Advertisement

ಸ್ಪೀಚ್‌ ಪೆಥಾಲಜಿಸ್ಟ್‌ ದೃಷ್ಟಿಕೋನದಲ್ಲಿ ನಾಲಗೆಯ ಕ್ಯಾನ್ಸರ್‌ ಮತ್ತು ನಿರ್ವಹಣೆ

01:44 PM Nov 08, 2020 | mahesh |

ನಾಲಗೆಯ ಕ್ಯಾನ್ಸರ್‌ ಎಂಬುದು ಬಾಯಿಯ ಕ್ಯಾನ್ಸರ್‌ನ ಒಂದು ವಿಧವಾಗಿದೆ. ಇದು ನಾಲಗೆಯ ಅಂಗಾಂಶಗಳಲ್ಲಿ ಆರಂಭವಾಗುವುದಾಗಿದ್ದು, ನಾಲಗೆಯ ಮೇಲೆ ಪದರ ರಚನೆ ಅಥವಾ ಗಡ್ಡೆ ರೂಪುಗೊಳ್ಳುವುದಕ್ಕೆ ಕಾರಣವಾಗಬಹುದಾಗಿದೆ. ಹಿರಿಯ ವಯಸ್ಕರಲ್ಲಿ ಇದು ಕಾಣಿಸಿಕೊಳ್ಳುವ ಸಂಭಾವ್ಯತೆ ಹೆಚ್ಚು. ಮಕ್ಕಳಲ್ಲಿ ಇದು ಉಂಟಾಗುವುದು ಕಡಿಮೆ.

Advertisement

ನಾಲಗೆಯ ಕೆಲಸಗಳೇನು? :  ಜಗಿಯುವ ಕಾರ್ಯದಲ್ಲಿ ನಾಲಗೆಯು ಆಹಾರವನ್ನು ಹಲ್ಲುಗಳತ್ತ ದೂಡುವ ಕೆಲಸವನ್ನು ಮಾಡುತ್ತದೆ, ನುಂಗುವ ಕ್ರಿಯೆಯಲ್ಲಿಯೂ ನೆರವಾಗುತ್ತದೆ. ಪಚನಾಂಗ ವ್ಯೂಹದಲ್ಲಿ ರುಚಿ ಗ್ರಹಿಸುವುದಕ್ಕೆ ಸಂಬಂಧಿಸಿದ ಮೊದಲ ಅಂಗ ಇದಾಗಿದೆ. ಮನುಷ್ಯರಲ್ಲಿ ಮಾತನಾಡುವುದನ್ನು ಸಾಧ್ಯವಾಗಿಸುವ ಅಂಗವೂ ಆಗಿದೆ. ಬಾಯಿಯನ್ನು ಶುಚಿಯಾಗಿ ಇರಿಸಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಆಹಾರವು ಬಿಸಿಯಾಗಿದೆಯೇ ಅಥವಾ ತಣ್ಣಗಿದೆಯೇ ಎಂಬ, ಆಹಾರದ ಉಷ್ಣ ಸ್ವಭಾವವನ್ನು ಗುರುತಿಸುವುದಕ್ಕೂ ನಾಲಗೆ ಸಹಾಯ ಮಾಡುತ್ತದೆ.

ನಾಲಗೆ ಕ್ಯಾನ್ಸರ್‌: ಕಾರಣಗಳೇನು? :

  • ತಂಬಾಕಿನ ಅತಿಯಾದ ಬಳಕೆ
  • ಅತಿಯಾದ ಮದ್ಯಪಾನ
  • ಹ್ಯೂಮನ್‌ ಪ್ಯಾಪಿಲೊಮಾ ವೈರಸ್‌ (ಎಚ್‌ಪಿವಿ) ಎಂಬ, ಲೈಂಗಿಕವಾಗಿ ಹರಡುವ ವೈರಸ್‌
    ರೋಗ ಪ್ರತಿರೋಧಕ ಶಕ್ತಿ ದುರ್ಬಲವಾಗಿರುವುದು
  • ನಾಲಗೆಯ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ವಂಶಪಾರಂಪರ್ಯವಾಗಿ ಇರುವುದು
  • ಅಡ್ಡಾದಿಡ್ಡಿ, ಒತ್ತೂತ್ತಾಗಿರುವ ಹಲ್ಲುಗಳು

