ಕೆಲವೊಂದು ಸಿನಿಮಾಗಳು ತಮ್ಮ ಕಾಸ್ಟಿಂಗ್, ಸಬ್ಜೆಕ್ಟ್ ಮೂಲಕ ಸಿನಿಮಂದಿಯ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಟೈಟಲ್ ಮೂಲಕವೇ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿಬಿಡುತ್ತವೆ. ಇತ್ತೀಚೆಗೆ ಹೀಗೆ ಸ್ಯಾಂಡಲ್‌ವುಡ್‌ನಲ್ಲಿ ತನ್ನ ಟೈಟಲ್ ಮೂಲಕವೇ ಸಿನಿಮಂದಿಯ ಮನ-ಗಮನ ಎರಡನ್ನೂ ಸೆಳೆಯುತ್ತಿರುವ ಸಿನಿಮಾ “ತೂತು ಮಡಿಕೆ’ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಜುಲೈ 08ರಂದು ಬಿಡುಗಡೆಯಾಗುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, ಇಲ್ಲಿ ಆಸೆಯ ಬೆನ್ನತ್ತಿ ಹೊರಟವರ ಕಥೆಯಿದೆ. ಅತಿ ಆಸೆಗೆ ಬಿದ್ದವರ ನೈಜ ಬದುಕಿನ ಚಿತ್ರಣವಿದೆ. ಅದೆಲ್ಲವನ್ನೂ ಕಾಮಿಡಿ, ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ತೆರೆದಿಡುತ್ತಿದೆ “ತೂತು ಮಡಿಕೆ’. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಷ್ಟು “ಲೂಪ್ ಹೋಲ್ಸ್’ ಇದ್ದೇ ಇರುತ್ತದೆ. ಅಂಥ “ಲೂಪ್ ಹೋಲ್ಸ್’ ಮುಚ್ಚಿಕೊಂಡಾಗಲಷ್ಟೇ ಆತ ಏನಾದರೂ ಸಾಧಿಸ ಬಲ್ಲ, ದೊಡ್ಡವನಾಗಬಲ್ಲ. ನಮ್ಮ ನಡುವೆಯೇ ಇರುವಂಥ ಇಂಥ ಸ್ವಾರ್ಥ, ದುರಾಸೆ, ವ್ಯಾಮೋಹ ಮೊದಲಾದ “ಲೂಪ್ ಹೋಲ್ಸ್’ಗಳ ನಡುವಿನ ಕಥೆಯೇ “ತೂತು ಮಡಿಕೆ’. ಇದು ಪ್ರತಿಯೊಬ್ಬನಿಗೂ ಕನೆಕ್ಟ್ ಆಗುವಂಥ ವಿಷಯ. ಸಾದಾಸೀದಾ ವಿಷಯವನ್ನು ಇಟ್ಟುಕೊಂಡು ನೋಡುಗರಿಗೆ ನೋಡುಗರ ಮನ ಮುಟ್ಟುವಂತೆ ತೆರೆಮೇಲೆ ಹೇಳುತ್ತಿದ್ದೇವೆ’ ಎನ್ನುವುದು “ತೂತು ಮಡಿಕೆ’ ಚಿತ್ರತಂಡದ ಮಾತು.
ಇದನ್ನೂ ಓದಿ:ಕೇದಾರನಾಥ ಸನ್ನಿಧಿಯಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ವಿಶೇಷ ಪೂಜೆ
“ಕಾಸಿನ ದುರಾಸೆಯಿಂದ ಅತ್ಯಮೂಲ್ಯ “ಆ್ಯಂಟಿಕ್ ಪೀಸ್’ ಒಂದರ ಹಿಂದೆ ಬೀಳುವ ಒಂದಷ್ಟು ಪಾತ್ರಗಳ ಸುತ್ತ ಏನೆಲ್ಲ ನಡೆಯುತ್ತದೆ. ಕೊನೆಗೆ ಈ “ಆ್ಯಂಟಿಕ್ ಪೀಸ್’ ಹಿಂದೆ ಬಿದ್ದವರಿಗೆ ದಕ್ಕುತ್ತದೆಯಾ? ಇಲ್ಲವಾ? ಹೀಗೆ, “ಆ್ಯಂಟಿಕ್ ಪೀಸ್’ ಹಿಂದೆ ಬಿದ್ದು “ಪೀಸ್’ (ಶಾಂತಿ) ಕಳೆದುಕೊಂಡವರ ಕಥೆ “ತೂತು ಮಡಿಕೆ’ಯಲ್ಲಿದೆ’ ಎಂದು ಚಿತ್ರದ ಕಥಾಹಂದರ ಬಿಚ್ಚಿಡುತ್ತದೆ ಚಿತ್ರತಂಡ.
ಆರಂಭದಲ್ಲಿ ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಬಳಿಕ “ಮೂಕ ವಿಸ್ಮಿತ’, “ಸಿಲಿಕಾನ್ ಸಿಟಿ’, “ಕಿಸ್’ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ, “ತೂತು ಮಡಿಕೆ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕೆ ಚಂದ್ರ ಕೀರ್ತಿ ಅವರೇ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ಪಾವನಾ ನಾಯಕಿಯಾಗಿದ್ದಾರೆ.