Advertisement
“ಗೋಕಾಕ ವರದಿ ಜಾರಿಗೆ ಬರಲಿ’ ಎಂಬ ಘೋಷಣೆಯೊಂದಿಗೆ ಅಖೀಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಧಾರವಾಡದಲ್ಲಿ ಸ್ಥಾಪಿತವಾದದ್ದು 1982, ಮಾ.23ರಲ್ಲಿ. ಅದರ ವತಿಯಿಂದ ಮೊದಲ ಬಹಿರಂಗ ಹೋರಾಟ ಪ್ರಾರಂಭವಾದದ್ದು 1982, ಏ.2ರಂದು. ಇದುವರೆಗೂ ದಾಖಲಾದ ವಿಷಯವಿದು. ಆದರೆ ಇದಕ್ಕೆ ಎರಡು ತಿಂಗಳ ಮೊದಲೇ ಅಂದರೆ 1982, ಫೆ.15ರಂದು “ಗೋಕಾಕ ವರದಿ ಜಾರಿಗೆ ತರುವ ಸಲುವಾಗಿ ಹೋರಾಟಕ್ಕೆ ಸನ್ನದ್ಧರಾಗಿ. ನಿಮ್ಮ ನರನಾಡಿಗಳಲ್ಲಿ ಪೌರುಷವಿದ್ದರೆ ಕೂಡಲೇ ಸಿದ್ಧರಾಗಿ. ಕನ್ನಡಕ್ಕೆ ಅಗ್ರಪೂಜೆಯೆಂಬುದನ್ನು ಸಾಬೀತುಪಡಿಸಿ. ಜಾತಿ, ಮತ, ಪಂಥ ಭೇದಗಳನ್ನು ಬದಿಗೊತ್ತಿ ಉಗ್ರ ಹೋರಾಟ ಪ್ರಾರಂಭಿಸಿ’ ಎಂದು ತಮ್ಮ ವೀರವಾಣಿಯಿಂದ ಕರೆ ನೀಡಿ ಹುರಿದುಂಬಿಸಿದವರು.
Related Articles
Advertisement
ಕೆಲ ಹೊತ್ತಿನ ನಂತರ “ಇದು ಚಲನಚಿತ್ರವಾದರೆ ಅತ್ಯಂತ ಯಶಸ್ವಿಯಾಗುತ್ತದೆ. ರಾಜೀವಪ್ಪನ ಪಾತ್ರ ರಾಜಕುಮಾರ ಅವರೇ ಮಾಡಬೇಕು. ಅವರ ಪತ್ನಿಯಾಗಿ ಭಾರತಿ, ರಾಜೀವಪ್ಪನ ಹಿತೈಷಿಯಾಗಿ ಬಾಲಕೃಷ್ಣ ಇರಬೇಕು. ಅಂದರೆ ಖಂಡಿತ ಈ ಚಿತ್ರ ಯಶಸ್ವಿಯಾಗುತ್ತದೆ’ ಎಂದು ಪಾತ್ರ ಹಂಚಿಕೆ ಮಾಡಿದ್ದರು. ಅದಾದ ಮೇಲೆ ಎರಡೇ ವರ್ಷದಲ್ಲಿ “ಬಂಗಾರದ ಮನುಷ್ಯ’ ಚಲನಚಿತ್ರವಾಗಿ ಬಂತು. ಶ್ರೀಗಳು ಹೇಳಿದ ಪಾತ್ರದಾರಿಗಳೇ ಚಿತ್ರದಲ್ಲಿದ್ದರು!