ನಾಲಗೆಯ ಕ್ಯಾನ್ಸರ್‌ನ ಲಕ್ಷಣಗಳೇನು? :

  • ನಾಲಗೆಯ ಬದಿಗಳಲ್ಲಿ ವಾಸಿಯಾಗದ ಹುಣ್ಣು ಅಥವಾ ಗಡ್ಡೆ. ಇದು ಗುಲಾಬಿ – ಕೆಂಬಣ್ಣದಾಗಿರಬಹುದು. ಕೆಲವೊಮ್ಮೆ ಕಚ್ಚಿದಾಗ ಅಥವಾ ಸ್ಪರ್ಶಿಸಿದಾಗ ರಕ್ತಸ್ರಾವವಾಗಬಹುದು.
  • ನಾಲಗೆಯಲ್ಲಿ ಅಥವಾ ನಾಲಗೆಯ ಹತ್ತಿರ ನೋವು.
  • ಧ್ವನಿಯ ಗುಣಮಟ್ಟದಲ್ಲಿ ಬದಲಾವಣೆ.
  • ನುಂಗಲು ಕಷ್ಟವಾಗುವುದು.

ರೋಗವನ್ನು ಹೇಗೆ ಪತ್ತೆ ಮಾಡಲಾಗುತ್ತದೆ? :  ಬಾಯಿಯ ಪರೀಕ್ಷೆ ರೋಗ ಲಕ್ಷಣಗಳ ಬಗ್ಗೆ ಪ್ರಶ್ನಿಸುವುದರಿಂದ ಎಕ್ಸ್‌-ರೇ ಅಥವಾ ಸಿಟಿ (ಕಂಪ್ಯೂಟರೈಸ್ಡ್ ಟೊಮೊಗ್ರಫಿ) ಸ್ಕ್ಯಾನ್‌: ವಿವಿಧ ಕೋನಗಳಿಂದ ಹಲವು ಎಕ್ಸ್‌ರೇಗಳನ್ನು ತೆಗೆದುಕೊಂಡು ಬಳಿಕ ಒಟ್ಟುಗೂಡಿಸಿ ಹೆಚ್ಚು ವಿವರಗಳನ್ನು ಹೊಂದಿರುವ ಚಿತ್ರವನ್ನು ಪಡೆಯಲಾಗುತ್ತದೆ. ಬಯಾಪ್ಸಿ ಅಂದರೆ, ಬಾಯಿಯಿಂದ ಅಂಗಾಂಶದ ಮಾದರಿಯೊಂದನ್ನು ಸಂಗ್ರಹಿಸಿ ಅದನ್ನು ಪರೀಕ್ಷೆಗೊಳಪಡಿಸುವುದು.

Advertisement

ನಾಲಗೆಯ ಕ್ಯಾನ್ಸರ್‌ಗೆ ಚಿಕಿತ್ಸೆಯೇನು? :

