Advertisement

ಹರಿಣಗಳ ಕೋಟೆಯೊಡೆದ ಏಕಾಂಗಿ ಹುಲಿ

12:36 PM Jan 16, 2018 | |

ಸೆಂಚುರಿಯನ್‌: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಾವು ಯಾಕೆ ವಿಶ್ವಶ್ರೇಷ್ಠ ಎನ್ನುವುದಕ್ಕೆ ನೀಡಿದ ಅತ್ಯಂತ ಸ್ಪಷ್ಟವಾದ, ದ್ವಂದ್ವಾತೀತವಾದ ಉದಾಹರಣೆ ಈ ಇನಿಂಗ್ಸ್‌. ಬಹುಶಃ ಈ ಇನಿಂಫಿನ್ನು ನೋಡಿರುವ ಯಾರೂ ಕೂಡ ಭವಿಷ್ಯದಲ್ಲಿ ಕೊಹ್ಲಿಯ ಸಾಮರ್ಥ್ಯದ ಕುರಿತು ಹಗುರವಾಗಿ ಮಾತನಾಡಲಾರರು! ಅಂತಹದೊಂದು ಇನಿಂಫಿನ್ನು ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ಭಾರತದ ಮೊದಲನೇ ಇನಿಂಗ್ಸ್‌ನಲ್ಲಿ ಆಡಿದ್ದಾರೆ. ಏಕಾಂಗಿಯಾಗಿ ಆಫ್ರಿಕಾದ ವೇಗದ ದಾಳಿಗೆ ತೊಡೆತಟ್ಟಿ ನಿಂತ ಅವರು ತಂಡದ ಹೀನಾಯ ಕುಸಿತ ತಡೆದಿದ್ದು ಮಾತ್ರವಲ್ಲ, ಪಂದ್ಯವನ್ನು ಭಾರತದ ಹಿಡಿತದಿಂದ ಕಳೆದು ಹೋಗದಂತೆ ನೋಡಿಕೊಂಡಿದ್ದಾರೆ.

Advertisement

2ನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಫ್ರಿಕಾ 335ಕ್ಕೆ ಆಲೌಟಾಗಿತ್ತು. ಇದಕ್ಕೆ ಉತ್ತರ ನೀಡಲು ಹೊರಟ ಭಾರತೀಯ ಪಡೆ ವಿಶ್ವಾಸದಿಂದಲೇ ಬ್ಯಾಟಿಂಗ್‌ ಆರಂಭಿಸಿತ್ತು. ಆ ಹಂತದಲ್ಲಿ ಭಾರತಕ್ಕೆ ಬಿದ್ದ ಎರಡು ಏಟುಗಳು ಆತ್ಮವಿಶ್ವಾಸವನ್ನು ಕುಗ್ಗಿಸಿದವು. ಕೆ.ಎಲ್‌.ರಾಹುಲ್‌ ಬೌಲರ್‌ಗೆ ವಾಪಸ್‌ ಕ್ಯಾಚ್‌ ನೀಡಿದ್ದು, ಚೇತೇಶ್ವರ ಪೂಜಾರಾ ರನೌಟಾಗುವ ಮೂಲಕ  ಬಂದಂತೆ ಹಿಂದಕ್ಕೆ ತೆರಳಿದ್ದು ಆಘಾತಕಾರಿಯಾಯಿತು. ಆಗ 9 ಓವರ್‌ 4 ಎಸೆತ ಮುಗಿದಿತ್ತು. ಆಗ ಬ್ಯಾಟ್‌ ಹೊತ್ತುಕೊಂಡು ಬಂದ ಕೊಹ್ಲಿ ಅಲ್ಲಿಂದ ಮುಂದೆ ಮತ್ತೂಂದು ತುದಿಯಲ್ಲಿದ್ದ ಬ್ಯಾಟುಗಾರರನ್ನು ಸಂಬಾಳಿಸಿ ಕೊಳ್ಳುತ್ತಾ ತಾವೂ ರನ್‌ಗಳಿಸುತ್ತಾ ಮುಂದೆ ಸಾಗಿದರು.

