Advertisement

ನಾಳೆ “ನಮ್ಮ ಮನೆ, ಬಿಜೆಪಿ ಮನೆ’ಅಭಿಯಾನ

06:40 AM Apr 24, 2018 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಕಾರ್ಯ ಕರ್ತರ ಮನೆಯ ಮೇಲಿನ ಬಿಜೆಪಿ ಧ್ವಜ ತೆರವುಗೊಳಿಸುತ್ತಿರುವ ಚುನಾವಣಾ ಆಯೋಗದ ಕ್ರಮದ ವಿರುದ್ಧ ಎ.25ರಂದು “ನಮ್ಮ ಮನೆ ಬಿಜೆಪಿ ಮನೆ’ ಘೋಷಣೆಯ ಅಭಿಯಾನ ದಡಿ 11 ಲಕ್ಷ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಪಕ್ಷದ ಧ್ವಜ ಹಾರಿಸಲಿದ್ದಾರೆಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಹೇಳಿದರು.

Advertisement

ನಗರದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಅಧಿಕಾರಿಗಳು ಕಾಂಗ್ರೆಸ್‌ ಸರಕಾರಕ್ಕೆ ಅನುಕೂಲ ಆಗುವಂತೆ ವರ್ತಿಸುತ್ತಿದ್ದು, ಬಿಜೆಪಿ ಬಗ್ಗೆ ಪೂರ್ವಗ್ರಹರಾಗಿದ್ದಾರೆ ಎಂಬ ದೂರುಗಳಿವೆ. ಆ ಹಿನ್ನೆಲೆಯಲ್ಲಿ ಎರಡು ಬಾರಿ ಆಯೋಗಕ್ಕೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಆಯೋಗ ಸ್ಪಂದಿಸದಿದ್ದರೆ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಲಾಗುವುದು ಎಂದರು.

ಮನೆ ಮೇಲಿಂದ ಧ್ವಜಗಳನ್ನು ತೆರವುಗೊಳಿಸಬೇಕು ಎಂದು ಯಾವ ನಿಯಮ ದಲ್ಲೂ ಇಲ್ಲ. ಪಕ್ಷವನ್ನು ಬೆಂಬಲಿಸುವಂತೆ ಲಕ್ಷಾಂತರ ಕಾರ್ಯಕರ್ತರು ತಮ್ಮ ಕಟ್ಟಡ ಗಳ ಮೇಲೆ ಬರೆಸಿದ್ದ ಪ್ರಚಾರ ಬರಹವನ್ನು  ಸೂಚನೆ ನೀಡದೆ ಆಯೋಗ ತೆರವು ಗೊಳಿಸುತ್ತಿದೆ. ಕಟ್ಟಡ ಮಾಲಕರು ಇಲ್ಲವೇ ಪಕ್ಷದ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ತೆರವುಗೊಳಿಸದಿದ್ದರೆ ಅನಂತರ ಆಯೋಗ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಯಾವುದೇ ಮುನ್ಸೂಚನೆ ನೀಡದೆ ಪ್ರಚಾರ ಬರಹ ಅಳಿಸಲಾಗುತ್ತಿದೆ.

ಪಕ್ಷದ ಸಭೆಗಳಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರು ಊಟ ಮಾಡಲು ನಗರ ಪೊಲೀಸ್‌ ಆಯುಕ್ತರು ಅವಕಾಶ ನೀಡುತ್ತಿಲ್ಲ. ಬೆಂಗಳೂರಿನಲ್ಲಿನ ಜಾಹೀರಾತು ಫ‌ಲಕಗಳಲ್ಲಿ ಪಕ್ಷದ ಜಾಹೀರಾತು ಪ್ರದರ್ಶನಕ್ಕೂ ಬಿಬಿಎಂಪಿ ಅವಕಾಶ ನೀಡುತ್ತಿಲ್ಲ. ಗಣ್ಯರು,ಸಂತರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲು ಸಹ ಅಡ್ಡಿಪಡಿಸಲಾಗುತ್ತಿದೆ ಎಂದರು.

ಜನಾರ್ದನ ರೆಡ್ಡಿಗೆ ಎಲ್ಲೂ ಅವಕಾಶ ನೀಡಿಲ್ಲ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಪಕ್ಷದ ಚುನಾ ವಣಾ ಪ್ರಕ್ರಿಯೆ ವ್ಯವಸ್ಥೆಯಲ್ಲಿ ಎಲ್ಲಿಯೂ ಯಾವುದೇ ಅಧಿಕೃತ ಜವಾಬ್ದಾರಿ ನೀಡಿಲ್ಲ. ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬಿಜೆಪಿಗೂ ಜನಾರ್ದನ ರೆಡ್ಡಿ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾವಿರಾರು ಮಂದಿ ಮುಖಂಡರು, ಪ್ರಮುಖರು ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

Advertisement

ಬರುತ್ತಿದ್ದಾರೆ ನಾಯಕರು
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್‌, ನಿತಿನ್‌ ಗಡ್ಕರಿ, ಸುಷ್ಮಾ ಸ್ವರಾಜ್‌, ಸ್ಮತಿ ಇರಾನಿ, ಉಮಾ ಭಾರತಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್‌ ಚವ್ಹಾಣ್‌, ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌, ಛತ್ತೀಸ್‌ಗಢ ಸಿಎಂ ರಮಣ್‌ ಸಿಂಗ್‌ ಇತರರ ರಾಜ್ಯ ಪ್ರವಾಸ ಕಾರ್ಯಕ್ರಮ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಮುರಳೀಧರ್‌ ರಾವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next