“3 ಗಂಟೆ 30 ದಿನ 30 ಸೆಕೆಂಡ್’ ಚಿತ್ರದ ಟ್ರೇಲರ್ ಒಂದು ಕಡೆ ಯೂಟ್ಯೂಬ್‌ನಲ್ಲಿ ಒಳ್ಳೆಯ ಹಿಟ್ಸ್ ಪಡೆಯುತ್ತಿದೆ. ಈ ಮಧ್ಯೆ ಚಿತ್ರತಂಡದವರು, ಚಿತ್ರವನ್ನು ಜನವರಿ ಐದರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿದ್ದು, ಚಿತ್ರವು ರಾಜ್ಯಾದ್ಯಂತ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಈ ವಿಷಯವನ್ನು ಹೇಳುವುದಕ್ಕೆಂದೇ ನಿರ್ದೇಶಕ ಮಧುಸೂಧನ್, ತಮ್ಮ ಚಿತ್ರತಂಡದವರೊಂದಿಗೆ ಬಂದು, ಟ್ರೇಲರ್ ಬಿಡುಗಡೆ ಮಾಡುವ ನೆಪದಲ್ಲಿ ಚಿತ್ರದ ಬಗ್ಗೆ ಮಾತನಾಡಿದರು. ಈ ಚಿತ್ರವನ್ನು ಮಧುಸೂಧನ್ ಅವರು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನೂ ಅವರೇ ರಚಿಸಿದ್ದಾರೆ. ಹಾಗಾಗಿ ಅವರಿಗೆ ಅಂದು ಮಾತನಾಡುವುದಕ್ಕೆ ಸಾಕಷ್ಟು ವಿಷಯ ಇತ್ತು.
“ಚಿತ್ರದ ಶೇ 70ರಷ್ಟು ಭಾಗದಲ್ಲಿ ನಾಯಕ, ನಾಯಕಿ ಕಾಣಿಸಿಕೊಂಡಿದ್ದಾರೆ. ಇದೊಂದು ಟೂ ಡೈಮೆನ್ಶನ್ ಸಿನಿಮಾ. ಇಲ್ಲಿ ಪಾತ್ರಗಳು ಮಾತನಾಡುತ್ತಿರುವ ಸಂದರ್ಭದಲ್ಲಿಯೇ, ಅದಕ್ಕೆ ಪರ್ಯಾಯವಾಗಿ ಇನ್ನೊಂದು ಕಥೆ ಸಾಗುತ್ತಿರುತ್ತದೆ. ಪ್ರೇಕ್ಷಕರಿಗೆ ಒಂದೇ ಒಂದು ದೃಶ್ಯವೂ ಊಹಿಸುವುದಕ್ಕೆ ಆಗುವುದಿಲ್ಲ. ಎರಡು ವಿರುದ್ಧ ಮನಸ್ಸುಗಳು ಕಥೆಯನ್ನು ಯಾವ ರೀತಿ ಮುನ್ನಡೆಸುತ್ತದೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆ. ಎಮೋಷನ್‌ಗಳು ಗುಪ್ತಗಾಮಿನಿಯಾಗಿ ಚಿತ್ರದುದ್ದಕ್ಕೂ ಹರಿಯುತ್ತಿರುತ್ತದೆ’ ಎಂದು ಮಧುಸೂಧನ್ ಹೇಳಿಕೊಂಡರು.
“ಮುದ್ದು ಮನಸೇ’ ಬಿಡುಗಡೆಯಾಗಿ ಸುಮಾರು ಎರಡು ವರ್ಷಗಳ ನಂತರ “3 ಗಂಟೆ 30 ದಿನ 30 ಸೆಕೆಂಡ್’ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ ಅರುಣ್ ಗೌಡ. ಅವರಿಗೆ ಈ ಚಿತ್ರದಲ್ಲಿ ನುರಿತ ಕಲಾವಿದರೊಂದಿಗೆ ನಟಿಸಿರುವುದು ಬಹಳ ಖುಷಿ ತಂದಿದೆಯಂತೆ. “ಚಿತ್ರದ ಹಾಸ್ಯ ದೃಶ್ಯವನ್ನು ಐದು ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಸೆನ್ಸಾರ್‌ನವರು ಅದನ್ನು ತೆಗೆದುಹಾಕಿದ್ದಾರೆ. ಇಂತಹ ದೃಶ್ಯಗಳು ಸಾಕಷ್ಟು ಇವೆ. ಇದೊಂದು ಸಂಗೀತಮಯ ಚಿತ್ರ. ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಸ್ವಮೇಕ್ ಚಿತ್ರವೆಂದು ಹೇಳಲು ಸಂತೋಷವಾಗುತ್ತದೆ. ಸೆಟ್‌ನಲ್ಲಿ ನಿರ್ದೇಶಕರು ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಅಂದುಕೊಂಡಂತೆ ಕಲಾವಿದರಿಂದ ನಟನೆಯನ್ನು ತೆಗೆಸಿಕೊಳ್ಳುತ್ತಿದ್ದರು’ ಎಂದರು ಅರುಣ್ ಗೌಡ.
ಇನ್ನು ಸುಧಾರಾಣಿ ಅವರು ಬಹುಕಾಲದ ನಂತರ ದೇವರಾಜ್ ಅವರೊಂದಿಗೆ ನಟಿಸಿದ್ದಾರಂತೆ. ಇಲ್ಲಿ ಹಾಡುಗಳಿಗಿಂಥ 35 ದಿನಗಳ ಕಾಲ ವಿಶೇಷವಾಗಿ ಹಿನ್ನಲೆ ಸಂಗೀತ ಕೆಲಸ ಮಾಡಿದ್ದು ಮರೆಯಲಾಗದ ಅನುಭವ ಎಂದರು ಶ್ರೀಧರ್ ಸಂಭ್ರಮ್. ಇನ್ನು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡುತ್ತಿರುವ ಚಂದ್ರಶೇಖರ್ ಅವರು ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.