಳೆದ ಕೆಲವು ತಿಂಗಳ ಹಿಂದೆ ಸಂಘಟನೆಯಲ್ಲಿ ಹುದ್ದೆ ವಿಚಾರ ಬಿರುಕು ಉಂಟಾಗಿದ್ದರಿಂದ ಶಸ್ತ್ರಾಸ್ತ್ರವಿಲ್ಲದ ಸಂದಿಗ್ಧತೆ ಎದುರಿಸುತ್ತಿದ್ದ ಎನ್ನಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ನಡೆದ 30ಕ್ಕೂ ಹೆಚ್ಚು ದಾಳಿಗಳ ರೂವಾರಿ ಆಗಿದ್ದ ಈತನನ್ನು ‘ಎ++’ ಉಗ್ರ ಎಂದೇ ಪರಿಗಣಿಸಲಾಗಿತ್ತು. ಈತನ ತಲೆಗೆ 15 ಲ.ರೂ. ಬಹುಮಾನ ಘೋಷಿಸಲಾಗಿತ್ತು.
Advertisement