ವಾಷಿಂಗ್ಟನ್: ತಮ್ಮ ಜಾಲ ತಾಣವನ್ನು ಬಿಜೆಪಿ ಮುಖಂಡರು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳಲು ಫೇಸ್ ಬುಕ್ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ನಕಲಿ ಸುದ್ದಿ ಮತ್ತು ದ್ವೇಷದ ಭಾಷಣಗಳನ್ನು ಶೇರ್ ಮಾಡುವ ಮೂಲಕ ಹಿಂಸಾಚಾರಕ್ಕೆ ಎಡೆಮಾಡಿಕೊಡುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಫೇಸ್ ಬುಕ್ ಮತ್ತು ಟ್ವೀಟರ್ ಅಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡಿರುವ ಅಂಶ ಸೋಮವಾರ (ಆಗಸ್ಟ್ 17, 2020) ಬಹಿರಂಗವಾಗಿದೆ.
ಭಾರತ, ದಕ್ಷಿಣ ಮತ್ತು ಸೆಂಟ್ರಲ್ ಏಷ್ಯಾದ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ಆಂಖಿ ದಾಸ್, ಜೀವಬೆದರಿಕೆ ಬಗ್ಗೆ ದೆಹಲಿ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದರೆ. ಅಷ್ಟೇ ಅಲ್ಲ ತನ್ನ ಬಗ್ಗೆ ಅಶ್ಲೀಲ ಸಂದೇಶವನ್ನು ಪೋಸ್ಟ್ ಮಾಡಿರುವುದಾಗಿಯೂ ದೂರಿದ್ದಾರೆ.
ದೂರಿನ ಪ್ರಕಾರ, ಆಗಸ್ಟ್ 14ರಂದು ಜೀವಬೆದರಿಕೆ ಒಡ್ಡಿರುವ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ. ತನ್ನ ದೂರಿನಲ್ಲಿ ಈಕೆ ಐದಾರು ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಘಟನೆ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ನ ಲೇಖನವನ್ನು ಉಲ್ಲೇಖಿಸಿ “ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತದಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್ ಅನ್ನು ನಿಯಂತ್ರಿಸುತ್ತಿದೆ. ಮಾತ್ರವಲ್ಲದೆ ಅದರ ಮೂಲಕ ನಕಲಿ ಸುದ್ದಿ ಮತ್ತು ದ್ವೇಷವನ್ನು ಹರಡಿ, ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ. ಕೊನೆಗೂ ಅಮೆರಿಕಾದ ಮಾಧ್ಯಮವೊಂದು ಫೇಸ್‌ಬುಕ್ ನ ಕುರಿತಾದ ಸತ್ಯವೊಂದನ್ನು ಹೊರತಂದಿದೆ ಎಂದು ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರವಿಶಂಕರ್ ಪ್ರಸಾದ್, “ತಮ್ಮ ಪಕ್ಷದಲ್ಲಿಯೂ ಪ್ರಭಾವ ಬೀರಲು ಸಾಧ್ಯವಾಗದವರು ಮಾತ್ರವಲ್ಲದೆ ಸೋತವರು ಇಡೀ ಜಗತ್ತನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ ಎಂದು ಹೇಳುತ್ತಲೇ ಇರುತ್ತಾರೆ. ಚುನಾವಣೆಗೂ ಮುನ್ನ ಕೇಂಬ್ರಿಡ್ಜ್ ಅನಾಲಿಟಿಕಾ ಹಾಗೂ ಫೇಸ್ ಬುಕ್ ನ ಮಾಹಿತಿ ಸಂಗ್ರಹಿಸಿ ಸಿಕ್ಕಿ ಬಿದ್ದಿದ್ದೀರಿ. ಈಗ ನಮ್ಮನ್ನು ಪ್ರಶ್ನಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದರು.
ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿನ ಪ್ರಕಟವಾದ ಸುದ್ದಿ ಕುರಿತಂತೆ ಫೇಸ್ ಬುಕ್ ಸ್ಪಷ್ಟನೆ ನೀಡಿ, ನಾವು ಯಾವುದೇ ರಾಜಕೀಯ ಪಕ್ಷ ಅಥವಾ ಅದು ಯಾವುದೇ ಸ್ಥಾನದಲ್ಲಿರಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಿಂಸಾಚಾರ, ಪ್ರಚೋದನಕಾರಿ ಪೋಸ್ಟ್ ಅನ್ನು ಜಾಗತಿಕವಾಗಿ ನಿಷೇಧಿಸಲು ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿತ್ತು.