ಅದಾಗಲೇ ತಮ್ಮ ಅಸ್ಖಲಿತ ವಾಣಿಯಿಂದ ಪ್ರಸಿದ್ಧರಾಗಿದ್ದ ಅವರಿಗೆ ಅದೊಂದು ಸಲ ಗದುಗಿನ ಶ್ರೀ ತೋಂಟದಾರ್ಯ ಮಠದಿಂದ ಕರೆ ಬಂತು. ಗದುಗಿನ ಕೆಲ ತರುಣರು ಸೇರಿ ಸ್ಥಾಪಿಸಿದ್ದ “ವೀರಶೈವ ಪ್ರಗತಿಶೀಲ ಯುವಕ ಸಂಘ’ ಶಿವಾನುಭವ ಕಾರ್ಯಕ್ರಮ ಪ್ರಾರಂಭಿಸಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಬೇಕೆಂದು ಕೇಳಿಕೊಳ್ಳಲಾಗಿತ್ತು. ಅವರು ಒಟ್ಟು ಐದು ವಾರಗಳ ಕಾಲ “ನಡೆ ಕಲಿಸಿದ ಬಸವಣ್ಣ’ ವಿಷಯ ಕುರಿತು ಅಮೋಘವಾದ ಉಪನ್ಯಾಸ ನೀಡಿದರು. ಇಡೀ ಭಕ್ತಸಮೂಹ ಮೋಡಿಗೊಳಗಾಗಿತ್ತು. ಭಾಷಣವನ್ನು ಭಕ್ತರಷ್ಟೇ ಬೆರಗಾಗಿ ಕೇಳುತ್ತಿದ್ದ ತೋಂಟದಾರ್ಯಮಠದ ಅಂದಿನ ಜಗದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಶಿವಾನುಭವ ಕಾರ್ಯಕ್ರಮಗಳ ಉಪಕ್ರಮ ಪ್ರಾರಂಭಿಸಿದ ಶ್ರೀ ಪಂಚಾಕ್ಷರಯ್ಯ ಸಂಶಿಮಠರನ್ನು ಬಳಿಗೆ ಕರೆದು “”ಈ ಮರಿ ಶ್ಯಾಣ್ಯಾ ಕಾಣತೈತೋ, ನಮ್ಮ ಮಠಕ್ಕ ಈ ಮರಿ ಆಗಬೇಕು ನೋಡು” ಎಂದರು. ಸ್ವಾಮಿ ಸಿದ್ದಲಿಂಗನೇ ಈ ಮಾತನ್ನು ಶ್ರೀಗಳಿಂದ ಆಡಿಸಿರುವನೆಂದು ಭಾವಿಸಿದ ಸಂಶಿಮಠರು ಭಕ್ತರೆದುರು ಶ್ರೀಗಳ ಮಾತನ್ನು ಪ್ರಸ್ತಾಪಿಸಿದರು. ಕಣ್ಣೀರು ತುಂಬಿಕೊಂಡೇ ಶಾಂತವೀರ ಶ್ರೀಗಳು ಸಿದ್ದರಾಮದೇವರನ್ನು ಬಿಟ್ಟುಕೊಡಲು ಒಪ್ಪಿದರು. 1974, ಜೂ.29ರಂದು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ 19ನೆಯ ಜಗದ್ಗುರುಗಳಾಗಿ ಶ್ರೀಗಳು ಪೀಠಾರೋಹಣ ಮಾಡಿ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳಾದರು.
ಕೃಷಿ ಕಾಯಕ ಯೋಗಿ: 1974 ಶ್ರೀಗಳು ಪೀಠಾರೋಹಣ ಮಾಡಿದ ವರ್ಷ. ಗದುಗಿನಲ್ಲಿ ಹಾಳುವಿದ್ದ ಮಠ, ಡಂಬಳದಲ್ಲಿ ಪಾಳು ಬಿದ್ದ ಭೂಮಿ. ಇದು ಶ್ರೀಮಠದ ಆಸ್ತಿ, ಗದುಗಿನಿಂದ ಡಂಬಳ 22 ಕಿಮೀ ದೂರದಲ್ಲಿದೆ. ಶ್ರೀಗಳು ಪೀಠದ ಜಗದ್ಗುರುಗಳೇನೋ, ಬಸ್‌ನಲ್ಲಿ ಹೋಗುವಂತಿಲ್ಲ, ಸ್ಥಾನ ಗೌರವ. ಬಾಡಿಗೆ ಕಾರು ಮಾಡುವಂತೆಯೂ ಇಲ್ಲ. ಹಣದ ಕೊರತೆ. ಕೊರತೆ ಇದ್ದದ್ದು ಹಣಕ್ಕೆ ವಿನಃ ಛಲಕ್ಕಲ್ಲವಲ್ಲ. ಕಾರು