ಚಾಮರಾಜನಗರ: ಪೌರತ್ವ ತಿದ್ದುಪಡಿ ಕಾನೂನು, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟೀಯ ಜನಸಂಖ್ಯಾ ನೋಂದಣಿ ಕಾಯ್ದೆಗಳನ್ನು ವಿರೋಧಿಸಿ ಜ.24ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಮೈಸೂರು ವಿಭಾಗೀಯ ಸಂಚಾಲಕ ಕೆ. ಸಿದ್ದರಾಜು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದಲಿತ ಸಂಘರ್ಷ ಸಮಿತಿಯಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಿಎಎ, ಎನ್‌ಆಸಿ ಮತ್ತು ಎನ್‌ಪಿಆರ್ ವಿರುದ್ಧ ಧರಣಿ ನಡೆಸಲು ಕರೆ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾ ಶಾಖೆಯು ಧರಣಿ ಹಮ್ಮಿಕೊಂಡು ಬೆಂಬಲ ಸೂಚಿಸುತ್ತಿದೆ. ಈ ಕಾಯ್ದೆಗಳನ್ನು ಜಾರಿ ಮಾಡಿ ಇಲ್ಲಿಯ ಮೂಲ ನಿವಾಸಿಗಳ ಪೌರತ್ವ ಸಾಬೀತು ಮಾಡಲು ದಾಖಲೆಗಳನ್ನು ಕೇಳುವುದು ಸರಿಯಲ್ಲ. ವಲಸೆ ಬಂದಿರುವವರ ದಾಖಲೆಗಳನ್ನು ಕೇಳಿ ಪರಿಶೀಲಿಸಲಿ ಎಂದು ಹೇಳಿದರು.
ಪೊನ್ನಾಚಿ ನಿವಾಸಿಗಳಲ್ಲಿ ದಾಖಲೆಗಳಿಲ್ಲ: ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪೊನ್ನಾಚಿ ಗ್ರಾಮದಲ್ಲಿ ಕಳೆದ 75 ವರ್ಷಗಳಿಂದ ಜನರು ವಾಸವಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಅರಣ್ಯಾಧಿಕಾರಿಗಳು ಅವರಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಅರಣ್ಯ ಪ್ರದೇಶದಲ್ಲಿ ಸೋಲಿಗರು ವಾಸವಿದ್ದಾರೆ. ಅವರ ಬಳಿಯೂ ಹಕ್ಕುಪತ್ರವಿಲ್ಲ. 75 ವರ್ಷಗಳಿಂದ ವಾಸವಿರುವವರ ಬಳಿಯೇ ದಾಖಲೆಗಳಿಲ್ಲ.
ಇನ್ನು ನಮ್ಮ ತಂದೆ, ತಾಯಿ, ಅಜ್ಜ ಅಜ್ಜಿಯರ ದಾಖಲೆ ಕೇಳಿದರೆ, ಅನಕ್ಷರಸ್ಥರಾದ ಅವರು ಎಲ್ಲಿಂದ ದಾಖಲೆ ತರಲಾಗುತ್ತದೆ? ಎಂದು ಪ್ರಶ್ನೆ ಮಾಡಿದರು. ಯಾರನ್ನೋ ಗುರಿಯಾಗಿಸಿ ಮೂಲ ನಿವಾಸಿಗಳಾದ ದಲಿತರು, ಅಲೆಮಾರಿಗಳು, ಗಿರಿಜನರಿಗೆ ತೊಂದರೆ ನೀಡುವುದು ಸರಿಯಲ್ಲ. ಎಲ್ಲ ಶೂದ್ರ ಸಮುದಾಯಗಳು ಒಗ್ಗಟ್ಟಿನಿಂದ ಈ ಕಾನೂನುಗಳ ವಾಪಸ್ ಪಡೆಯುವಂತೆ ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಪರಿಸ್ಥಿತಿ ಕುಸಿತ: ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಜಿಡಿಪಿ ಕೆಳ ಮಟ್ಟಕ್ಕೆ ಬಂದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಹಣದುಬ್ಬರ ಏರುತ್ತಿದೆ ಇವುಗಳ ಬಗ್ಗೆ ಗಮನಹರಿಸಿ, ಪರಿಹರಿಸುವುದನ್ನು ಬಿಟ್ಟು ಧರ್ಮಾಧಾರಿತ ಕಾನೂನುಗಳನ್ನು ಜಾರಿ ಮಾಡಲು ಹೊರಡಿರುವುದು ಸರಿಯಲ್ಲ ಎಂದು ಖಂಡಿಸಿದರು.
ವೈಫಲ್ಯ ಮುಚ್ಚಿಕೊಳ್ಳಲು ಕಾನೂನು ಜಾರಿ: ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸೈಯದ್ ಆರೀಫ್ ಮಾತನಾಡಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಈ ಮೂರು ಕಾನೂನುಗಳನ್ನು ಜಾರಿ ಮಾಡಿದೆ. ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಮುಂದಾಗಿದೆ ಎಂದು ದೂರಿದರು. ಎಸ್‌ಡಿಪಿಐ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ.
ಯಾವುದೇ ಘಟನೆ ನಡೆದರೂ ಅದರ ತಲೆಗೆ ಕಟ್ಟಲಾಗುತ್ತಿದೆ. ಎಸ್‌ಡಿಪಿಐ ಒಂದು ರಾಜಕೀಯ ಪಕ್ಷವಾಗಿದ್ದು ಕಾನೂನು ಬದ್ಧವಾಗಿ ಅಸ್ತಿತ್ವದಲ್ಲಿದೆ. ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಸ್‌ಡಿಪಿಐ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಜನಹಿತಶಕ್ತಿ ಹೋರಾಟ ಸಮಿತಿ ಅಧ್ಯಕ್ಷ ರಾಮಸಮುದ್ರ ಸುರೇಶ್, ಮುಖಂಡರಾದ ಬಂಗಾರಸ್ವಾಮಿ, ಆಲೂರು ನಾಗೇಂದ್ರ ಉಪಸ್ಥಿತರಿದ್ದರು.