ಕೊಹ್ಲಿಯ ರನ್‌ಗತಿಯೇನು ಕುಂಟಿತವಾಗಿರಲಿಲ್ಲ. ಒತ್ತಡವೆಂಬ ಕಾರಣಕ್ಕೆ ರನ್‌ಗಳಿಸಲು ಪರ ದಾಡಲೂ ಇಲ್ಲ. ಹಾಗಂತ ಈ
ಪ್ರಕ್ರಿಯೆ ಸರಾಗವಾಗಿತ್ತು ಎನ್ನುವುದೂ ತಪ್ಪಾಗುತ್ತದೆ. ಎದುರಾಳಿ ಆಫ್ರಿಕಾ ತಂಡದಲ್ಲಿ ಕ್ಯಾಗಿಸೊ ರಬಾಡ, ಮಾರ್ನೆ ಮಾರ್ಕೆಲ್‌, ವೆರ್ನನ್‌ ಫಿಲಾಂಡರ್‌ರಂತಹ ಬೆಂಕಿಯುಂಡೆಯಿರುವುದು ಎಲ್ಲರಿಗೂ ಗೊತ್ತು. ಅವಕ್ಕೆಲ್ಲ ಉತ್ತರ ನೀಡುತ್ತಾ, ಹಂತಹಂತಕ್ಕೆ ಮುಂದುವರಿದರು. ಅಷ್ಟು ಮಾತ್ರವಲ್ಲ ಬೌಲರ್‌ಗಳಿಗೆ ವಿಕೆಟ್‌ ನೀಡದೇ ಗೋಳು ಹೊಯ್ದುಕೊಂಡರು. ಪರಿಸ್ಥಿತಿಯ ಮೇಲೆ ಪೂರ್ಣ ನಿಯಂತ್ರಣವಿದ್ದರೂ ಎದುರಾಳಿ ಆಫ್ರಿಕಾ ಬೌಲರ್‌ಗಳು ತಮ್ಮ ವಿಕೆಟ್‌ ಉರುಳಿಸಲು ಕಡೆಯವರೆಗೆ ಪರದಾಡುವಂತೆ ಮಾಡಿದ್ದು ಅವರ ಬ್ಯಾಟಿಂಗ್‌ ಸಾಮರ್ಥ್ಯಕ್ಕೆ ಸಾಕ್ಷಿ.

ಟೆಸ್ಟ್‌ ಕ್ರಿಕೆಟ್‌ಗೆಂದೇ ಹೇಳಿ ಮಾಡಿಸಿದ ಕೊಹ್ಲಿಯ ಈ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಅವರಿಗೆ ಇದು ಟೆಸ್ಟ್‌ನಲ್ಲಿ 21ನೇ ಶತಕ, ಏಕದಿನವನ್ನೂ ಸೇರಿದರೆ 53ನೇ ಶತಕ. ಒಟ್ಟಾರೆ 217 ಎಸೆತಗಳ ಈ ಇನಿಂಗ್ಸ್‌ನಲ್ಲಿ 153 ರನ್‌ಗಳು ಒಗ್ಗೂಡಿದವು. ಇದರಲ್ಲಿ ಒಂದೇ ಒಂದು ಸಿಕ್ಸರ್‌ ಇರಲಿಲ್ಲ, ಬದಲಿಗೆ 15 ಬೌಂಡರಿಗಳು ದಾಖಲಾದವು. ಇದು ಟೆಸ್ಟ್‌ ಕ್ರಿಕೆಟ್‌ನ ಮೂಲ ನಿಯಮಕ್ಕೆ ಕೊಹ್ಲಿ ಎಷ್ಟು ಬದ್ಧತೆ ತೋರಿದ್ದಾರೆನ್ನುವುದಕ್ಕೆ ಸಾಕ್ಷಿ. ಒಂದು ಎರಡು ರನ್‌ಗಳನ್ನು ಗಳಿಸುತ್ತಾ, ರನ್‌ ಧಾರಣೆಯನ್ನೂ
ಉಳಿಸಿಕೊಳ್ಳುತ್ತಾ ಆಡುವುದು ಕೇವಲ ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ಸಾಧ್ಯ. ಅದನ್ನು ಸಾಧಿಸಿ ಕೊಹ್ಲಿ ತಾವೊಬ್ಬ ಪ್ರಶ್ನಾತೀತ ವಿಶ್ವಶ್ರೇಷ್ಠ ಎನ್ನುವುದನ್ನು ಜಗತ್ತಿನೆದುರು ದೃಢಪಡಿಸಿದ್ದಾರೆ.

ಆಫ್ರಿಕಾ ಇನಿಂಗ್ಸ್‌: 28 ರನ್‌ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್‌ ಆರಂಭಿಸಿದ ದ.ಆಫ್ರಿಕಾ ಆರಂಭದಲ್ಲೇ 3 ರನ್‌ಗೆ 2 ವಿಕೆಟ್‌ ಕಳೆದುಕೊಂಡು ತಡಬಡಾಯಿಸಿತು. ಆ ಎರಡೂ ವಿಕೆಟ್‌ಗಳನ್ನು ಕಿತ್ತಿದ್ದು ಜಸ್ಮಿತ್‌ ಬುಮ್ರಾ. ಭಾರತದ ಸಂತಸ ಅಲ್ಲಿಗೆ ಮುಗಿಯಿತು. ಡಿವಿಲಿಯರ್ಸ್‌ ಮತ್ತು ಡೀನ್‌ ಎಲ್ಗರ್‌ ಕೂಡಿಕೊಂಡು ಆಫ್ರಿಕಾವನ್ನು ಸುಭದ್ರ ಸ್ಥಿತಿಗೆ ಒಯ್ದಿದ್ದಾರೆ.

Advertisement

ವಿರಾಟ್‌ ಕೊಹ್ಲಿ ದಾಖಲೆಗಳು
21 ಶತಕ ವೇಗವಾಗಿ ಗಳಿಸಿದ 4ನೇ ಬ್ಯಾಟ್ಸ್‌ಮನ್‌
ಟೆಸ್ಟ್‌ನಲ್ಲಿ ಅತೀ ವೇಗವಾಗಿ 21 ಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕೊಹ್ಲಿ ನಿರ್ಮಿಸಿದ್ದಾರೆ. ಕೊಹ್ಲಿ 109ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿ ಸಚಿನ್‌ ತೆಂಡುಲ್ಕರ್‌ರನ್ನು 5ನೇ ಸ್ಥಾನಕ್ಕೆ ತಳ್ಳಿದ್ದಾರೆ. ತೆಂಡುಲ್ಕರ್‌ 110ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಟೀವ್‌ ಸ್ಮಿತ್‌ 3ನೇ (105 ಇನಿಂಗ್ಸ್‌), ಸುನೀಲ್‌ ಗಾವಸ್ಕರ್‌ 2ನೇ (98 ಇನಿಂಗ್ಸ್‌) ಮತ್ತು ಡಾನ್‌ ಬ್ರಾಡ್ಮನ್‌ (56 ಇನಿಂಗ್ಸ್‌) 1ನೇ ಸ್ಥಾನದಲ್ಲಿದ್ದಾರೆ.

ಅತೀ ವೇಗದಲ್ಲಿ 53 ಶತಕ ಸಾಧನೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 53 ಶತಕ ದಾಖಲಿಸಿದ ಆಟಗಾರನಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ. ಏಕದಿನ, ಟೆಸ್ಟ್‌ ಸೇರಿದಂತೆ 354ನೇ ಇನಿಂಗ್ಸ್‌ನಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಟೆಸ್ಟ್‌ನಲ್ಲಿ 21, ಏಕದಿನದಲ್ಲಿ 32 ಶತಕ ದಾಖಲಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲ 380ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ

ಆಫ್ರಿಕಾದಲ್ಲಿ 150 ರನ್‌ ದಾಟಿದ 3ನೇ ಭಾರತೀಯ
ಕೊಹ್ಲಿ 2ನೇ ಟೆಸ್ಟ್‌ನಲ್ಲಿ 150 ರನ್‌ ಗಡಿ ದಾಟುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದ 3ನೇ ಭಾರತೀಯ ಆಗಿದ್ದಾರೆ. ಇದಕ್ಕೂ ಮುನ್ನ ಸಚಿನ್‌ ತೆಂಡುಲ್ಕರ್‌ ಮತ್ತು ಚೇತೇಶ್ವರ್‌ ಪೂಜಾರ ಮಾತ್ರ ಈ ಸಾಧನೆ ಮಾಡಿದ್ದರು. 