ಇರದಿದ್ದರೇನಾಯ್ತು, ಶಿವ ಕೊಟ್ಟ ಕಾಲು ಇಲ್ಲವೇ? ಸರಿ ನಡದೇ ಬಿಟ್ಟರು ಡಂಬಳಕ್ಕೆ ಪಾದಯಾತ್ರೆಯ ಹೆಸರಿನಲ್ಲಿ. ಶ್ರೀಗಳು ಡಂಬಳಕ್ಕೆ ಬಂದವರು ಸುಮ್ಮನೆ ಕೂಡಲಿಲ್ಲ. ಬೆಳಗ್ಗೆ ಎದ್ದು ಲಿಂಗಯ್ಯನಿಗೆ ನೀರೆರೆದು ರೈತರಗಿಂತ ಮುನ್ನವೇ ಹೊಲಗಳೆಡೆಗೆ ನಡೆದರು. ಒಟ್ಟು 61 ಎಕರೆಯಷ್ಟು ವಿಸ್ತಾರವಾದ ಭೂಮಿ. ಆದಾಗ್ಯೂ ವರ್ಷಕ್ಕೆ ಎಂಟು ಚೀಲದಷ್ಟಾದರೂ ಕಾಳುಕಡಿಯಿಲ್ಲ. ಶ್ರೀಗಳು ಧೃತಿಗೆಡಲಿಲ್ಲ. ತೋಳಿನಲ್ಲಿ ಕಸುವು ಇತ್ತು. ಕಣ್ಣೆದುರಿಗೆ ಬಂಗಾರದ ಮನುಷ್ಯ ಕಾದಂಬರಿಯ ಆದರ್ಶವಿತ್ತು, ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆಯಲೇಬೇಕೆಂದು ಸಂಕಲ್ಪ ಮಾಡಿಕೊಂಡರು. ಅದು ವಜ್ರ ಸಂಕಲ್ಪವಾಗಿತ್ತು. ಮೊದಲ ವರ್ಷ ನಾಲ್ಕೈದು ಎಕರೆ ನಟ್ಟು ಕಡಿಸಿ, ಕರಕಿ ತೆಗೆದು ಹದಗೊಳಿಸಿದರು. ಆ ವರ್ಷ ಶೇಂಗಾ ಬಿತ್ತನೆ ಮಾಡಿದರು. ದ್ರಾಕ್ಷಿ, ಬಾಳೆ ಬೆಳೆದು ಇತರ ರೈತರನ್ನೂ ಪ್ರೋತ್ಸಾಹಿಸಿದರು. ಮಠದ ಮಕ್ಕಳೊಂದಿಗೆ ಬಾವಿ ತೋಡಿದರು.
ಕನ್ನಡ ಸರ್ವತೋಮುಖ ಚಿಂತನೆ: ಮೊದಲಿನಿಂದಲೂ ಕನ್ನಡಪರ ಚಿಂತನೆಯನ್ನು ಧರ್ಮಚಿಂತನೆಯೆಂದು ಭಾವಿಸುತ್ತಿದ್ದ ಶ್ರೀಗಳು ಕನ್ನಡತ್ವದ ವಿಕಾಸದ ಬಗ್ಗೆ ಕನ್ನಡಿಗರನು ಎಚ್ಚರಿಸುತ್ತ, ವಿವೇಕ ಹೇಳುತ್ತ, ಹುರಿದುಂಬಿಸುತ್ತಿದ್ದರು. ಕನ್ನಡದ ಪ್ರಶ್ನೆ ಬಂದಾಗ ಶ್ರೀಗಳು ಯಾರನ್ನೂ ಬಿಟ್ಟವರಲ್ಲ. ಈ ಹಿಂದೆ ಗೋಕಾಕ ವರದಿ ಜಾರಿಗೆ ಸಂಬಂಧಿಸಿದಂತೆ ಮೀನಮೇಷ ಎಣಿಸುತ್ತಿದ್ದ ಗುಂಡೂರಾಯರ ಸರಕಾರವನ್ನು ಟೀಕಿಸಿದಂತೆಯೇ ಕನ್ನಡ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸದ ಜೆ.ಎಚ್.ಪಟೇಲರ ಸರಕಾರವನ್ನೂ ತರಾಟೆ ತೆಗೆದುಕೊಂಡಿದ್ದರು. “ಜನಪ್ರತಿನಿಧಿಗಳಿಗೆ ಕನ್ನಡತ್ವದ ಪ್ರಜ್ಞೆ ಇರಬೇಕು. ಅವರಿಗೇ ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ, ಕನ್ನಡದ ಭವ್ಯ ಪರಂಪರೆಯ ಬಗ್ಗೆ ಅರಿವಿರದೇ ಹೋದರೆ ಅಂಥವರು ಕನ್ನಡದ ಬಗ್ಗೆ ಏನು ಕೆಲಸ ಮಾಡಿಯಾರು?’ ಎಂದು ನೇರವಾಗಿ ಪ್ರಶ್ನಿಸುತ್ತಿದ್ದರು.
