Advertisement

ನಾಳೆ ರಾಜ್ಯದಲ್ಲಿ ‘ಭಾರತ್ ಜೋಡೋ ಯಾತ್ರೆ’ಗೆ ತೆರೆ

12:08 PM Oct 22, 2022 | Team Udayavani |

ರಾಯಚೂರು: ಭಾರತ ಐಕ್ಯತಾ ಯಾತ್ರೆ ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯದಲ್ಲಿ ಮುಕ್ತಾಯವಾಗಲಿದೆ. ಸೆ.30 ರಿಂದ ಆರಂಭವಾದ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯಾತ್ರೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದಾರೆ. ಇವರು ಪಕ್ಷವನ್ನು ನೋಡಿಲ್ಲ. ಈ ಎಲ್ಲರೂ ಬದುಕು, ಭವಿಷ್ಯ, ದೇಶದಲ್ಲಿ ಶಾಂತಿ ಮರುಸ್ಥಾಪನೆ, ನಿತ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಇಂದಿರಾ ಗಾಂಧಿ ಅವರ ಕಾಲದಲ್ಲಿ ಅವರನ್ನು ನೋಡಿ ಖುಷಿ ಪಡಲು ಜನ ಹಳ್ಳಿ, ಹಳ್ಳಿಗಳಿಂದ ಆಗಮಿಸಿದಂತೆ ಇಂದು ರಾಹುಲ್ ಗಾಂಧಿ ಅವರನ್ನು ನೋಡಿ ಶುಭಕೋರಲು ಉತ್ಸುಕರಾಗಿ ಬರುತ್ತಿದ್ದಾರೆ. ಜತೆಗೆ ಅವರ ಆಚಾರ, ವಿಚಾರ, ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಪಕ್ಷದ ರಾಜ್ಯ ಅಧ್ಯಕ್ಷನಾಗಿ ಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜಾತಿ, ಧರ್ಮ, ಪಕ್ಷ ಬೇಧ ಮರೆತು ಎಲ್ಲ ವರ್ಗದವರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ನಡಿಗೆ ದೇಶಕ್ಕೆ ಒಂದು ಕೊಡುಗೆ ಎಂದು ಅಭಿಪ್ರಾಯಪಟ್ಟರು.

ಇದು ಪಕ್ಷ ಅಥವಾ ಧರ್ಮದ ಆಧಾರದ ಮೇಲೆ ನಡೆದಿರುವ ಯಾತ್ರೆ ಅಲ್ಲ. ಮಾನವೀಯತೆ ಹಾಗೂ ಮಾನವ ಧರ್ಮದ ಆಧಾರದ ಮೇಲೆ ನಡೆದಿರುವ ಯಾತ್ರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉದ್ದೇಶದೊಂದಿಗೆ ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕುತ್ತಿದ್ದಾರೆ. ಈ ಯಾತ್ರೆ ಸಂದರ್ಭದಲ್ಲಿ ಸಮಾಜದಲ್ಲಿ ನೊಂದು ಬೆಂದವರನ್ನು ಸಂಪರ್ಕ ಮಾಡಿದ್ದು, ಎಲ್ಲರನ್ನೂ ಭೇಟಿ ಮಾಡಲು ಆಗಿಲ್ಲ. ಅದಕ್ಕಾಗಿ ಕ್ಷಮೆ ಇರಲಿ ಎಂದರು.

Advertisement

ಇದನ್ನೂ ಓದಿ:ಒಂದೇ ಮನೆಯ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು

ಬಿಜೆಪಿಯ ರಸ್ತೆ ಮೇಲೆ ಕಾಂಗ್ರೆಸ್ ಯಾತ್ರೆ ಎಂಬ ಲೇವಡಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ‘ ಕಾಂಗ್ರೆಸ್ ಪಕ್ಷ ಕೊಟ್ಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ಈ ಕೈ ಪಕ್ಷ ದೇಶದ ಜನರಿಗೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ ಕೊಟ್ಟು, ಆಣೆಕಟ್ಟು ನಿರ್ಮಿಸಿ, ಅನ್ನ ಬೆಳೆಯಲು ಅವಕಾಶ, ಉದ್ಯೋಗ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಿದೆ. ಇದಾದ ಮೇಲೆ ಅವರು ಅಧಿಕಾರ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಈ ಯಾತ್ರೆ ನಂತರ ಬೇರೆ ಯಾತ್ರೆಗಳ ಬಗ್ಗೆ ಕೇಳಿದಾಗ, ‘ ಆ ಬಗ್ಗೆ ಸಭೆ ಮಾಡಿದ ನಂತರ ಮಾಹಿತಿ ನೀಡುತ್ತೇವೆ’ ಎಂದರು. ಈ ಯಾತ್ರೆ ನಂತರ ದೇಶದ ಜನ ರಾಹುಲ್ ಗಾಂಧಿ ಅವರನ್ನು ಹೇಗೆ ನೋಡಲಿದ್ದಾರೆ ಎಂಬ ಪ್ರಶ್ನೆಗೆ, ‘ ಬಿಜೆಪಿ ಅವರು ಏನು ಬೇಕಾದರೂ ಹೇಳಲಿ. ಯಾವುದಾದರೂ ನಾಯಕ ದೇಶದುದ್ದಕ್ಕೂ 3570 ಕಿ.ಮೀ ಪಾದಯಾತ್ರೆ ಮಾಡುವ ಸಾಹಸಕ್ಕೆ ಕೈ ಹಾಕಿದ್ದರೆ ಅದು ರಾಹುಲ್ ಗಾಂಧಿ ಮಾತ್ರ. ನಮಗೂ ಆರಂಭದಲ್ಲಿ ಕಷ್ಟ ಆಗಿತ್ತು. ಅವರು ಬಿಸಿಲು, ಮಳೆ ಲೆಕ್ಕಿಸದೆ ಯಾತ್ರೆ ಮಾಡುತ್ತಿದ್ದಾರೆ. ಅವರು ಪ್ರಧಾನಮಂತ್ರಿ ಸ್ಥಾನದ ಅವಕಾಶ ತ್ಯಾಗ ಮಾಡಿ, ಪಕ್ಷದ ಅಧಿಕಾರ ಬಿಟ್ಟುಕೊಟ್ಟು ದೇಶದಲ್ಲಿ ಬದಲಾವಣೆ ತರಲು ನಡೆಯುತ್ತಿದ್ದಾರೆ. ಇದು ಬದಲಾವಣೆ ಹೆಜ್ಜೆ’ ಎಂದರು.

ಜನರ ಬೇಡಿಕೆಗಳು ಪಕ್ಷದ ಪ್ರಣಾಳಿಕೆಯಲ್ಲಿ ಸ್ಥಾನ ಪಡೆಯುವುದೇ ಎಂಬ ಪ್ರಶ್ನೆಗೆ, ‘ ಜನರು ಹೇಳಿಕೊಂಡಿರುವ ಸಮಸ್ಯೆ ನೋವುಗಳಿಗೆ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ರೈತರು, ಜನ ಸಾಮಾನ್ಯರು, ಯುವಕರು ಜೀವನ ಮಾಡುವುದು ಕಷ್ಟವಾಗಿದೆ. ಯುವಕರಿಗೆ ಉದ್ಯೋಗ ಇಲ್ಲ. ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬರೆ, ರೈತರಿಗೆ ಬೆಂಬಲ ಬೆಲೆ ಇಲ್ಲ. ಈ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಆಗಿದೆ ‘ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next