Advertisement

2019; ಅವಿಸ್ಮರಣೀಯ ಗೆಲುವು, ಸೋಲಿನ ಪಾಠ; ಕ್ರಿಕೆಟ್ ಲೋಕದ ಟಾಪ್ 10 ಘಟನೆ

09:50 AM Jan 01, 2020 | keerthan |

ಕ್ರಿಕೆಟ್ ವಿಶ್ವದಲ್ಲಿ 2019 ಅತ್ಯಂತ ಪ್ರಮುಖ ವರ್ಷ. ಕೆಲವು ಮರೆಯಲಾಗದ ಘಟನೆಗಳಿಗೆ 2019 ಸಾಕ್ಷಿಯಾಯಿತು. ವರ್ಷಪೂರ್ತಿ ಕ್ರಿಕೆಟ್ ಪಂದ್ಯಗಳು, ಕೆಲವು ವಿಶ್ವ ಮಟ್ಟದ ಕೂಟಗಳು ಈ ವರ್ಷ ನಡೆಯಿತು.

Advertisement

ವರ್ಷದ ಆರಂಭದಿಂದ ವರ್ಷದ ಅಂತ್ಯದವರೆಗೂ ಟೀಂ ಇಂಡಿಯಾ ದಣಿವರಿಯದ ಆಟ ಆಡಿದೆ. ಅನೇಕ ಸ್ಮರಣೀಯ ಗೆಲುವಿನೊಂದಿಗೆ ಪಾಠ ಕಲಿಯುವ ಸೋಲುಗಳನ್ನು ನೋಡಿದೆ. ಭಾರತ ಸೇರಿದಂತೆ ವಿಶ್ವಕ್ರಿಕೆಟ್ ನ 2019ರ ಪ್ರಮುಖ ಹತ್ತು ಘಟನೆಗಳ ಪಟ್ಟಿ ಇಲ್ಲಿದೆ.

ಐಸಿಸಿ ಏಕದಿನ ವಿಶ್ವಕಪ್

ಕ್ರಿಕೆಟ್ ಜನಕರಾದ ಇಂಗ್ಲೆಂಡ್ ನ ನೆಲದಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ನಡೆಯಿತು. ಮೇ 30ರಿಂದ ಜುಲೈ 14ರವರೆಗೆ ನಡೆದ ಕ್ರಿಕೆಟ್ ಮಹಾಕೂಟದಲ್ಲಿ ಅಗ್ರ ಹತ್ತು ತಂಡಗಳು ಕಾಣಿಸಿಕೊಂಡವು.

ಆರಂಭದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಸೆಮಿ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಮುಗ್ಗರಿಸಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಫೈನಲ್ ಪಂದ್ಯ ಟೈ ಆಗಿ ಸೂಪರ್ ಓವರ್ ನಲ್ಲಿ ಇಂಗ್ಲೆಂಡ್ ನಾಟಕೀಯವಾಗಿ ಜಯಿಸಿ ಟ್ರೋಫಿಯನ್ನು ತನ್ನದಾಗಿಸಿತು.

Advertisement

ಟೆಸ್ಟ್ ಚಾಂಪಿಯನ್ ಶಿಪ್
ಟೆಸ್ಟ್ ಕ್ರಿಕೆಟ್ ನ ಜನಪ್ರಿಯತೆಯನ್ನು ಹೆಚ್ಚಿಸುವ ಸಲುವಾಗಿ ಐಸಿಸಿ ಕಂಡುಕೊಂಡ ಹೊಸ ಉಪಾಯ ಟೆಸ್ಟ್ ಚಾಂಪಿಯನ್ ಶಿಪ್. ಈ ವರ್ಷದ ಆಗಸ್ಟ್ ನಲ್ಲಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿದ್ದು 2021ರ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಚಾಂಪಿಯನ್ ಶಿಪ್ ನ ಅಡಿ ಬರುವ ಪಂದ್ಯಗಳಿಗೆ ಅಂಕ ನೀಡಲಾಗುತ್ತದೆ. ಅಗ್ರ 9 ತಂಡಗಳು ಕೂಟದಲ್ಲಿ ಭಾಗವಹಿಸುತ್ತಿದ್ದು ಸದ್ಯ ಭಾರತ ತಂಡ ಎಲ್ಲಾ ಏಳು ಪಂದ್ಯ ಗೆದ್ದು 360 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ
ಆಸೀಸ್ ವಿರುದ್ದ ಅವರದೇ ನೆಲದಲ್ಲಿ ಟೆಸ್ಟ್ ಸರಣಿ ಜಯಿಸುವುದು ಭಾರತದ ದೀರ್ಘ ಕಾಲದ ಕನಸು. ಈ ವರ್ಷದ ಆರಂಭದಲ್ಲಿ ಅದು ನನಸಾಯಿತು. ಕಾಂಗರೂ ನೆಲದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಿದ ವಿರಾಟ್ ಪಡೆ 2-1ರ ಅಂತರದಿಂದ ಜಯ ಸಾಧಿಸಿತು.