ದಂತಕಥೆ ಬ್ರಾಡ್ಮನ್‌ ದಾಖಲೆ ಸರಿಸಮ
ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ 153 ರನ್‌ ಬಾರಿಸುವ ಮೂಲಕ ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್ಮನ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಬ್ರಾಡ್ಮನ್‌ ನಾಯಕನಾಗಿ 8 ಬಾರಿ 150 ಕ್ಕೂ ಅಧಿಕ ರನ್‌ ಬಾರಿಸಿದ್ದರು. ನಾಯಕ ಕೊಹ್ಲಿಯೂ 8ನೇ ಬಾರಿ 153 ರನ್‌ ಬಾರಿಸಿದ್ದಾರೆ. 

ಕೊಹ್ಲಿ 21 ಶತಕ, ಸ್ಮಿತ್‌ 23 ಶತಕ
ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌ ನಡುವೆ ಅಗ್ರಸ್ಥಾನಕ್ಕಾಗಿ ಭಾರೀ ಪೈಪೋಟಿ ಇದೆ. ಈ ಇಬ್ಬರಲ್ಲಿ ಅಗ್ರರು ಯಾರೆನ್ನುವುದು ಇನ್ನೂ ಇತ್ಯರ್ಥವಾಗದ ಸಂಗತಿ. ಟೆಸ್ಟ್‌ ಶತಕಗಳ ಲೆಕ್ಕಾಚಾರ ಪರಿಗಣಿಸಿದರೆ ಕೊಹ್ಲಿಗಿಂತ ಸ್ಮಿತ್‌ ತುಸು ಮುಂದಿದ್ದಾರೆ. ಕೊಹ್ಲಿ 109 ಇನಿಂಗ್ಸ್‌ನಿಂದ 21 ಶತಕ ದಾಖಲಿಸಿದ್ದರೆ, ಸ್ಮಿತ್‌ 111 ಇನಿಂಗ್ಸ್‌ನಿಂದ 23 ಶತಕ ದಾಖಲಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ ಹಾಸ್ಯಾಸ್ಪದ ರನೌಟ್‌
2ನೇ ಟೆಸ್ಟ್‌ನಲ್ಲಿ ಅತ್ಯಂತ ಚರ್ಚೆಗೊಳಗಾದ, ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ಎಂದು ಬೈಸಿಕೊಂಡ, ಕ್ರಿಕೆಟ್‌
ದಿಗ್ಗಜರಿಂದಲೂ ಹೀಗಳಿಕೆಗೊಳಗಾದ ಘಟನೆಯೆಂದರೆ ಹಾರ್ದಿಕ್‌ ಪಾಂಡ್ಯ ರನೌಟ್‌. ಭಾರತದ ಇನಿಂಗ್ಸ್‌ನ 68ನೇ ಓವರ್‌ನ 1ನೇ ಎಸೆತದಲ್ಲಿ ಈ ಘಟನೆ ನಡೆಯಿತು. ಎಸೆತವೊಂದಕ್ಕೆ ಉತ್ತರಿಸಿದ ಹಾರ್ದಿಕ್‌ 1 ರನ್‌ಗಾಗಿ ಓಡಿದರು. ಮತ್ತೂಂದು ತುದಿಯಲ್ಲಿದ್ದ ಕೊಹ್ಲಿ ಅವರನ್ನು ವಾಪಸ್‌ ಕಳುಹಿಸಿದರು. ಹಿಂತಿರುಗಿ ವೇಗವಾಗಿಯೇ ಹೊರಟ ಹಾರ್ದಿಕ್‌ ಕೆಲವೊಂದು ವಿಚಾರದಲ್ಲಿ ಉದಾಸೀನ ತೋರಿದಂತೆ ಕಂಡುಬಂತು. ವಾಪಸ್‌ ಓಡುವಾಗ ಬ್ಯಾಟನ್ನು ನೆಲಕ್ಕೆ ಉಜ್ಜಿಕೊಂಡು ಓಡಲಾಗುತ್ತದೆ. ಬ್ಯಾಟ್‌ ಕ್ರೀಸ್‌ಗೆ ತಾಕಲಿ ಎನ್ನುವುದು ಇದರ ಉದ್ದೇಶ. ಆದರೆ ಪಾಂಡ್ಯ ಮಾಮೂಲಾಗಿ ಓಡಿದರು. ಅವರು ಕ್ರೀಸ್‌ನ ಮೇಲಿದ್ದೂ ಬ್ಯಾಟ್‌ ಮತ್ತು ಕಾಲು ಎರಡೂ ಗೆರೆಗೆ ತಾಕಿರಲಿಲ್ಲ. ಅದೇ ಸಂದರ್ಭದಲ್ಲಿ ಫಿಲಾಂಡರ್‌ ಎಸೆತ ನೇರವಾಗಿ ಸ್ಟಂಪ್‌ ಉರುಳಿಸಿ ಹಾರ್ದಿಕ್‌ ರನೌಟಾಗಲಿಕ್ಕೆ ಕಾರಣವಾಯಿತು.  ಕ್ರಿಕೆಟ್‌ ದಂತಕಥೆ ಸುನೀಲ್‌ ಗಾವಸ್ಕರ್‌ ಇದನ್ನು ಅತ್ಯಂತ ಬೇಜವಾಬ್ದಾರಿಯುತ ಘಟನೆ ಎಂದು ಜರಿದಿದ್ದಾರೆ.

ಸ್ಕೋರ್‌ಪಟ್ಟಿ 
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌    335
ಭಾರತ ಪ್ರಥಮ ಇನ್ನಿಂಗ್ಸ್‌    (2ನೇ ದಿನ: 5 ವಿಕೆಟಿಗೆ 183)

ವಿರಾಟ್‌ ಕೊಹ್ಲಿ    ಸಿ ಎಬಿಡಿ ಬಿ ಮಾರ್ಕೆಲ್‌    153
ಹಾರ್ದಿಕ್‌ ಪಾಂಡ್ಯ    ರನೌಟ್‌    15
ಆರ್‌. ಅಶ್ವಿ‌ನ್‌    ಸಿ ಡು ಪ್ಲೆಸಿಸ್‌ ಬಿ ಫಿಲಾಂಡರ್‌    38
ಮೊಹಮ್ಮದ್‌ ಶಮಿ    ಸಿ ಮಾರ್ಕೆಲ್‌ ಬಿ ಮಾರ್ಕೆಲ್‌    1
ಇಶಾಂತ್‌ ಶರ್ಮ    ಸಿ ಮಾರ್ಕ್‌ರಮ್‌ ಬಿ ಮಾರ್ಕೆಲ್‌    3
ಜಸ್‌ಪ್ರೀತ್‌ ಬುಮ್ರಾ    ಔಟಾಗದೆ    0

ಇತರ        12
ಒಟ್ಟು  (ಆಲೌಟ್‌)        307
ವಿಕೆಟ್‌ ಪತನ: 6-209, 7-280, 8-281, 9-306.

ಬೌಲಿಂಗ್‌:
ಕೇಶವ್‌ ಮಹಾರಾಜ್‌        20-1-67-1
ಮಾರ್ನೆ ಮಾರ್ಕೆಲ್‌        22.1-5-60-4
ವೆರ್ನನ್‌ ಫಿಲಾಂಡರ್‌        16-3-46-1
ಕಾಗಿಸೊ ರಬಾಡ        20-1-74-1
ಲುಂಗಿಸಾನಿ ಎನ್‌ಗಿಡಿ        14-2-51-1

ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌
ಐಡನ್‌ ಮಾರ್ಕ್‌ರಮ್‌    ಎಲ್‌ಬಿಡಬ್ಲ್ಯು ಬುಮ್ರಾ    1
ಡೀನ್‌ ಎಲ್ಗರ್‌    ಬ್ಯಾಟಿಂಗ್‌    36
ಹಾಶಿಮ್‌ ಆಮ್ಲ    ಎಲ್‌ಬಿಡಬ್ಲ್ಯು ಬುಮ್ರಾ    1
ಎಬಿ ಡಿವಿಲಿಯರ್    ಬ್ಯಾಟಿಂಗ್‌    50
ಇತರ        2
ಒಟ್ಟು  (2 ವಿಕೆಟಿಗೆ)        90

ವಿಕೆಟ್‌ ಪತನ: 1-1, 2-3.
ಬೌಲಿಂಗ್‌:

ಆರ್‌. ಅಶ್ವಿ‌ನ್‌        12-0-33-0
ಜಸ್‌ಪ್ರೀತ್‌ ಬುಮ್ರಾ        8-2-30-2
ಇಶಾಂತ್‌ ಶರ್ಮ        4-0-14-0
ಮೊಹಮ್ಮದ್‌ ಶಮಿ        5-1-12-0

Advertisement

Udayavani is now on Telegram. Click here to join our channel and stay updated with the latest news.

Next