ನಾಲಗೆಯ ಕ್ಯಾನ್ಸರ್‌ಗೆ ಚಿಕಿತ್ಸೆಯು ಗಡ್ಡೆಯು ಎಲ್ಲಿ ರಚನೆಯಾಗಿದೆ ಮತ್ತು ಅದು ಎಷ್ಟು ದೊಡ್ಡದು ಎಂಬುದನ್ನು ಆಧರಿಸಿರುತ್ತದೆ. ರೇಡಿಯೇಶನ್‌ ಥೆರಪಿ ಮತ್ತು ಕೆಲವೊಮ್ಮೆ ರೇಡಿಯೇಶನ್‌ ಥೆರಪಿಯ ಜತೆಗೆ ಕೀಮೊಥೆರಪಿಯನ್ನು ಕೂಡ ಸಂಯೋಜಿಸಿಕೊಳ್ಳುವುದು ಅತ್ಯುತ್ತಮ ಚಿಕಿತ್ಸಾ ಆಯ್ಕೆಯಾಗಿರುತ್ತದೆ. ನಾಲಗೆಯ ಒಂದು ಭಾಗದಿಂದ ಗಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯು ಸಾಮಾನ್ಯವಾಗಿ ಅತ್ಯುತ್ತಮ ವಿಧಾನವಾಗಿರುತ್ತದೆ. ನಾಲಗೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ಗ್ಲೊಸೆಕ್ಟೊಮಿ ಎನ್ನುತ್ತಾರೆ. ಇದರಲ್ಲಿ ಈ ಕೆಳಗೆ ವಿವರಿಸಿರುವಂತೆ ಐದು ವಿಧಗಳಿವೆ:

1. ಮ್ಯುಕೊಸೆಕ್ಟಮಿ: ನಾಲಗೆಯ ಮೇಲೆ ರೂಪುಗೊಂಡಿರುವ ಕ್ಯಾನ್ಸರ್‌ಪೂರ್ವ ಎಪಿಥೇಲಿಯಲ್‌ ಪದರವನ್ನು ತೆಗೆದುಹಾಕುವುದು.

2. ಭಾಗಶಃ ಗ್ಲೊಸೆಕ್ಟೊಮಿ: ನಾಲಗೆಯ ಎಪಿಥೇಲಿಯಲ್‌ ಪದರ ಮತ್ತು ಆಂತರಿಕ ಸ್ನಾಯುಗಳನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕುವುದು.

3 a.ಹೆಮಿ ಗ್ಲೊಸೆಕ್ಟೊಮಿ: ನಾಲಗೆಯ ಎಪಿಥೇಲಿಯಲ್‌ ಪದರ ಮತ್ತು ಆಂತರಿಕ ಸ್ನಾಯುಗಳನ್ನು ಪೂರ್ಣವಾಗಿ ಹಾಗೂ ಬಾಹ್ಯ ಸ್ನಾಯುಗಳನ್ನು ಕನಿಷ್ಠ ಮಟ್ಟದಲ್ಲಿ ತೆಗೆದುಹಾಕುವುದು, ಆದರೆ ಇದು ಇಪ್ಸಿಲ್ಯಾಟರಲ್‌ ನಾಲಗೆಯ ಭಾಗದಲ್ಲಿ ಮಾತ್ರ.

 3 b. ಕಂಪಾರ್ಟ್‌ಮೆಂಟಲ್‌ ಹೆಮಿ ಗ್ಲೊಸೆಕ್ಟಮಿ: ನಾಲಗೆಯ ಎಪಿಥೇಲಿಯಲ್‌ ಪದರ ಮತ್ತು ಆಂತರಿಕ ಸ್ನಾಯುಗಳನ್ನು ಹಾಗೂ ಬಾಹ್ಯ ಸ್ನಾಯುಗಳನ್ನು ಇಪ್ಸಿಲ್ಯಾಟರಲ್‌ ನಾಲಗೆಯ ಭಾಗದಲ್ಲಿ ಮಾತ್ರ ತೆಗೆದುಹಾಕುವುದು.

4.a. ಸಬ್‌-ಟೋಟಲ್‌ ಗ್ಲೊಸೆಕ್ಟಮಿ: ನಾಲಗೆಯ ಚಲಿಸುವ ಭಾಗದ ಬಾಹ್ಯ ಭಾಗ ಮತ್ತು ಕಾಂಟ್ರಾಲ್ಯಾಟರಲ್‌ ಜೆನಿಯೊಗ್ಲೊಸಸ್‌ ಸ್ನಾಯುವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕುವುದು.

