Advertisement

ಸಭಾಪತಿ ವಿರುದ್ಧ ನಾಳೆ ಅವಿಶ್ವಾಸ ನಿರ್ಣಯ?

03:26 PM Jun 12, 2017 | Team Udayavani |

ಬೆಂಗಳೂರು: ಪ್ರಸಕ್ತ ಅಧಿವೇಶನದಲ್ಲೇ ವಿಧಾನಪರಿಷತ್‌ ಸಭಾಪತಿ ಸ್ಥಾನದಿಂದ ಡಿ.ಎಚ್‌.ಶಂಕರಮೂರ್ತಿ ಅವರನ್ನು
ಕೆಳಗಿಳಿಸಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್‌, ಮಂಗಳವಾರವೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಯತ್ನ ಮಾಡಲಿದೆ.

Advertisement

ಶಂಕರಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಪದಚ್ಯುತಿಗೊಳಿಸಲು ಈ ಬಾರಿ ಮೊದಲೇ ಸಿದ್ಧತೆ ನಡೆಸಿದ್ದ ಕಾಂಗ್ರೆಸ್‌, ಮೇ 30ರಂದೇ ನೋಟಿಸ್‌ ನೀಡಿತ್ತು. ಜೂ. 13ರ ಮಂಗಳವಾರ 14 ದಿನ ಪೂರ್ಣಗೊಳ್ಳುತ್ತಿದ್ದು, ಅಧಿವೇಶನ ಮುಕ್ತಾಯವಾಗುವ ಒಳಗೆ (ಶುಕ್ರವಾರ) ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಗೆ ಪಡೆಯುವ ಉತ್ಸಾಹದಲ್ಲಿದೆ.

ನಿಯಮಾವಳಿಯಂತೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಸಿಕ್ಕರೆ ಶಂಕರಮೂರ್ತಿ ಅವರು ಸಭಾಪತಿ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗುತ್ತದೆ. ಆದರೆ, ಈ ವಿಚಾರದಲ್ಲಿ ಸಭಾಪತಿ ಅವರು ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುತ್ತಾರೆಯೇ ಎಂಬುದು ಕಾದು ನೋಡಬೇಕಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಸಿಕ್ಕಿದ ಬಳಿಕ ಜೆಡಿಎಸ್‌ ಈ ಹಿಂದಿನಂತೆಯೇ ಶಂಕರಮೂರ್ತಿ ಅವರಿಗೆ ಬೆಂಬಲ ಮುಂದುವರಿಸಿದರೆ ಕಾಂಗ್ರೆಸ್‌ನ ಪ್ರಯತ್ನ ವಿಫ‌ಲವಾಗುವ ಸಾಧ್ಯತೆ ಹೆಚ್ಚು. ಬೆಂಬಲಿಸಿದರೆ ಕಾಂಗ್ರೆಸ್‌ ಕೆಲಸ ಸುಲಭವಾಗುತ್ತದೆ. ತಟಸ್ಥವಾಗಿ ಉಳಿಯಲು ನಿರ್ಧರಿಸಿದರೂ ಅದು ಕಾಂಗ್ರೆಸ್‌ಗೆ ಲಾಭ. ಆದರೆ, ಈಗಿರುವ ನಿಯಮದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರದಲ್ಲಿ ಸಭಾಪತಿಗೆ ಹೆಚ್ಚಿನ ಅಧಿಕಾರ ಇರುವುದರಿಂದ ನಿರ್ಣಯ ಮಂಡಿಸಿ ಒಪ್ಪಿಗೆ ಪಡೆಯುವ ಕಾಂಗ್ರೆಸ್‌ನ ಪ್ರಯತ್ನ ಯಶಸ್ವಿಯಾಗುತ್ತದೆಯೇ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. 

