ಗದಗ: ಅಂಚೆ ಇಲಾಖೆಯ ಅಂಚೆ ವಿಂಗಡನಾ ನೌಕರರ(ಆರ್‌ಎಂಎಸ್) ಹುಬ್ಬಳ್ಳಿ ವಿಭಾಗೀಯ ಮಟ್ಟದ ಕಾರ್ಯಕಾರಿಣಿ ಹಾಗೂ ಬಹಿರಂಗ ಸಮಾವೇಶವನ್ನು ಅ.6 ರಿಂದ ಎರಡು ದಿನಗಳ ಕಾಲ ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರೂ ಆಗಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮುಳಗುಂದ ರಸ್ತೆಯ ಕನಕ ಭವನದಲ್ಲಿ ಅ.7 ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಬಹಿರಂಗ ಸಮಾವೇಶದಲ್ಲಿ ದಕ್ಷಿಣ-ಪಶ್ಚಿಮ ರೈಲ್ವೆ ಮಜ್ದೂರ್ ಯೂನಿಯನ್ ವಿಭಾಗೀಯ ಕಾರ್ಯದರ್ಶಿ ಎಸ್ .ಎ.ಅಲ್ಬರ್ಟ್ ಡಿಕ್ರೂಜ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ, ಆರ್.ಎಂ.ಎಸ್. ಹುಬ್ಬಳ್ಳಿ ವಿಭಾಗೀಯ ಅಧೀಕ್ಷಕಿ ಜಿ.ಎಸ್. ಸುಜಾತಾ ಮುಖ್ಯ ತಿಥಿಗಳಾಗಿ ಪಾಲ್ಗೊಳ್ಳುವರು.
ವಿಡಿಎಸ್ ಬಾಲಕರ ಪಿಯು ಕಾಲೇಜಿನ ಉಪನ್ಯಾಸಕ ದತ್ತ ಪ್ರಸನ್ನ ಪಾಟೀಲ ಅವರು ಗದಗ ವಿಭಾಗದ ಅಂಚೆ ವಿಂಗಡಣಾ ಕಾರ್ಯಾಲಯದ ಇತಿಹಾಸ, ಗದಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಮತ್ತು ಅಂಚೆ ಹಾಗೂ ನಾಗರಿಕರ ಸೌಹಾರ್ದ ಸಂಬಂಧದ ಬಗ್ಗೆ ಉಪನ್ಯಾಸ ನೀಡುವರು.
ವಕೀಲ ಪಿ.ಕಮಲೇಶನ್, ಎ.ಶ್ರೀನಿವಾಸ, ಉದಯ ಶಂಕರರಾವ್, ಕೆ.ಬಿ.ರೂಗಿಶೆಟ್ಟರ, ಎಚ್. ಎಸ್. ಬಸವರಾಜ, ಎಂ.ಬಿ. ಹುಲ್ಯಾಳ, ಎಸ್.ಎಂ. ಕುಲಕರ್ಣಿ ಸೇರಿ ಅನೇಕರು ಆಗಮಿಸಲಿದ್ದು, ಅಂಚೆ ವಿಂಗಡಣೆ ನೌಕರರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವರು ಎಂದರು.
ಗದಗ ಅಂಚೆ ವಿಂಗಡಣಾ ನೌಕರರ ಸಂಘದ ಅಧ್ಯಕ್ಷ ಸಿ.ಎಫ್. ಪಾಟೀಲ ಮಾತನಾಡಿ, ಅಂಚೆ ಸೇವೆ ಎಂದಾಕ್ಷಣ ಎಲ್ಲರಿಗೂ ಅಂಚೆ ಕಚೇರಿ ಸಿಬ್ಬಂದಿ, ಪೋಸ್ಟ್‌ಮನ್ ನೆನಪಾಗುತ್ತಾರೆ. ಆದರೆ, ಸಾರ್ವಜನಿಕರು ತಮ್ಮ ಪತ್ರಗಳನ್ನು ಸಂಬಂಧಿಸಿದವರಿಗೆ ಕಳುಹಿಸಿದಾಗ ಅದನ್ನು ಸಾರ್ಟಿಂಗ್ ಸೇರಿ ಹಲವು ಕಾರ್ಯಗಳನ್ನು ಆರ್‌ಎಂಎಸ್ ಸಿಬ್ಬಂದಿ ಎಲೆಮರೆ ಕಾಯಿಯಂತೆ ಶ್ರಮಿಸುತ್ತಾರೆ. ಅವರನ್ನು ಬೆಳಕಿಗೆ ತರುವುದರೊಂದಿಗೆ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವುದು ಹಾಗೂ ಮಾಡಿಕೊಳ್ಳಬಹುದಾದ ಬದಲಾವಣೆಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಕಾರ್ಯಕಾರಿಣಿ ನಡೆಯುತ್ತದೆ. ಮಹಾರಾಷ್ಟ್ರದ ಸೊಲ್ಲಾಪುರ ಒಳಗೊಂಡಂತೆ ಉತ್ತರ ಕರ್ನಾಟಕದ 11 ಜಿಲ್ಲೆಗಳು ಹುಬ್ಬಳ್ಳಿ ವಿಭಾಗಕ್ಕೆ ಒಳಪಡುತ್ತವೆ. ಈ ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ನೌಕರರು ಭಾಗವಹಿಸಲಿದ್ದಾರೆ. ಅ.6 ರಂದು ಹುಬ್ಬಳ್ಳಿ ವಿಭಾಗೀಯ ಮಟ್ಟದ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ವಿವರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಲ್. ಕುಲಕರ್ಣಿ, ಸಿ.ವೈ. ನದಾಫ್, ಆರ್.ಬಿ. ಒಡೆಯರ, ಎ.ಪಿ. ಇಟಗಿ, ಎಚ್. ಯಲ್ಲಪ್ಪ, ಎಂ.ಎಸ್. ಶಿರಹಟ್ಟಿ, ವಿ.ಆರ್. ಚವಡಿ ಸುದ್ದಿಗೋಷ್ಠಿಯಲ್ಲಿದ್ದರು.