ಸದ್ಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾದ್ದೇ ಮಾತು. ಎಲ್ಲೆಡೆ ಸಿನಿಮಾ ನೋಡುಗರು ʼಕಲ್ಕಿʼಯ ಬಗ್ಗೆ ಪಾಸಿಟಿವ್ ಮಾತುಗಳನ್ನು ಹೇಳುತ್ತಿದ್ದಾರೆ. ಭಾರತ ಮಾತ್ರವಲ್ಲದೆ ಅಮೆರಿಕಾ, ಕೆನಾಡ ಸೇರಿದಂತೆ ವಿದೇಶದಲ್ಲೂ ʼಕಲ್ಕಿ’ ಹವಾ ಜೋರಾಗಿದೆ.
ರಿಲೀಸ್ ಆದ ನಾಲ್ಕೇ ದಿನದಲ್ಲಿ ಸಿನಿಮಾ 500 ಕೋಟಿ ಗಳಿಕೆ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸುವತ್ತ ದಾಪುಗಾಲಿಡುತ್ತಿದೆ.
ವರ್ಲ್ಡ್ ವೈಡ್ ಪ್ರಭಾಸ್ ಅವರ ʼಕಲ್ಕಿʼ ಸಿನಿಮಾ ಮೊದಲ ದಿನವೇ 177 ಕೋಟಿ ರೂ.ಗಳಿಕೆ ಕಂಡಿತು. ಹಾಗಂತ ಮೊದಲ ದಿನವೇ 100 ಕೋಟಿ ದಾಟಿದ ಸಿನಿಮಾದಲ್ಲಿ ʼಕಲ್ಕಿʼ ಮೊದಲಾಗಿ ನಿಲ್ಲುವುದಿಲ್ಲ. ವರ್ಲ್ಡ್ ವೈಡ್ ನಲ್ಲಿ ಮೊದಲ ದಿನವೇ 100ಕೋಟಿಗೂ ಅಧಿಕ ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಇಲ್ಲಿದೆ..
ಕಲ್ಕಿ 2898 ಎಡಿ:(Kalki 2898 AD): ಸುಮಾರು 700 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ನಾಗ್ ಅಶ್ವಿನ್ ಅವರ ʼ ಕಲ್ಕಿ 2898 ಎಡಿʼ ಸಿನಿಮಾ ಈಗಾಗಲೇ 500 ಕೋಟಿ ಕಮಾಯಿ ಮಾಡಿದೆ. 800 ಕೋಟಿಗೂ ಹೆಚ್ಚಿನ ಲೈಫ್ ಟೈಮ್ ಗಳಿಕೆಯನ್ನು ಚಿತ್ರ ಮಾಡಬಹುದೆಂದು ಹೇಳಲಾಗುತ್ತಿದೆ.
ಜೂ.27 ರಂದು ರಿಲೀಸ್ ಆದ ʼಕಲ್ಕಿʼ ಮೊದಲ ದಿನ ಭಾರತದಲ್ಲಿ 95 ಕೋಟಿ ರೂ.ಗಳಿಸಿತು. ವರ್ಲ್ಡ್ ವೈಡ್ 177 ಕೋಟಿ ರೂ.ಗಳಿಸಿತು.
ʼಆರ್ ಆರ್ ಆರ್ʼ(RRR): ರಾಜಮೌಳಿ ನಿರ್ದೇಶನದ ರಾಮ್ ಚರಣ್ ಹಾಗೂ ಜೂ.ಎನ್ ಟಿಆರ್ ಅಭಿನಯದ ʼಆರ್ ಆರ್ ಆರ್ʼ ಆಸ್ಕರ್, ಗೋಲ್ಡನ್ ಗ್ಲೋಬ್ ವೇದಿಕೆಯಲ್ಲಿ ಮಿಂಚಿದ ಭಾರತದ ಹೆಮ್ಮೆಯ ಸಿನಿಮಾ. ಸಿನಿಮಾ ಭಾರತೀಯ ಸಿನಿಪರೆದೆಯಲ್ಲಿ ಮಾತ್ರವಲ್ಲದೆ, ವಿದೇಶಿ ಚಿತ್ರಮಂದಿರದಲ್ಲೂ ಮೋಡಿ ಮಾಡಿತು.
