ಶ್ರೀನಗರ್: ಜಮ್ಮು-ಕಾಶ್ಮೀರದ ಆವಂತಿಪೋರಾ ಜಿಲ್ಲೆಉ ತ್ರಾಲ್ ಪ್ರದೇಶದ ತಿಲ್ವಾನಿ ಮೊಹಲ್ಲಾದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದ್ದು, ಈ ಸಂದರ್ಭದಲ್ಲಿ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಸಾವನ್ನಪ್ಪಿರುವ ಘಟನೆ ಬುಧವಾರ(ಅಕ್ಟೋಬರ್ 13) ನಡೆದಿದೆ.
ಇದನ್ನೂ ಓದಿ:ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣ: ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಜಾ
ತ್ರಾಲ್ ಎನ್ ಕೌಂಟರ್ ನಲ್ಲಿ ಭಯೋತ್ಪಾದಕ ಶಾಮ್ ಸೋಫಿ ಸಾವನ್ನಪ್ಪಿರುವುದಾಗಿ ಕಾಶ್ಮೀರದ ಐಜಿಪಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಇಬ್ಬರು ಉಗ್ರರು ಅಡಗಿರುವ ಶಂಕೆ ಇದ್ದಿರುವುದಾಗಿ ಭದ್ರತಾ ಪಡೆ ಮೂಲಗಳು ತಿಳಿಸಿವೆ.
ತ್ರಾಲ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಸಿಆರ್ ಪಿಎಫ್ ಮತ್ತು ಪೊಲೀಸರು ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಭದ್ರತಾ ಪಡೆ ಪ್ರತಿದಾಳಿ ನಡೆಸಲು ಆರಂಭಿಸಿತ್ತು ಎಂದು ವರದಿ ಹೇಳಿದೆ.
ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಕಳೆದ ಮೂರು ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ನಡೆದ 5ನೇ ಎನ್ ಕೌಂಟರ್ ಇದಾಗಿದ್ದು, ಏಳು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ.