ಆಗ ನಾನು ಮಲೇರಿಯಾ ಜ್ವರದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ಸೇರಿದ್ದೆ. ನನ್ನ ಅಜ್ಜ ಮತ್ತು ತಮ್ಮ ಆರೈಕೆಗೆ ನನ್ನ ಜೊತೆಗಿದ್ದರು. ನನ್ನ ಪಕ್ಕದ ಬೆಡ್ಡಿನಲ್ಲಿ ಚಿಕನ್‌ಗುನ್ಯಾ ಕಾಯಿಲೆಗೆ ತುತ್ತಾಗಿ ಒಬ್ಬ ರೋಗಿ ಚಿಕಿತ್ಸೆ ಪಡೆಯುತ್ತಿದ್ದ. ಮೈಕೈ ಗಂಟುಗಳಲ್ಲಿ ನೋವು ನುಸುಳಿ, ಆತ ವಿಪರೀತ ಕಷ್ಟಪಡುತ್ತಿದ್ದ.
ಅವನು ಬಡಕೂಲಿ ಕಾರ್ಮಿಕ. ಸಪೂರಕ್ಕಿದ್ದ, ಪಾಪ. ಹೇಗೊ ಸಾಲಸೋಲ ಮಾಡಿ, ಹಣ ಹೊಂದಿಸಿಕೊಂಡು ಆಸ್ಪತ್ರೆಗೆ ಸೇರಿದ್ದ. ಹೆಂಡತಿ- ಮಕ್ಕಳು ಅವನನ್ನು ನೋಡಿಕೊಳ್ಳುತ್ತಿದ್ದರು. ಅವನ ಜ್ವರದ ತೀವ್ರತೆ ಎಷ್ಟಿತೆಂದರೆ ಎರಡೂ¾ರು ರಗ್ಗುಗಳನ್ನು ಹೊದ್ದರೂ ಜ್ವರದ ಬಳಲಿಕೆಯಿಂದ ಕಂಪಿಸುತ್ತಿದ್ದ. ಆ ಸಮಯಕ್ಕೆ ಒಂದು ´ೋನ್ ರಿಂಗಣಿಸಿತು. ಯಾರದ್ದು ಎಂದು ತಿರುಗಿ ನೋಡಿದರೆ, ಆ ರೋಗಿಯದ್ದೇ ಆಗಿತ್ತು. ಬಹುಶಃ ಸಂಬಂಧಿಕರು ತನ್ನ ಅರೋಗ್ಯ ವಿಚಾರಿಸುವುದಕ್ಕೆ ಕರೆ ಮಾಡಿರಬಹುದೆಂದು ಆ ರೋಗಿಯ ಊಹೆಯಾಗಿತ್ತು. ಅಷ್ಟೂ ರಗ್ಗುಗಳನ್ನು ಹೊದ್ದಿದ್ದ ಆತ ಫೋನನ್ನು ಹುಡುಕಲು ಪರದಾಡುತ್ತಿದ್ದ. ಕೊನೆಗೂ ಹೊರಳಾಡಿ, ಒದ್ದಾಡಿ ಹೇಗೋ ತಡಕಾಡಿದ ಮೇಲೆ ಕೈಗೆ ಮೊಬೈಲ್ ಸಿಕ್ಕಿತು.
ಆ ಕಡೆಯಿಂದ ಒಂದು ಮುದ್ದಾದ ಧ್ವನಿ. ಮುದ್ದು ದನಿ ಅಂದ್ರೆ ಹುಡುಗಿಯದ್ದೇ ಅಲ್ವೇ? “ಡಿಯರ್ ಕಸ್ಟಮರ್, ನಿಮ್ಮ ಸಿಮ್‌ಗೆ ಡಬಲ್ ಧಮಾಕಾ ಇದೆ. ಫುಲ್ ಟಾಕ್‌ಟೈಮ್ ಆಫರ್ ಕೊಡುತ್ತಿದ್ದೇವೆ, ಇಂದೇ ರೀಚಾರ್ಜ್ ಮಾಡಿಕೊಳ್ಳಿ’ ಎಂದು ಆಕೆ ಉಲಿದಳು. ಈತನ ಪಿತ್ತ ನೆತ್ತಿಗೇರಿತು. ಕರೆ ಕಟ್ ಮಾಡಿದ. ಫೋನು ಮಾಡಿದ ಕಂಪನಿಗೆ, “ಈಗಾಗಲೇ ಡಬಲ್ ಡಬಲ್ ಬೆಡ್‌ಶೀಟ್ ಹೊದ್ದುಕೊಂಡು, ಫುಲ… ಪ್ಯಾಕಿಂಗ್ ಆಗಿ ಚಳಿಜ್ವರದಿಂದ ಸ್ವಿಚ್xಆಫ್ ಆಗಿದ್ದೀನಿ, ಇವರದ್ದೊಳ್ಳೇ…’ ಎಂದು ಬಯ್ಯತೊಡಗಿದ. ಕೊನೆಗೆ ಚಳಿ ಜೋರಾಗಿ, ಮತ್ತೆ ಮುಸುಕಿ ಹಾಕಿಕೊಂಡು ಮಲಗಿದ.
ಇದನ್ನೆಲ್ಲ ಹತ್ತಿರದಿಂದ ಗಮನಿಸುತ್ತಿದ್ದ ನನಗೆ, ಅವನ ಪರಿಸ್ಥಿತಿ ನೋಡಿ ನಗಬೇಕೋ, ಅಳಬೇಕೊ ಒಂದೂ ತಿಳಿಯಲಿಲ್ಲ. ಒಟ್ಟಿನಲ್ಲಿ ಆ ವ್ಯಕ್ತಿಯ ಅಸಹಾಯಕತೆ ಮತ್ತು ಮುಗ್ಧತೆ ಈಗಲೂ ನನ್ನನ್ನು ಕಾಡುತ್ತಿದೆ.
– ಅಂಬಿ ಎಸ್. ಹೈಯ್ನಾಳ್