ನಿಯಮ ಏನು ?
ವಿಧಾನ ಪರಿಷತ್ತಿನ ನಿಯಮ 165ರ ಪ್ರಕಾರ ಸದಸ್ಯರು ನೋಟಿಸ್‌ ನೀಡಿದ 14 ದಿನದ ನಂತರ ಸಭಾಪತಿ ಬಯಸಿದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡಬಹುದು. ಇದಕ್ಕೂ ಮೊದಲು ಸದನದ ಕನಿಷ್ಠ 10 ಸದಸ್ಯರು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡಲು ಒಪ್ಪಿಗೆ ಸೂಚಿಸಬೇಕು. ಆ ನಂತರ ಐದು ದಿನದೊಳಗಾಗಿ ಸಭಾಪತಿ ಪದಚ್ಯುತಿ ನಿರ್ಣಯ ಮಂಡನೆಗೆ ಅವಕಾಶ ಕಲ್ಪಿಸಬಹುದಾಗಿದೆ. ಅಂದರೆ ಮಂಗಳವಾರ ನಿರ್ಣಯ ಮಂಡನೆಗೆ ಅವಕಾಶ ಕೇಳಿದರೂ ಮಂಡನೆಗೆ ಒಪ್ಪಿಗೆ ಸೂಚಿಸಲು ಸಭಾಪತಿಗೆ ಐದು ದಿನ ಕಾಲಾವಕಾಶವಿರುವುದರಿಂದ ಇದರ ಲಾಭ ಪಡೆಯಲು ಸಭಾಪತಿಗಳು ಪ್ರಯತ್ನಿಸಬಹುದು.

ಕಾಂಗ್ರೆಸ್‌ ಪ್ರಯತ್ನ ಸಫ‌ಲ
ಒಟ್ಟು 75 ಸದಸ್ಯರಿರುವ ಮೇಲ್ಮನೆಯಲ್ಲಿ ಪ್ರಸ್ತುತ 73 ಸದಸ್ಯರಿದ್ದಾರೆ. ಅದರಲ್ಲಿ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸಿ.ಎಂ.ಲಿಂಗಪ್ಪ ಸೇರಿ ಕಾಂಗ್ರೆಸ್‌ ಬಲ 33 ಇದೆ. ಮೂವರು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲಿಸುವುದರೊಂದಿಗೆ ಈ ಸಂಖ್ಯೆ 36ಕ್ಕೇರುತ್ತದೆ. ಬಿಜೆಪಿ 22 ಸ್ಥಾನ ಹೊಂದಿರುವುದರಿಂದ 36 ಸದಸ್ಯರ ಬೆಂಬಲ ಇರುವ ಕಾಂಗ್ರೆಸ್‌ ಪ್ರಯತ್ನ ಸಫ‌ಲವಾಗುತ್ತದೆ. 

Advertisement

ಸಭಾಪತಿ ಡಿ.ಎಚ್‌.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಪರಿಷತ್‌ಗೆ ಬಿಟ್ಟ ವಿಚಾರ. ಅದರ ಬಗ್ಗೆ ನಾನೇನೂ ಹೆಚ್ಚಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸದ್ಯಕ್ಕಂತೂ ಸಭಾಪತಿ ಹುದ್ದೆ ಖಾಲಿ ಇಲ್ಲ. ಅದು ಖಾಲಿಯಾದರೆ ಆಗ ಯಾರು ಎಂಬುದನ್ನು ಯೋಚಿಸೋಣ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ವಿಧಾನ ಪರಿಷತ್‌ ಸಭಾಪತಿ ಹುದ್ದೆಯಿಂದ ಡಿ.ಎಚ್‌. ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸುವ ಕಾಂಗ್ರೆಸ್‌
ಕುತಂತ್ರ ರಾಜಕಾರಣ ವಿಫಲವಾಗುತ್ತದೆ. ಈ ಸಂಬಂಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಜೊತೆ ಮಾತನಾಡಿದ್ದು, ಪರಿಷತ್‌ ಸಭಾಪತಿ ಸ್ಥಾನ ಬಿಜೆಪಿಗೆ ಹಾಗೂ ಉಪಸಭಾಪತಿ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡುವ ಕುರಿತು ಚರ್ಚಿಸಲಾಗಿದೆ. ಹೀಗಾಗಿ, ಕಾಂಗ್ರೆಸ್‌ನ ಕುತಂತ್ರ ರಾಜಕಾರಣಕ್ಕೆ ಯಾವುದೇ ಕಾರಣಕ್ಕೂ ಯಶಸ್ಸು ದೊರಕುವುದಿಲ್ಲ.

– ಕೆ.ಎಸ್‌.ಈಶ್ವರಪ್ಪ,
ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಕಾಂಗ್ರೆಸ್‌ ಮಂಡಿಸಿದೆಯಾದರೂ,
ಇದುವರೆಗೂ ಕಾಂಗ್ರೆಸಿಗರು ನಮ್ಮ ಪಕ್ಷದವರನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದರೆ ಜೆಡಿಎಸ್‌
ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಕೇಳಲಾಗುವುದು.

ಟಿ.ಎ.ಶರವಣ,
ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next