ʼಆರ್ ಆರ್ ಆರ್ʼ ವಿಶ್ವದಾದ್ಯಂತ 1,200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತು. ಮೊದಲ ದಿನ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 223 ಕೋಟಿ ರೂ.ಗಳಿಸಿತು. ಇದು ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರವಾಗಿದೆ.
ಬಾಹುಬಲಿ-2 (Bahubali 2): ರಾಜಮೌಳಿ ಅವರ ʼಬಾಹುಬಲಿ-2ʼ ಚಿತ್ರ ಮಂದಿರದ ಜೊತೆ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಕೋಟಿ ಕೊಳ್ಳೆ ಹೊಡೆದು ಸದ್ದು ಮಾಡಿತು. ಪ್ರಭಾಸ್ ವೃತ್ತಿ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್ ಎಂದೇ ಹೇಳಲಾದ ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಇದುವರೆಗಿನ 217 ಕೋಟಿ ರೂ. ಗಳಿಸಿತು.
ʼಅನಿಮಲ್ʼ(Animal): ರಣ್ಬೀರ್ ಕಪೂರ್ ಅವರಿಗೆ ದೊಡ್ಡ ಹಿಟ್ ಕೊಟ್ಟ ʼಅನಿಮಲ್ʼ ಬಾಲಿವುಡ್‌ನಲ್ಲಿ ವಿವಾದದಿಂದಲೂ ಸುದ್ದಿಯಾಗಿತ್ತು. ಸಿನಿಮಾದ ಬಗ್ಗೆ ಪಾಸಿಟಿವ್ ನೆಗಟಿವ್ ಚರ್ಚೆ ಆಗಿಯೂ ಸಿನಿಮಾ ಆರಾಮವಾಗಿ ಕೋಟಿ ಕೋಟಿ ಬಾಕ್ಸ್ ಆಫೀಸ್ ಗಳಿಕೆಯನ್ನು ಮಾಡಿತು. ಸಂದೀಪ್ ರೆಡ್ಡಿ ವಂಗಾ ಅವರ ʼಅನಿಮಲ್ʼ ಮೊದಲ ದಿನವೇ 116 ಕೋಟಿ ರೂ.ಗಳಿಸಿತು.
ʼಕೆಜಿಎಫ್ -2ʼ (KGF-2): ರಾಕಿಂಗ್ ಸ್ಟಾರ್ ಯಶ್ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟವನ್ನು ತಂದುಕೊಟ್ಟ ʼಕೆಜಿಎಫ್ʼ ಸರಣಿಯ ಎರಡನೇ ಭಾಗ ಹತ್ತಾರು ದಾಖಲೆಗಳನ್ನು ಉಡೀಸ್ ಮಾಡಿದ್ದು ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಿ ಅತೀ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಇದು. ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದಂತೆಯೇ ಮೊದಲ ದಿನವೇ ವರ್ಲ್ಡ್ ವೈಡ್ 159 ಕೋಟಿ ರೂ. ಗಳಿಸಿತು.
ʼಸಲಾರ್ -1ʼ(Salaar: Part 1) : ಪ್ರಶಾಂತ್ ನೀಲ್ – ಪ್ರಭಾಸ್ ಅವರ ಬಿಗ್ ಪ್ರಾಜೆಕ್ಟ್ ʼಸಲಾರ್ʼ ಪ್ಯಾನ್ ಇಂಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಮೋಡಿ ಮಾಡಿದ್ದು ಗೊತ್ತೇ ಇದೆ. ಮಲ್ಟಿಸ್ಟಾರ್ಸ್ ಗಳ್ಳಳ ಈ ಸಿನಿಮಾ 700 ಕೋಟಿಗೂ ಹೆಚ್ಚಿನ ಗಳಿಕೆ ಕಂಡಿತು. ಮೊದಲ ದಿನವೇ ವರ್ಲ್ಡ್ ವೈಡ್ 158 ಕೋಟಿ ರೂ. ಗಳಿಸಿತು.