ಕಾಂಗರೂ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿದ ವಿರಾಟ್ ಕೊಹ್ಲಿ ಬಳಗ ಯಾವುದೇ ಏಷ್ಯಾದ ತಂಡಗಳು ಮಾಡದ ದಾಖಲೆ ಬರೆಯಿತು. ಈ ಮೂಲಕ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಸ್ಮರಣೀಯ ದಾಖಲೆ ಬರೆಯಿತು.

ಐಪಿಎಲ್- ಮಂಕಡಿಂಗ್
ಐಪಿಎಲ್ ನ 12ನೇ ಆವೃತ್ತಿಯ ಹಲವು ಹೊಸತನಗಳಿಗೆ ನಾಂದಿ ಹಾಡಿತ್ತು. ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲಾಗಿತ್ತು.  ಪುಲ್ವಾಮಾ ದಾಳಿಯಲ್ಲಿ ಮೃತರಾದ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೀಡಲಾಗಿತ್ತು.

2019ರ ಐಪಿಎಲ್ ನಲ್ಲಿ ಸದ್ದು ಮಾಡಿದ ಪ್ರಸಂಗವೆಂದರೆ ಮಂಕಡಿಂಗ್. ಪಂಜಾಬ್ ಬೌಲರ್ ರವಿ ಅಶ್ವಿನ್ ರಾಜಸ್ಥಾನದ ಆಟಗಾರ ಜೋಸ್ ಬಟ್ಲರ್ ರನ್ನು ಮಂಕಡಿಂಗ್ ರೀತಿಯಲ್ಲಿ ಔಟ್ ಮಾಡಿದ್ದು ಭಾರಿ ಸುದ್ದಿಯಾಗಿತ್ತು.

ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ
ಬಿಸಿಸಿಐ ನ ನೂತನ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಯ್ಕೆಯಾದರು. ಬಿಸಿಸಿಐನ ಪೂರ್ಣ ಪ್ರಮಾಣದ ಅಧ್ಯಕ್ಷ ಪದವಿಗೇರಿದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ದಾದಾ ಪಾತ್ರರಾದರು. ಗಂಗೂಲಿ ಚುಕ್ಕಾಣಿ ಹಿಡಿಯುತ್ತಿದ್ದಂತೆ ಭಾರತೀಯ ಕ್ರಿಕೆಟ್ ನಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್
ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದ ಗಮನ ಸೆಳೆದ ಫಿಕ್ಸಿಂಗ್ ಹಗರಣವಿದು. ಮೊದಲು ತಮಿಳು ನಾಡು ಪ್ರೀಮಿಯರ್ ಲೀಗ್ ಗೆ ಬಡಿದ ಫಿಕ್ಸಿಂಗ್ ವಾಸನೆ ಕರ್ನಾಟಕ ಪ್ರೀಮಿಯರ್ ಲೀಗ್ ಗೂ ಹಬ್ಬಿತ್ತು. ಪರಿಣಾಮವಾಗಿ ಖ್ಯಾತ ಆಟಗಾರರಾದ ಸಿ ಎಂ ಗೌತಮ್ ಮತ್ತು ಅಬ್ರಾರ್ ಖಾಜಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ.

