ಕೆಲವೊಂದು ಸಿನಿಮಾಗಳು ಬಿಡುಗಡೆಗೂ ಮುನ್ನವೇ ಭರ್ಜರಿ ಸೌಂಡು ಮಾಡುತ್ತವೆ. ಮೇಕಿಂಗ್, ಬಜೆಟ್, ಬೃಹತ್ ತಾರಾಗಣ, ನೂರಾರು ದಿನಗಳ ಚಿತ್ರೀಕರಣ, ಸ್ಟಾರ್ ಮಟ್ಟದ ತಾಂತ್ರಿಕ ಬಳಗ… ಹೀಗೆ ನಾನಾ ಕಾರಣಗಳಿಂದಾಗಿ ಸುದ್ದಿಯಾಗಿ ಬಾಕ್ಸ್ ಆಫೀಸ್ ಲೂಟಿ ಮಾಡಿದ ತಾಜಾ ಉದಾಹರಣೆಗಳಿವೆ. ರಾಜಮೌಳಿ ನಿರ್ದೇಶನದ ಬಾಹುಬಲಿ’ ಎರಡು ಚಾಪ್ಟರ್‌ಗಳಲ್ಲಿ, ಅದರಲ್ಲೂ ಬಹುಭಾಷೆಯಲ್ಲಿ ಬಿಡುಗಡೆಯಾಗಿತ್ತು. ಎರಡೂ ಚಾಪ್ಟರ್ ಸೂಪರ್ ಹಿಟ್ ಆಗಿದ್ದು, ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದರ ಬಗ್ಗೆ ಬಿಡಿಸಿ ಹೇಳಬೇಕಿಲ್ಲ.
ಇನ್ನು ಕನ್ನಡದ ಕೆಜಿಎಫ್ ಸಹ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ರಾಷ್ಟ್ರಾದ್ಯಂತ ಬಿಡುಗಡೆಯಾಗಿ, ದೇಶ-ವಿದೇಶಗಳಲ್ಲಿ ಹಿಟ್ ಎನಿಸಿಕೊಂಡು ನಾಯಕನಟ ಯಶ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿದ್ದನ್ನು ಯಾರೂ ಮರೆಯುವಂತಿಲ್ಲ. ಈಗ ಕೆಜಿಎಫ್ ಎರಡನೇ ಚಾಪ್ಟರ್ ಸಹ ಇದೇ ವರ್ಷ ಬಿಡುಗಡೆಯಾಗುತ್ತಿದೆ. ಇಷ್ಟೆಲ್ಲಾಪೀಠಿಕೆ ಹಾಕಲು ಕಾರಣವೇನೆಂದರೆ, ಕನ್ನಡದಲ್ಲಿ ಮತ್ತೂಂದು ಬೃಹತ್ ತಾರಾಗಣದ ಸಿನಿಮಾವೊಂದು ಬರುತ್ತಿದೆ. ಬಜೆಟ್, ಮೇಕಿಂಗ್, ಇನ್ನೂರು ದಿನಗಳ ಕಾಲ ಶೂಟಿಂಗ್… ಹೀಗೆ ಅನೇಕ ವಿಶೇಷತೆಗಳನ್ನು ಹೊತ್ತುಬರುತ್ತಿರುವ ಚಿತ್ರ ತೋತಾಪುರಿ’.
