ಉತ್ತರಕಾಶಿ (ಉತ್ತರಾಖಂಡ): ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಟೊಮೇಟೊ ಬೆಲೆ ಗಗನಕ್ಕೇರಿದೆ. ಕರ್ನಾಟಕದಲ್ಲಿ ಕೆಜಿಗೆ ಟೊಮೆಟೊ 120-150 ರೂ.ವರೆಗೆ ಮಾರಾಟವಾಗುತ್ತಿದ್ದರೆ ಬೇರೆ ರಾಜ್ಯಗಳಲ್ಲಿ 250 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ.
ಗಂಗೋತ್ರಿಧಾಮದಲ್ಲಿ ಕೆಜಿಗೆ 250 ರೂ. ಮತ್ತು ಉತ್ತರಕಾಶಿ ಜಿಲ್ಲೆಯಲ್ಲಿ ಕೆಜಿಗೆ 180ರೂ.ನಿಂದ 200 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಗಂಗೋತ್ರಿ, ಯಮುನೋತ್ರಿಯಲ್ಲಿ, ಟೊಮೆಟೊ ಕೆಜಿಗೆ 200 ರೂ.ನಿಂದ 250 ರೂ.ಗೆ ಮಾರಾಟವಾಗುತ್ತಿದೆ ಎಂದು ತರಕಾರಿ ಮಾರಾಟಗಾರ ರಾಕೇಶ್ ಅವರು ಸುದ್ಧಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಪ್ರಮುಖ ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಹೆಚ್ಚಾದ ತಾಪಮಾನ ಹಾಗೂ ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆಗಳು ಹೆಚ್ಚಾಗಿವೆ.
ಟೊಮೇಟೊ ಶ್ರೀಮಂತರಿಂದ ಹಿಡಿದು ಜನಸಾಮಾನ್ಯನ ವರೆಗೆ ಎಲ್ಲ ವರ್ಗದ ಜನರೂ ತಮ್ಮ ಆಹಾರದಲ್ಲಿ ಬಳಸುವ ತರಕಾರಿಯಾಗಿರುವುದರಿಂದ ಸಹಜವಾಗಿಯೇ ಈ ದಿಢೀರ್ ಬೆಲೆ ಏರಿಕೆ ಶ್ರೀಸಾಮಾನ್ಯನಿಗೆ ಭಾರೀ ಹೊರೆಯಾಗಿ ಪರಿಣಮಿಸಿದೆ.
ಹೆಚ್ಚುತ್ತಿರುವ ಟೊಮೆಟೊ ಬೆಲೆಯನ್ನು ಸರಿದೂಗಿಸಲು ತಮಿಳುನಾಡು ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಟೊಮೇಟೊ ಕಿಲೋಗೆ 60 ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಿದೆ.