Advertisement
ಜಾಗರೂಕತೆ ಅಗತ್ಯಅಮಾವಾಸ್ಯೆ ದಿನವೇ ಮುಂಜಾನೆ ತೊಗಟೆ ತೆಗೆಯಲು ಹೋಗುತ್ತಾರೆ. ನಸುಕಿನಲ್ಲಿ ಸರಿಯಾಗಿ ತೋರದ ಕಾರಣ ಹಾಲೆ ಮರದ ಬದಲು ಬೇರೊಂದು ಮರದ ಕೆತ್ತೆ ತಂದು ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಯೂ ಇರುವುದರಿಂದ ಜಾಗರೂಕತೆ ವಹಿಸಬೇಕು. ಹಾಲೆ ಮರದ ರೀತಿ ಕಾಣುವ ಕಾಸರ್ಕ (ಕಾಸಾನು) ಮರದ ತೊಗಟೆ ತರುವುದು ಅಪಾಯಕಾರಿ. ಹಿಂದಿನ ದಿನವೇ ಹಾಲೆ ಮರವನ್ನು ಗುರುತಿಸಿ ಮರುದಿನ ಸಂಗ್ರಹಿಸುವುದು ಉತ್ತಮ. ಇಲ್ಲವಾದರೆ ಹಾಲೆ ಮರದ ಎಲೆಯನ್ನು ಸ್ಪಷ್ಟವಾಗಿ ಗುರುತಿಸಿ ಅದರ ತೊಗಟೆಯನ್ನು ತೆಗೆಯಬೇಕು.
ಹಾಲೆ, ಏಳೆಲೆ ಬಾಳೆ, ಜಂತಲೆ, ಮದ್ದಾಲೆ, ಕೋಡಾಲೆ ಎಂದು ಹಾಲೆ ಮರಕ್ಕೆ ಕರೆಯುತ್ತಾರೆ. ತುಳುವಿನಲ್ಲಿ ಪಾಲೆ, ಪಾಲೆಂಬು ಎಂಬ ಹೆಸರಿದೆ. ಆಯುರ್ವೇದದಲ್ಲಿ ಸಪ್ತಪರ್ಣ ಎನ್ನುತ್ತಾರೆ. ಈ ಮರದ ಎಲೆಗಳಲ್ಲಿ ಏಳು ಎಲೆಗಳಿರುವ ಕಾರಣ ಸಪ್ತ ಪರ್ಣ ಎಂದು ಹೆಸರು ಬಂದಿದೆ. ರಾಶಿವನದಲ್ಲಿ ಹಾಲೆ ಮರಕ್ಕೆ ಸ್ಥಾನವಿದೆ. ಇದು ವೃಷಭ ರಾಶಿಯನ್ನು ಪ್ರತಿನಿಧಿಸುತ್ತದೆ. ಕೋಲ್ಕತ್ತಾ ಸಮೀಪದ ರವೀಂದ್ರನಾಥ ಠಾಗೋರರು ಸ್ಥಾಪಿಸಿದ ಶಾಂತಿನಿಕೇತನದಲ್ಲಿ (ಈಗ ವಿಶ್ವಭಾರತಿ ವಿ.ವಿ.) ಘಟಿಕೋತ್ಸವದ ಸಂದರ್ಭ ವಿದ್ಯಾರ್ಥಿಗಳಿಗೆ ಹಾಲೆ ಮರದ ಐದು ಎಲೆಗಳನ್ನು ಕೊಡುವ ಸಂಪ್ರದಾಯ ಬೆಳೆದು ಬಂದಿದೆ. ಹಾಲೆ ಮರ ಪಶ್ಚಿಮಬಂಗಾಳ ರಾಜ್ಯದ ವೃಕ್ಷವಾಗಿದೆ. ಹಬ್ಬಗಳಿಗೆ ಮುನ್ನವೇ ಔಷಧಿ!
ಆಟಿ ತಿಂಗಳಲ್ಲಿ ಮಳೆಯ ಆರ್ಭಟ ಜಾಸ್ತಿ ಇರುತ್ತದೆ. ಇದೇ ಸಂದರ್ಭ ಆಟಿ ತಿಂಗಳಲ್ಲಿನ ತಿನಿಸುಗಳೂ ವಿಭಿನ್ನವಾಗಿರುತ್ತದೆ. ಪ್ರಾಕೃತಿಕ ವಿದ್ಯಮಾನದ ಏರುಪೇರಿನಿಂದ ಇದರ ರಕ್ಷಣೆಗಾಗಿ ಹಾಲೆ ಮರದ ಕೆತ್ತೆಯ ಕಷಾಯವನ್ನು ಬಳಸುವ ಕ್ರಮ ಬಂದಿದೆ. ಆಟಿ ಅಮಾವಾಸ್ಯೆ ಅನಂತರ ಬರುವ ವಿವಿಧ ಹಬ್ಬ ಹರಿದಿನಗಳಲ್ಲಿರುವ ತಿನಿಸುಗಳನ್ನು ನಿಭಾಯಿಸಲು ಮುಂಚಿತವಾಗಿ ಈ ಕಷಾಯ ಸೇವನೆ ಚಾಲ್ತಿಗೆ ಬಂದಿದ್ದಿರಬಹುದು. ಉಡುಪಿ ಶ್ರೀಕೃಷ್ಣಮಠದಲ್ಲಿ ಪ್ರತಿವರ್ಷ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ಕಷಾಯವನ್ನು ದೇವರಿಗೆ ಸಮರ್ಪಿಸಿ ಬಳಿಕ ತೀರ್ಥ ವಿತರಣೆ ಜತೆಗೆ ಭಕ್ತರಿಗೆ ವಿತರಿಸುತ್ತಾರೆ. ವಿವಿಧೆಡೆಗಳಲ್ಲಿ ಸಾರ್ವಜನಿಕ ವಿತರಣೆಯೂ ನಡೆಯುತ್ತಿದೆ.
Related Articles
ಹಾಲೆ ಮರದ ಚಕ್ಕೆಯನ್ನು ವಿಶೇಷವಾಗಿ ಶ್ವಾಸರೋಗ, ಅಪಸ್ಮಾರ, ಜ್ವರ, ಚರ್ಮರೋಗ, ಅಜೀರ್ಣರೋಗ, ಅತಿಸಾರ, ಆಮಶಂಕೆ, ಕ್ರಿಮಿರೋಗ, ಕಾಮಾಲೆ, ಸರ್ಪಕಡಿತಕ್ಕೆ ಔಷಧವಾಗಿ ಬಳಸುತ್ತಾರೆ. ಮಲೇರಿಯಾ ಜ್ವರದಲ್ಲೂ ಉತ್ತಮ ಔಷಧಿಯಾಗಿ ಬಳಕೆಯಾಗುತ್ತದೆ. ತೊಗಟೆ ಅರೆದು ಕುರಕ್ಕೆ ಲೇಪಿಸುವುದಿದೆ. ಕಟುಕಷಾಯ ರಸವುಳ್ಳ, ಸ್ನಿಗ್ಧ ರಸ ಗುಣವುಳ್ಳ, ಉಷ್ಣ ವೀರ್ಯವುಳ್ಳ, ಕಟು ವಿಪಾಕವನ್ನು ಉಂಟುಮಾಡುವ ಸಪ್ತಪರ್ಣದ ಕಾರ್ಯವೈಖರಿಯನ್ನು ವಿಶ್ಲೇಷಿಸಿದರೆ ಪಿತ್ತದೋಷದ ವೈಪರೀತ್ಯಗಳಿಂದಾದ ರೋಗಗಳಲ್ಲಿ ಪರಿಣಾಮಕಾರಿಯಾಗಿ ಕಾಣುವುದು.
– ಡಾ|ಚೈತ್ರಾ ಹೆಬ್ಟಾರ್,
ವಿಭಾಗ ಮುಖ್ಯಸ್ಥೆ, ಜನಪದ ಔಷಧಿ
ಸಂಶೋಧನ ಕೇಂದ್ರ, ಎಸ್‌ಡಿಎಂ ಆಯುರ್ವೇದ ಕಾಲೇಜು
Advertisement