ಹೌದು. ಜಗ್ಗೇಶ್ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ವಿಜಯಪ್ರಸಾದ್ ನಿರ್ದೇಶನವಿದೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದಿರುವ “ನೀರ್ದೋಸೆ’ ಹಿಟ್ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಸಿನಿ ಮಾರುಕಟ್ಟೆಗೆ ತೋತಾಪುರಿ’ ತರಲು ಸಜ್ಜಾಗಿದೆ ಚಿತ್ರತಂಡ. ವಿಶೇಷವೆಂದರೆ ತೋತಾಪುರಿ ಎರಡು ಚಾಪ್ಟರ್‌ಗಳಲ್ಲಿ ತೆರೆಕಾಣಲಿದೆ. ಮತ್ತೂಂದು ವಿಶೇಷವೆಂದರೆ ಶೂಟಿಂಗಿಗೂ ಮುನ್ನವೇ ಎರಡು ಚಾಪ್ಟರ್‌ಗಳಲ್ಲಿ ಶೂಟ್ ಮಾಡಬೇಕೆಂದು ಸ್ಕ್ರಿಪ್ಟ್ ಬರೆದು ಚಿತ್ರೀಕರಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ. ಸುಮಾರು 150ಕ್ಕು ಹೆಚ್ಚು ದಿನಗಳ ಕಾಲ ಚಿತ್ರೀಕರಣ, ಜಗ್ಗೇಶ್, ಡಾಲಿ’ ಧನಂಜಜ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಅದಿತಿ ಪ್ರಭುದೇವ, ಹೇಮಾದತ್ ಹಾಗೂ ಪ್ರಮುಖ ಕಲಾವಿದರೆಲ್ಲಾ ಸೇರಿದಂತೆ ಇಡೀ ಚಿತ್ರದಲ್ಲಿ 80ಕ್ಕೂ ಹೆಚ್ಚು ಮಂದಿ ನಟಿಸಿದ್ದಾರೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ನಿರ್ಮಾಪಕ ಕೆ.ಎ.ಸುರೇಶ್. ಹಾಗೆ ನೋಡಿದರೆ ಕಾಮಿಡಿ ಸಿನಿಮಾಗಳ ಇತಿಹಾಸದಲ್ಲೇ ಇದು ಮೊದಲು ಎನ್ನಬಹುದು. ಒಂದೇ ಬಾರಿ ಎರಡೂ ಚಾಪ್ಟರ್‌ಗಳ ಶೂಟಿಂಗ್ ಮಾಡಿ, ಇತಿಹಾಸ ಬರೆಯಲು ಮುಂದಾಗಿದೆ ಚಿತ್ರತಂಡ.
ಮೈಸೂರು, ಶ್ರೀರಂಗಪಟ್ಟಣ, ಬನ್ನೂರು, ಕೂರ್ಗ್ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಎರಡನೇ ಚಾಪ್ಟರ್‌ನ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಉಳಿಸಿಕೊಂಡಿರುವ “ತೋತಾಪುರಿ’ ತಂಡ, ಕೋವಿಡ್ ಸದ್ದು ಕಡಿಮೆಯಾದ ಬಳಿಕ ಅದನ್ನೂ ಪೂರೈಸಲಿದೆ. ಸಿನಿಮಾದ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡದೇ ಸತತವಾಗಿ ಚಿತ್ರೀಕರಣ ದಲ್ಲಿ ತೊಡಗಿಸಿ ಕೊಂಡಿದ್ದ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಮಗ್ನವಾಗಿದೆ.
ಎರಡೂ ಚಾಪ್ಟರ್ ಶೂಟಿಂಗ್ ಮುಗಿದ ಬಳಿಕ ಒಂದೇ ಸಾರಿ ಎರಡೂ ಚಾಪ್ಟರ್‌ಗಳ ಸೆನ್ಸಾರ್ ಮಾಡಿಸಿ ಮೂರು ತಿಂಗಳ ಅಂತರದಲ್ಲಿ ಸಿನಿಮಾವನ್ನು ಚಾಪ್ಟರ್-1 ಮತ್ತು ಚಾಪ್ಟರ್-2 ಬಿಡುಗಡೆ ಮಾಡಲು ಅಲೋಚಿಸಿದೆ “ತೋತಾಪುರಿ’ ಟೀಂ. ಚಿತ್ರದ ತಾಂತ್ರಿಕಬಳಗದಲ್ಲಿ ರಾಜ್ಯ ಪ್ರಶಸ್ತಿ ವಿಜೇತರೇ ಇದ್ದಾರೆ ಎಂಬುದು ಗಮನಾರ್ಹ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸುರೇಶ್ ಅರಸ್ ಸಂಕಲನ, ನಿರಂಜನ್ ಬಾಬು ಕ್ಯಾಮೆರಾ ಕೆಲಸ ಈ ಚಿತ್ರಕ್ಕಿದೆ.