ಧರ್ಮ-ದೇವರಿಗಿಂತಲೂ ಭಾಷೆ ಶಕ್ತಿಶಾಲಿ: ಭಾಷೆಯಿದ್ದರೆ ಧರ್ಮ, ಭಾಷೆಯಿದ್ದರೆ ದೇವರ ಬಗ್ಗೆ ತಿಳಿವಳಿಕೆ. ಅದು ಯಾವ ರೂಪದ್ದೇ ಆಗಿರಲಿ ಭಾಷೆಯೇ ಇಲ್ಲದಿದ್ದಲ್ಲಿ ದೇವರೂ ಇಲ್ಲ, ಧರ್ಮವೂ ಇಲ್ಲ, ಅಂತೆಯೇ ತೋಂಟದಾರ್ಯ ಶ್ರೀಗಳು ಧರ್ಮ, ದೇವರಿಗಿಂತಲೂ ಭಾಷೆ ಶಕ್ತಿಶಾಲಿ ಎನ್ನುತ್ತಿದ್ದರು. ಕನ್ನಡದಲ್ಲಿ “ಗರುಡ’ ಪರಂಪರೆ ಇತ್ತು. ರಾಜನಿಗಾಗಿ ತಮ್ಮ ಪ್ರಾಣವನ್ನೇ ಬಲಿ ನೀಡುತ್ತಿದ್ದರು ಗರುಡರು. ಈಗ ರಾಜರುಗಳಿಲ್ಲ, ಇರುವುದು ಕನ್ನಡ ಸಾಮ್ರಾಜ್ಯ ಮಾತ್ರ. ಆ ಕಾರಣಕ್ಕಾಗಿ ನಾವು ಕನ್ನಡತಾಯಿಗೆ ಗರುಡರಂತೆ ಅರ್ಪಿಸಿಕೊಳ್ಳಬೇಕೆಂದು ಕರೆ ನೀಡಿದ್ದರು.
ನೆಲ ಜಲದ ಪ್ರಶ್ನೆ: ಕೃಷ್ಣೆಯ ಪ್ರಶ್ನೆಯೇ ಇರಲಿ, ಮಲಿನಗೊಳ್ಳುತ್ತಿರುವ ತುಂಗೆಯದೇ ಇರಲಿ ಅಥವಾ ಮರಾಠಿಗರ ಹದ್ದಿನ ಕಣ್ಣಿಗೆ ಬಿದ್ದಿರುವ ಬೆಳಗಾವಿ, ತಮಿಳರಿಗೆ ತುತ್ತಾಗುತ್ತಿರುವ ಬೆಂಗಳೂರು, ಆಂಧ್ರರು ಕಬಳಿಸುತ್ತಿರುವ ಬಳ್ಳಾರಿ, ಇಲ್ಲವೆ ಕೇರಳಿಗರು ಕಸಿದುಕೊಂಡಿರುವ ಕಾಸರಗೋಡುಗಳ ಸಮಸ್ಯೆಗಳೇ ಇರಲಿ “ಕನ್ನಡ ಜಗದ್ಗುರು’ ತತ್‌ಕ್ಷಣ ಸ್ಪಂದಿಸುತ್ತಿದ್ದರು. ಅದರಲ್ಲೂ ಸಮಸ್ಯೆ ಕನ್ನಡದ ನೆಲದ ಮಕ್ಕಳಿಗೆ ಸಂಬಂಧಿಸಿದ್ದರಂತೂ ಇನ್ನಷ್ಟು ವ್ಯಗ್ರರಾಗುತ್ತಿದ್ದರು. ಪಂಚನದಿಗಳು ಹರಿದು ಕರ್ನಾಕದ ಪಂಜಾಬ್ ಎಂದೇ ಕರೆಯಿಸಿ ಕೊಂಡಿದ್ದರೂ ಸದಾಕಾಲ ಬರಗಾಲದಿಂದ ನರಳುವುದು ವಿಜಾಪುರಕ್ಕಂಟಿದ ಶಾಪ. ಮಹಾರಾಷ್ಟ್ರದ ಉಜನಿ ಜಲಾಶಯದ ನೀರು ಬರದೆ ಬೆಳೆಗಳು ಒಣಗುತ್ತಿವೆ ಎಂದು ಇಳಕಲ್‌ನ ಮಹಾಂತ ಶಿವಯೋಗಿಗಳು ಮಾಡುತ್ತಿದ್ದ ಧರಣಿ ಸತ್ಯಾಗ್ರಹಕ್ಕೆ ಹೋಗಿ ಪಾಲ್ಗೊಂಡಿದ್ದರು.
(ಚಂದ್ರಶೇಖರ ವಸ್ತ್ರದ ಅವರ ಕನ್ನಡ ಜಗದ್ಗುರು