ʼಪಠಾಣ್ʼ, ʼಜವಾನ್ʼ: ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ ಕಂಬ್ಯಾಕ್ ತಂದುಕೊಟ್ಟ ಈ ಎರಡೂ ಸಿನಿಮಾಗಳಿಗೆ ಪ್ರೇಕ್ಷಕರಿಗೆ ಅಮೋಘ ರೆಸ್ಪಾನ್ಸ್ ಕೇಳಿಬಂದಿತ್ತು. ಬಹುಸಮಯದ ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟ ಶಾರುಖ್ ಆ ಬಳಿಕ ʼಡಂಕಿʼ(Dunki) ಸಿನಿಮಾ ನೀಡಿ ಮತ್ತೊಂದು ಹಿಟ್ ಕೊಟ್ಟರು. ʼಪಠಾಣ್ʼ(Pathaan) ಮೊದಲ ದಿನ 105 ಕೋಟಿ ಗಳಿಸಿತು. ʼಜವಾನ್ʼ(Jawan) 129 ಕೋಟಿ ರೂ. ಗಳಿಸಿತು.
ʼಸಾಹೋʼ(Saaho): ʼಬಾಹುಬಲಿʼಯಂತಹ ದೊಡ್ಡ ಹಿಟ್ ಕೊಟ್ಟ ಪ್ರಭಾಸ್ ಅವರ ʼಸಾಹೋʼ ಮೇಲೆ ಕೂಡ ಅಷ್ಟೇ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಮಾಸ್ ದೃಶ್ಯದಿಂದ ಸಿನಿಮಾ ಗಮನ ಸೆಳೆದಿತ್ತು. ಆದರೆ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿತ್ತು. ಈ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿರಲಿಲ್ಲ. ಮೊದಲ ದಿನ 130 ಕೋಟಿ ರೂ. ಗಳಿಸಿತು.
ʼಆದಿಪುರುಷ್ʼ (Adipurush): ಪ್ರಭಾಸ್ ವೃತ್ತಿ ಬದುಕಿನ ಮತ್ತೊಂದು ದೊಡ್ಡ ಸಿನಿಮಾ ಅದೇ ರೀತಿ ಅಷ್ಟೇ ದೊಡ್ಡ ಸೋಲಿನ ಸಿನಿಮಾವೆಂದರೆ ಅದು ʼಆದಿಪುರುಷ್ʼ. ಸುಮಾರು 700 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ಹಾಕಿದ ಬಜೆಟ್ ಬಿಡಿ, ಬಿಡುಗಾಸನ್ನು ಗಳಿಸಲೂ ಪರದಾಡುವ ಸ್ಥಿತಿಗೆ ಬಂದಿತ್ತು. ಕಳಪೆ ವಿಎಫ್ ಎಕ್ಸ್ ನಿಂದ ಚಿತ್ರ ಭಾರೀ ಟೀಕೆಗಳನ್ನು ಎದುರಿಸುವಂತಾಯಿತು. ನಿರೀಕ್ಷೆಯಲ್ಲಿ ಸಿನಿಮಾವನ್ನು ಮೊದಲ ದಿನ ಅಪಾರ ಪ್ರೇಕ್ಷಕರು ವೀಕ್ಷಿಸಿದ್ದರು. ಫಸ್ಟ್ ಡೇ ಸಿನಿಮಾ 127.50 ಕೋಟಿ ರೂ ಗಳಿಸಿತು.
ʼಲಿಯೋʼ(Leo): ದಳಪತಿ ವಿಜಯ್ – ಲೋಕೇಶ್ ಕನಕರಾಜ್ ಅವರ ʼಲಿಯೋʼ ಪ್ಯಾನ್ ಇಂಡಿಯಾದಲ್ಲಿ 500 ಕೋಟಿಗೂ ಹೆಚ್ಚು ಗಳಿಕೆ ಕಂಡು ಕಮಾಲ್ ಮಾಡಿತು. ಎಲ್ಲಿಯವರೆಗೆ ಅಂದರೆ ಮೊದಲ ದಿನವೇ ಸಿನಿಮಾ 100 ಕೋಟಿ ದಾಟಿತು. 142.75 ಕೋಟಿ ಗಳಿಕೆ ಕಾಣುವ ಮೂಲಕ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗೆ ಸೇರಿತು.