4b. ನಿಯರ್‌ ಟೋಟಲ್‌ ಗ್ಲೊಸೆಕ್ಟಮಿ: ನಾಲಗೆಯ ಚಲಿಸುವ ಭಾಗದ ಬಾಹ್ಯ ಭಾಗ, ಇಪ್ಸಿಲ್ಯಾಟರಲ್‌ ಬೇಸ್‌ ಮತ್ತು ಕಾಂಟ್ರಾಲ್ಯಾಟರಲ್‌ ಜೆನಿಯೊಗ್ಲೊಸಸ್‌ ಸ್ನಾಯುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು.

5. ಟೋಟಲ್‌ ಗ್ಲೊಸೆಕ್ಟಮಿ: ನಾಲಗೆಯ ಬಾಹ್ಯ ವೆಂಟ್ರಲ್‌ ಮೇಲ್ಮೆ„, ನಾಲಗೆಯ ತಳ ಮೇಲ್ಭಾಗ, ನಾಲಗೆಯ ಮೂಲ, ಬೈಲ್ಯಾಟರಲ್‌ ಎಕ್ಸ್‌ಟ್ರಿನ್ಸಿಕ್‌ – ಜೆನಿಯೊಗ್ಲೊಸಸ್‌, ಹೈಗ್ಲೊಸಸ್‌ ಮತ್ತು ಸ್ಟೈಗ್ಲೊಸಸ್‌ಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು.

ನುಂಗುವಿಕೆಯ ಚಿಕಿತ್ಸಕರು (ಸಾಮಾನ್ಯವಾಗಿ ಸ್ಪೀಚ್‌ ಪೆಥಾಲಜಿಸ್ಟ್‌) ನಾಲಗೆ – ಬಾಯಿಯ ಚಲನೆಗೆ ಸಂಬಂಧಿಸಿದ (ಓರೊ-ಮೋಟರ್‌) ವ್ಯಾಯಾಮಗಳನ್ನು ನೀಡಿ ನುಂಗುವಿಕೆಯ ಬದಲಿ ತಂತ್ರಗಳ ಬಗ್ಗೆ ತರಬೇತಿ ನೀಡುವರು. ಮಾತ್ರವಲ್ಲದೆ, ಆಹಾರ (ಘನ ಮತ್ತು ದ್ರವ)ವು ಎಷ್ಟು ದಪ್ಪ ಅಥವಾ ತೆಳು ಇರಬೇಕು ಎಂಬ ಬಗ್ಗೆ ಶಿಫಾರಸು ಮಾಡುವರು. ವಿವಿಧ ಬದಲಿ ವಿಧಾನಗಳ ಮೂಲಕ ಭಾಷಿಕ ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಹೇಗೆ ಎಂಬ ಬಗ್ಗೆ ಸ್ಪೀಚ್‌ ಥೆರಪಿ ಒದಗಿಸುವರು.

ಗ್ಲೊಸೆಕ್ಟಮಿಗೆ ಒಳಗಾದ ರೋಗಿಯ ಜೀವನ ಗುಣಮಟ್ಟವನ್ನು ಸುಧಾರಿಸುವಲ್ಲಿ ನುಂಗುವಿಕೆಯ ಮತ್ತು ಸ್ಪೀಚ್‌ ಥೆರಪಿ ಎರಡೂ ಸಹಾಯ ಮಾಡುತ್ತವೆ. ಆದ್ದರಿಂದ ಗ್ಲೊಸೆಕ್ಟಮಿಗೆ ಒಳಗಾದವರು ನಾಲಗೆಯ ಶಸ್ತ್ರಚಿಕಿತ್ಸೆಯ ಪರಿಣಾಮಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಆದಷ್ಟು ಬೇಗನೆ ಸ್ಪೀಚ್‌ ಪೆಥಾಲಜಿಸ್ಟ್‌ ಅವರನ್ನು ಸಂಪರ್ಕಿಸಬೇಕು.

ಡಾ| ಶೀಲಾ ಎಸ್‌.
ಸೀನಿಯರ್‌ ಅಸಿಸ್ಟೆಂಟ್‌ ಪ್ರೊಫೆಸರ್‌,
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next