ಲಖನೌ: ಉತ್ತರ ಪ್ರದೇಶದ ಕನೌಜ್‌ನಲ್ಲಿ (Kannauj) ನಿಯೋಜನೆಗೊಂಡಿದ್ದ ಸಬ್ ಇನ್‌ಸ್ಪೆಕ್ಟರ್ ರನ್ನು ಲಂಚವಾಗಿ “ಆಲೂಗಡ್ಡೆ”ಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ. “ಆಲೂಗಡ್ಡೆ” (Potato) ಎಂಬ ಪದವನ್ನು ಲಂಚದ ಕೋಡ್ ಆಗಿ ಬಳಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.
ಸೌರಿಖ್ ಪೊಲೀಸ್ ಠಾಣೆಯಡಿಯಲ್ಲಿ ಬರುವ ಬಹವಲ್ಪುರ್ ಚಾಪುನ್ನ ಚೌಕಿಯ ಇನ್ಸ್ ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಅವರನ್ನು ಅಮಾನತು ಮಾಡಿ ಕನೌಜ್ ಎಸ್ ಪಿ ಅಮಿತ್ ಕುಮಾರ್ ಅದೇಶಿಸಿದ್ದಾರೆ. ಅಲ್ಲದೆ ಇದೇ ವೇಳೆ ಇಲಾಖಾ ತನಿಖೆಯನ್ನು ಆದೇಶಿಸಲಾಗಿದೆ.
ವೈರಲ್ ಆಡಿಯೋದಲ್ಲಿ, ಆರೋಪಿ ಪೋಲೀಸ್ ಅಧಿಕಾರಿ ರೈತರೊಬ್ಬರಿಗೆ 5 ಕೆಜಿ “ಆಲೂಗಡ್ಡೆ” ಗಾಗಿ ಕೇಳಿದ್ದಾರೆ. ಆದರೆ ರೈತ ಈ ಬೇಡಿಕೆಯನ್ನು ಪೂರೈಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಬದಲಿಗೆ 2 ಕೆಜಿ ನೀಡುತ್ತಾರೆ. ಆಗ ಪೊಲೀಸ್ ಅಧಿಕಾರಿ ಕೋಪಗೊಂಡು ತನ್ನ ಮೂಲ ಬೇಡಿಕೆಯನ್ನು ಒತ್ತಿ ಹೇಳುತ್ತಾನೆ. ನಂತರ ಒಪ್ಪಂದವನ್ನು 3 ಕೆ.ಜಿಗೆ ಅಂತಿಮಗೊಳಿಸಲಾಗಿತ್ತು.
ಕನೌಜ್ ನಗರದ ಸರ್ಕಲ್ ಆಫೀಸರ್ ಕಮಲೇಶ್ ಕುಮಾರ್ ಅವರನ್ನು ತನಿಖಾ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.