ನವದೆಹಲಿ: ಗುಜರಾತ್ ನ ಎರಡು ರಾಜ್ಯ ಸಭಾ ಸ್ಥಾನಗಳ ಚುನಾವಣೆಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದ್ದು, ಇದರಿಂದಾಗಿ ಕಾಂಗ್ರೆಸ್ ನ ಕಾನೂನು ಹೋರಾಟಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಚುನಾವಣೆಗೆ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಈ ಹಂತದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ರಾಜ್ಯಸಭಾದ 2 ಸ್ಥಾನಕ್ಕೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಗುಜರಾತ್ ಕಾಂಗ್ರೆಸ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅರ್ಜಿದಾರರು ರಾಜ್ಯಸಭಾ ಚುನಾವಣೆಯ ಫಲಿತಾಂಶದ ನಂತರ ಚುನಾವಣಾ ಅರ್ಜಿಯನ್ನಾಗಿ ಕಾಂಗ್ರೆಸ್ ಪಕ್ಷ ಅರ್ಜಿಯನ್ನು ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಒಂದು ಬಾರಿ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ ಮೇಲೆ ಅದಕ್ಕಿರುವ ಪರಿಹಾರವೆಂದರೆ ಚುನಾವಣಾ ಅರ್ಜಿಯನ್ನಾಗಿ ಸಲ್ಲಿಸುವುದು. ಚುನಾವಣೆ ಸಂಬಂಧ ಆಯೋಗ ಪ್ರಕಟಣೆ ಹೊರಡಿಸಿದ ಮೇಲೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಸಂಜೀವ್ ಖನ್ನಾ ಮತ್ತು ಜಸ್ಟೀಸ್ ಬಿಆರ್ ಗವಾಯಿ ನೇತೃತ್ವದ ಪೀಠ ತಿಳಿಸಿದೆ.
ಗುಜರಾತ್ ನ ರಾಜಸ್ಯಭಾ ಸದಸ್ಯರಾಗಿದ್ದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಎರಡು ಸ್ಥಾನಗಳಿಗೆ ಜುಲೈ 5ರಂದು ಪ್ರತ್ಯೇಕವಾಗಿ ಉಪಚುನಾವಣೆ ನಡೆಸಲು ತೀರ್ಮಾನಿಸಿತ್ತು.