Advertisement
ಸೀಮೆಯ ಪ್ರಧಾನ ದೇವಸ್ಥಾನಗಳ ಕೊಡಿಮರ ಇಳಿಸುವ ಕಾರ್ಯಕ್ರಮವೂ ಪತ್ತನಾಜೆಯ ದಿನವೇ ನಡೆಯುತ್ತದೆ. ಮಳೆಗಾಲದಲ್ಲಿ ಯಾವುದೇ ಜಾತ್ರೆ, ಅಂಕ ಆಯನ, ಉತ್ಸವಾದಿಗಳನ್ನು ನಡೆಸಲು ಸಾಧ್ಯವಾಗದ ಕಾರಣ ಹಾಗೂ ಕೃಷಿ ಸಂಸ್ಕೃತಿ ಮೂಲವಾಗಿರುವ ತುಳುನಾಡಿನಲ್ಲಿ ಮಳೆ ಗಾಲ ಪ್ರಾರಂಭಕ್ಕೆ ಮುನ್ನ ಉತ್ಸವಾದಿಗಳನ್ನು ಪೂರೈಸಿ ಕೃಷಿ ಚಟುವಟಿಕೆಗಳಿಗೆ ತಯಾರಿ ಮಾಡಲು ಪತ್ತನಾಜೆ ದಿನವನ್ನು ಉತ್ಸವಗಳ ಕೊನೆಯ ದಿನವನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಸಂಪ್ರದಾಯ ಈಗಲೂ ಮುಂದುವರಿದಿದೆ.
ಕರಾವಳಿ ಜಿಲ್ಲೆಗಳಲ್ಲಿ 40ಕ್ಕೂ ಅಧಿಕ ಮೇಳಗಳು ಈ ವರ್ಷ ತಿರುಗಾಟ ನಡೆಸಿವೆ. ಸಾವಿರಾರು ಕಲಾವಿದರು ಹಾಗೂ ಇತರರು ಇಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ಮೇಳಗಳು ಈಗಾಗಲೇ ತಮ್ಮ ತಿರುಗಾಟ ನಿಲ್ಲಿಸಿದ್ದರೆ, ಧರ್ಮಸ್ಥಳ, ಕಟೀಲು, ಸಾಲಿಗ್ರಾಮ, ಮಂದಾರ್ತಿ, ಪಾವಂಜೆ, ಹನುಮಗಿರಿ, ಮಾರಣಕಟ್ಟೆ, ಹಾಲಾಡಿ, ಬಪ್ಪನಾಡು ಸಹಿತ ವಿವಿಧ ಮೇಳಗಳ ಆಟ ಇಂದು-ನಾಳೆ ಮುಕ್ತಾಯವಾಗಲಿದೆ. ಮುಂದಿನ ಆರು ತಿಂಗಳು ಕಲಾವಿದರಿಗೆ ರಜೆ ಇರಲಿದೆ. ಈ ಪೈಕಿ ಕೆಲವು ಮೇಳದ ಕಲಾವಿದರಿಗೆ ರಜಾ ಸಂಬಳ ಮೇಳದಿಂದ ಸಿಗುತ್ತಿದ್ದರೆ, ಉಳಿದ ಕಲಾವಿದರು ರಜೆ ಸಮಯದಲ್ಲಿ ಇತರ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಮಳೆಗಾಲದ ಸಂದರ್ಭ ಮೇಳ ತಿರುಗಾಟ ಇಲ್ಲದಿದ್ದರೂ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಪ್ರದರ್ಶನ ಕರಾವಳಿಯ ವಿವಿಧ ಕಡೆಗಳಲ್ಲಿ ನಡೆಯುತ್ತದೆ. ಚಿಕ್ಕ ಮೇಳ ತಿರುಗಾಟ ಮನೆ ಮನೆ ವ್ಯಾಪ್ತಿಗೆ ಬರಲಿದೆ.
Related Articles
“ಕಟೀಲಿನ ಆರು ಮೇಳಗಳು ಈ ವರ್ಷ ಸುಮಾರು 1,068 ಯಕ್ಷಗಾನ ಪ್ರದರ್ಶನ ನೀಡಿವೆ. ಮುಂದಿನ ದಿನಗಳಲ್ಲಿ 8 ಸಾವಿರಕ್ಕೂ ಪ್ರದರ್ಶನಕ್ಕೆ ಈಗಾಗಲೇ ಬುಕ್ಕಿಂಗ್ ಆಗಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣದಾಸ ಅಸ್ರಣ್ಣ ತಿಳಿಸಿದ್ದಾರೆ.
Advertisement
ನಮ್ಮದು ಕೃಷಿ ಆಧಾರಿತ ಸಮಾಜ. ಹಿಂದೆ ಕಲಾವಿದರು-ಪ್ರೇಕ್ಷಕರು ಕೃಷಿಕರೇ ಆಗಿದ್ದರು. ಹೀಗಾಗಿ ಪತ್ತನಾಜೆಯ ಗಡುವನ್ನು ಇಟ್ಟುಕೊಂಡು-ಆ ವೇಳೆ ಮಳೆ ಬರುವ ಕಾರಣದಿಂದ ಕೃಷಿ ಚಟುವಟಿಕೆ ನಡೆಸಲು ಎಲ್ಲರಿಗೂ ಅವಕಾಶದ ಹಿನ್ನೆಲೆಯಲ್ಲಿ ವಿರಾಮ ಸೂತ್ರ ಪಾಲಿಸಲಾಗಿತ್ತು. ಹೀಗಾಗಿ ಯಕ್ಷಗಾನ, ಉತ್ಸವ ಸಹಿತ ತುಳುನಾಡಿನ ವಿವಿಧ ಆಚರಣೆಗಳು ಪತ್ತನಾಜೆಯ ಬಳಿಕ ನಡೆಯುವುದಿಲ್ಲ ಎಂಬ ಆಚರಣೆ ಜಾರಿಗೆ ಬಂತು.– ಡಾ| ಎಂ. ಪ್ರಭಾಕರ ಜೋಶಿ, ಹಿರಿಯ ವಿದ್ವಾಂಸರು