10 ವರ್ಷದ ನಂತರ ಪಾಕಿಸ್ಥಾನದಲ್ಲಿ ಟೆಸ್ಟ್ ಕ್ರಿಕೆಟ್
2009ರಲ್ಲಿ ಲಾಹೋರ್ ನಲ್ಲಿ ಶ್ರೀಲಂಕಾ ಆಟಗಾರರ ಮೇಲಿನ ಭಯೋತ್ಪಾದಕ ದಾಳಿ ಬಳಿಕ ಪಾಕ್ ನಲ್ಲಿ ನಿಂತು ಹೋಗಿದ್ದ ಕ್ರಿಕೆಟ್ ಹತ್ತು ವರ್ಷದ ನಂತರ ಮತ್ತೆ ಆರಂಭವಾಯಿತು. 2019ರಲ್ಲಿ ಟ್ವೆಂಟಿ ಮತ್ತು ಏಕದಿನ ಸರಣಿಗೆ ಪಾಕ್ ಗೆ ಪ್ರಯಾಣ ಬೆಳೆಸಿದ ಶ್ರೀಲಂಕಾ ತಂಡ ವರ್ಷಾಂತ್ಯದಲ್ಲಿ ಮತ್ತೆ ಟೆಸ್ಟ್ ಸರಣಿಗೆ ಪಾಕ್ ಪ್ರವಾಸ ಮಾಡಿತ್ತು.

ಪಿಂಕ್ ಟೆಸ್ಟ್
ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಶಖೆ ಹುಟ್ಟು ಹಾಕಿ ಬೆಳವಣಿಗೆಯಿದು.  ಪಿಂಕ್ ಬಾಲ್ ಟೆಸ್ಟ್ ಗೆ ಸದಾ ವಿರೋಧಿಸುತ್ತಿದ್ದ ಬಿಸಿಸಿಐ ಈ ವರ್ಷದ ನವೆಂಬರ್ ನಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿತು. ಸೌರವ್ ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದು ಈ ಮಹತ್ವದ ನಿರ್ಧಾರ ಕೈಗೊಂಡರು. ಬಾಂಗ್ಲಾ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಪಂದ್ಯವನ್ನು ಭಾರತ ಭರ್ಜರಿ ಅಂತರದಲ್ಲಿ ಜಯಿಸಿತು.

ಮ್ಯಾಚ್ ಫಿಕ್ಸಿಂಗ್- ಶಕೀಬ್ ಅಲ್ ಹಸನ್
ಈ ವರ್ಷದ ವಿಶ್ವಕಪ್ ನಲ್ಲಿ ಅಭೂತಪೂರ್ವ ಆಟವಾಡಿದ್ದ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಭ್ರಷ್ಟಾಚಾರದ ಆರೋಪದಲ್ಲಿ ಎರಡು ವರ್ಷ ನಿಷೇಧಕ್ಕೆ ಒಳಗಾದರು. ಶಕೀಬ್ ನೇರವಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿಲ್ಲವಾದರೂ ಬುಕ್ಕಿಗಳು ಹಲವು ಬಾರಿ ತನ್ನನ್ನು ಸಂಪರ್ಕಿಸಿದ್ದ ವಿಷಯವನ್ನು ಐಸಿಸಿಯಿಂದ ಮುಚ್ಚಿಟ್ಟಿದ್ದರು. ಈ ಆರೋಪದಲ್ಲಿ ಶಕೀಬ್ ಗೆ ಎರಡು ವರ್ಷ ನಿಷೇಧ ಹೇರಲಾಗಿದೆ.

ಕಾಫಿ ವಿದ್ ಕರಣ್ ವಿವಾದ
ವರ್ಷದ ಆರಂಭದಲ್ಲಿ ಭಾರಿ ಸುದ್ದಿಯಾಗಿದ್ದ ವಿವಾದವಿದು. ಟೀಂ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ ಎಲ್ ರಾಹುಲ್ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆಯರ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಉಭಯ ಆಟಗಾರರ ಮೇಲೆ ನೋಟಿಸ್ ನೀಡಿದ್ದ ಬಿಸಿಸಿಐ ವಿಚಾರಣೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next