ಬೆಳೆಯುತ್ತಿರುವ ತಂತ್ರ ಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶವೂ ಹೆಚ್ಚುತ್ತಿದೆ. ಮುಖ್ಯವಾಗಿ ಪ್ರತಿಯೊಂದು ವಸ್ತುವಿನ ತಯಾರಿಯಲ್ಲಿಬೇಕಾಗುವ ಟೂಲ್‌ಗಳು ಇಂದು ಹೆಚ್ಚು ಪ್ರಾಮುಖ್ಯ ಪಡೆಯುತ್ತಿವೆ. ಹೀಗಾಗಿ ಟೂಲ್ ಮೇಕರ್‌ಗಳಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಟೂಲ್ ಆ್ಯಂಡ್ ಡೈ ಮೇಕಿಂಗ್ ಎನ್ನುವುದು ಈಗ ಕಲಿಕೆಯ ಒಂದು ವಿಷಯವಾಗಿ ಪರಿಗಣಿಸಲ್ಪಟ್ಟಿದ್ದರಿಂದ ಇದರ ಕಲಿಕೆಗೆ ರಾಜ್ಯ, ದೇಶದ ವಿವಿ ಧೆಡೆ ಡಿಪ್ಲೊಮಾ, ಎಂಜಿನಿಯರಿಂಗ್ ಕೋರ್ಸ್‌ಗಳಿವೆ. ಅಪಾರ ಉದ್ಯೋಗಾವಕಾಶವನ್ನು ಹೊಂದಿರುವ ಈ ಕೋರ್ಸ್‌ಗೆ ಪ್ರಸ್ತುತ ಬೇಡಿಕೆಯೂ ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ತಂತಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ವಿಸ್ತರಣೆಯಾಗುತ್ತಿದ್ದು, ಅದಕ್ಕೆ ತಕ್ಕಂತೆಯೇ ಕಲಿಕೆಗೂ ಹಲವು ಅವಕಾಶಗಳು ಸೃಷ್ಟಿಯಾಗುತ್ತಿವೆ. ಮುಖ್ಯವಾಗಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವಾರು ಕೋರ್ಸ್‌ಗಳಿದ್ದು, ಉದ್ಯೋಗಾವಕಾಶವೂ ವಿಪುಲವಾಗಿದೆ.
ಯಾವುದೇ ಒಂದು ವಸ್ತು ಗುಣಮಟ್ಟದ್ದಾಗಿರಲು, ಕಡಿಮೆ ಸಮಯದಲ್ಲಿ ಉಪಯೋಗ ಮಾಡಲು ಅದಕ್ಕೆ ಟೂಲ್ ಅತೀ ಮುಖ್ಯವಾಗಿರುತ್ತದೆ. ಈ ರೀತಿಯ ಟೂಲ್ ತಯಾರಿಸಲು ಕಲಿಸುವಂತಹ ಕೋರ್ಸ್‌ಗಳಿವೆ. ಅದರಲ್ಲಿ ಪ್ರಮುಖ ಕೋರ್ಸ್ ಅಂದರೆ ಅದು ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್.
ಕೆಲವು ವರ್ಷಗಳಿಂದ ಈ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಏಕೆಂದರೆ, ಕೋರ್ಸ್ ಕಲಿತ ಮಂದಿಗೆ ಉದ್ಯೋಗ ಇಲ್ಲ ಎಂದಾಗುವುದು ಕಡಿಮೆ. ದೇಶದ ಪ್ರತೀ ರಾಜ್ಯದಲ್ಲ್ಲಿಯೂ, ಕೆಲವೊಂದು ವಿದೇಶಿ ಸಂಸ್ಥೆಗಳಲ್ಲಿಯೂ ಡಿಟಿಡಿಎಂ ಕಲಿತವರಿಗೆ ಉದ್ಯೋಗದ ಅವಕಾಶವಿದೆ. ಈ ಕೋರ್ಸ್‌ಗೆ ಇಷ್ಟೊಂದು ಬೇಡಿಕೆ ಬರಲು ಕಾರಣವೂ ಇದೆ. ನಾವು ದಿನನಿತ್ಯ ಕಾಣುವ ಮೊಬೈಲ್ ಫೋನ್, ಕೆಮರಾ, ಟಿ.ವಿ. ಫ್ಯಾನ್ ಅಲ್ಲದೇ ವಿಮಾನದ ಬಿಡಿಭಾಗಗಳು, ಆಸ್ಪತ್ರೆಯಲ್ಲಿ ಬಳಸುವ ಕೆಲವು ಅತ್ಯಾಧುನಿಕ ಉಪಕರಣಗಳು ಸೇರಿದಂತೆ ಇನ್ನಿತರ ಉತ್ಪನ್ನಗಳ ತಯಾರಿಕೆಯಲ್ಲಿ ಟೂಲ್ ಆ್ಯಂಡ್ ಡೈ ಮೇಕಿಂಗ್‌ನ ಅಗತ್ಯಇದೆ. ಹೀಗಾಗಿ ಈ ಕೋರ್ಸ್‌ಗೆ ದಿನದಿಂದ ದಿನಕ್ಕೆ ಬೇಡಿಕೆ ಏರುತ್ತಿದೆ.
ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ (ಡಿಟಿಡಿಎಂ) ಕೋರ್ಸ್‌ಗೆ ಎಸೆಸೆಲ್ಸಿ ಅಥವಾ ಐಟಿಐ ಉತ್ತೀರ್ಣರಾದಂತಹ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೋರ್ಸ್‌ಗೆ ಸರಕಾರ ಮತ್ತು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಮಾನ್ಯತೆ ನೀಡಿರುತ್ತದೆ. ಡಿಟಿಡಿಎಂ ಕೋರ್ಸ್ 3+1 ವರ್ಷ ಅವಧಿಯದ್ದಾಗಿದೆ. ಮೊದಲ 3 ವರ್ಷ ಆಯಾ ಸಂಸ್ಥೆಗಳಲ್ಲಿ ತರಬೇತಿ ಪಡೆಯಬೇಕು. ಅನಂತರ 4ನೇ ವರ್ಷ ವಿದ್ಯಾರ್ಥಿ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ತರಬೇತಿ ಪಡೆಯವುದು ಕಡ್ಡಾಯ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಆಕರ್ಷಕ ಸ್ಟೆ ೖಪೆಂಡ್ ಮತ್ತು ಇನ್ನಿತರ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ.
ಡಿಟಿಡಿಎಂ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಈ ವೇಳೆ ಮಹಿಳಾ ಅಭ್ಯರ್ಥಿಗಳು ಮತ್ತು ಹೈದರಾಬಾದ್ ಕರ್ನಾಟಕ ಭಾಗದ 371(ಜೆ) ವಿದ್ಯಾರ್ಥಿಗಳಿಗೆ ಮೀಸಲಾತಿ ಇರುತ್ತದೆ. ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಸರಕಾರದ ಮೆರಿಟ್-ಕಮ್-ರೋಸ್ಟರ್ ಪದ್ಧತಿಯಂತೆಯೇ ನಡೆಸಲಾಗುತ್ತದೆ. ಈ ತರಬೇತಿಯು ಮಾಮೂಲಿ ಡಿಪ್ಲೊಮಾ ಕೋರ್ಸ್‌ಗಳಿಗಿಂತ ವಿಭಿನ್ನವಾಗಿದೆ. ಇದರಲ್ಲಿ ಹಲವಾರು ವಿಶೇಷತೆಗಳನ್ನು ಹೊಂದಿರುತ್ತದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಪಡೆಯಲು ಕೂಡ ಅವಕಾಶವಿದೆ.
ಎಸೆಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ (ಡಿಟಿಡಿಎಂ) ತರಬೇತಿ ಪಡೆಯಬಹುದಾಗಿದೆ. ಡಿಟಿಡಿಎಂ ತರಬೇತಿಗೆ ಸೇರುವ ಅರ್ಹ ಅಭ್ಯರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶಿಕ್ಷಣ ಸಾಲದ ಸಹಾಯ ಕೂಡ ದೊರೆಯುತ್ತದೆ. ತರಬೇತಿಯ ಅನಂತರ ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಬಿಇ ವಿದ್ಯಾಭ್ಯಾಸ ಮಾಡಲು ಅವಕಾಶವೂ ಇದೆ.
•ನವೀನ್ ಭಟ್ ಇಳಂತಿಲ