ಅಳ್ನಾವರ: ಮೇ 29ರಂದು ನಡೆಯಲಿರುವ ಅಳ್ನಾವರ ಪಟ್ಟಣ ಪಂಚಾಯತ್ ಚುನಾವಣೆಗೆ ಅಧಿಕಾರಿಗಳು ಮತದಾನದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಲ್ಲಿನ ಪಪಂನ ಹದಿನೆಂಟು ವಾರ್ಡ್‌ಗಳಿಗೆ ಪ್ರತ್ಯೇಕವಾಗಿ ಹದಿನೆಂಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಆಯಾ ವಾರ್ಡ್‌ನ ಮತದಾರರಿಗೆ ಅನುಕೂಲವಾಗಲು ಹತ್ತಿರದಲ್ಲಿಯೇ ಮತ ಕೇಂದ್ರಗಳಿವೆ. ಆಯಾ ಕೇಂದ್ರಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುತ್ತಿದ್ದು, ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದ್ದು, ಅಭ್ಯರ್ಥಿ ಹೆಸರಿನ ಮುಂದೆ ಭಾವಚಿತ್ರ ಮತ್ತು ಅವರ ಚಿಹ್ನೆಯೂ ಇರುತ್ತದೆ. ಮತ ಎಣಿಕೆಯೂ ಅಳ್ನಾವರದಲ್ಲಿಯೇ ನಡೆಯಲಿದ್ದು, ಅದಕ್ಕೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಒಟ್ಟು 15,249 ಮತದಾರರಿದ್ದು, ಇವರಲ್ಲಿ 7,682 ಪುರುಷರು, 7,563 ಮಹಿಳೆಯರು ಹಾಗೂ 4 ಜನ ಇತರರು ಇದ್ದಾರೆ. ಮತದಾನದ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ವತಿಯಿಂದ ಮಾಡಲಾಗಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಅತಿಯಾದ ಬಿಸಿಲಿನ ಪ್ರಕರತೆ ಇರುವುದರಿಂದ ಆದಷ್ಟು ಮಧ್ಯಾಹ್ನಕ್ಕೂ ಮೊದಲೇ ಮತ ಚಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಮತ ಕೇಂದ್ರಗಳ ಸುತ್ತ ಪ್ರಚಾರಕ್ಕೆ ಅವಕಾಶವಿರುವುದಿಲ್ಲ. ಯಾವುದೇ ಗದ್ದಲಕ್ಕೆ ಎಡೆ ಮಾಡದೆ ಶಾಂತತೆಯಿಂದ ಮತದಾನ ಮಾಡಲು ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸಲಾಗುತ್ತದೆ. ಸೂಕ್ತ ಪೊಲೀಸ್ ಭದ್ರತೆಯಲ್ಲಿಟ್ಟಿರುವ ಮತಯಂತ್ರಗಳನ್ನು ಮಂಗಳವಾರ ಆಯಾ ಮತಗಟ್ಟೆಗಳಿಗೆ ಸಾಗಿಸಲಾಗುತ್ತದೆ. ಈಗಾಗಲೇ ಚುನಾವಣೆಯ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತರಬೇತಿ ನೀಡಲಾಗಿದೆ.
ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯವು ಚುನಾವಣಾಧಿಕಾರಿಗಳ ಕಚೇರಿಯಲ್ಲಿಯೇ ನಡೆಯಲಿದೆ. ಮತ ಕೇಂದ್ರಗಳ ಸುತ್ತ 200 ಮೀಟರ್ ಒಳಗೆ ಪ್ರಚಾರ ನಡೆಸುವಂತಿಲ್ಲ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಇರುವದಿಲ್ಲ ಎಂದು ಚುನಾವಣಾಧಿಕಾರಿಗಳು ಆಗಿರುವ ಧಾರವಾಡ ತಹಶೀಲ್ದಾರ್ ಪ್ರಕಾಶ ಕುದರಿ ಮತ್ತು ಅಳ್ನಾವರ ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದ್ದಾರೆ.