ಲಾಹೋರ್ : ಪಾಕಿಸ್ಥಾನದಲ್ಲಿ ಟೊಮೆಟೋ ಕಿಲೋಗೆ 300 ರೂ. ದಾಟಿದೆ. ಆದರೂ ಅದು ಭಾರತದಿಂದ ಟೊಮೆಟೋ ಆಮದಿಸಿಕೊಳ್ಳಲು ಬಯಸುತ್ತಿಲ್ಲ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಳಸಿ ಹೋಗಿರುವುದೇ ಇದಕ್ಕೆ ಕಾರಣವಾಗಿದೆ. ಹಾಗೆಂದು ಪಾಕಿಸ್ಥಾನದ ಆಹಾರ ಭದ್ರತೆಯ ಸಚಿವ ಸಿಕಂದರ್ ಹಯಾತ್ ಅವರೇ ಖುದ್ದು ಹೇಳಿದ್ದಾರೆ.
ಪಾಕಿಸ್ಥಾನದಲ್ಲಿ ವರ್ಷದ ಈ ಸಂದರ್ಭದಲ್ಲಿ ಟೊಮೆಟೋ ಕೊರತೆ ಉಂಟಾಗುವುದು ಸಾಮಾನ್ಯ. ಅಂತೆಯೇ ವರ್ಷಂಪ್ರತಿ ಪಾಕಿಸ್ಥಾನ ಭಾರತದಿಂದ ಅವಶ್ಯವಿರುವಷ್ಟು ಪ್ರಮಾಣದ ಟೊಮೆಟೋ ಆಮದಿಸಿಕೊಂಡು ಕೊರತೆಯನ್ನು ಸರಿದೂಗಿಸುವುದು ವಾಡಿಕೆ.
ಆದರೆ ಪಾಕ್ ಮಾರುಕಟ್ಟೆಗಳಲ್ಲಿ ಈ ವರ್ಷ ಟೊಮೆಟೋ ಕೊರತೆ ತೀವ್ರವಾಗಿ ಉಂಟಾಗಿದೆ. ಬೇಡಿಕೆ ಜಾಸ್ತಿ ಇದ್ದು ಪೂರೈಕೆ ಕಡಿಮೆ ಇರುವುದರಿಂದ ಟೊಮೆಟೋ ಬೆಲೆ ಕಿಲೋಗೆ 300 ರೂ. ಮೀರಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕಿಸ್ಥಾನದ ಸ್ಥಳೀಯ ಮಾರುಕಟ್ಟೆಗಳು ಈಗ ಸಿಂಧ್ ಪ್ರಾಂತ್ಯದ ಟೊಮೆಟೋ ಇಳುವರಿಯನ್ನು ಕಾಯುತ್ತಿವೆ.
ಈ ನಡುವೆ ಟೊಮೆಟೋ ಜತೆಗೆ ಈರುಳ್ಳಿ ಕೊರತೆ ಕೂಡ ಪಾಕ್ ಮಾರುಕಟ್ಟೆಗಳನ್ನು ತೀವ್ರವಾಗಿ ಬಾಧಿಸುತ್ತಿದೆ. ಆದರೆ ಸದ್ಯವೇ ಬಲೂಚಿಸ್ಥಾನದಿಂದಾಗುವ ಪೂರೈಕೆಯಿಂದ ಈರುಳ್ಳಿ ಕೊರತೆ ನೀಗುವುದೆಂದು ಹಾರೈಸಲಾಗಿದೆ.
ಟೊಮೆಟೋ, ಈರುಳ್ಳಿ ಮತ್ತಿತರ ತರಕಾರಿಗಳ ಕೊರತೆ ತೀವ್ರವಾಗಿ ಬಾಧಿಸುತ್ತಿರುವ ಹೊರತಾಗಿಯೂ ಪಾಕಿಸ್ಥಾನ ಭಾರತದಿಂದ ಯಾವುದೇ ತರಕಾರಿಯನ್ನು ಆಮದಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿರುವುದೇ ಪಾಕಿಸ್ಥಾನದ ಈ ನಿಲುವಿಗೆ ಕಾರಣವಾಗಿದೆ.