Advertisement
ದೊಡ್ಡ ಕಾಯಿಪಲ್ಲೆ ಪ್ಯಾಟಿಗೆ ಹೋಗೂದಂದ್ರ ನನಗ ಹಬ್ಟಾನ ಹಬ್ಬ. ಹೋಗೋ ಸಂಭ್ರಮದಾಗ ಒಂದು ಬಾಸ್ಕೆಟ್‌ನ್ಯಾಗ ದೊಡ್ಡವು, ಸಣ್ಣವು ಪ್ಲಾಸ್ಟಿಕ್ ಚೀಲ ಇಟಗೊಂಡ ಬಿಸಲ ಇಳಿಯುವುದನ್ನು ನೋಡಿ ಹೊರಟ ಬಿಡತೇನಿ. ಖರೇ ಹೇಳಬೇಕಂದ್ರ ಪಲ್ಲೆ ಕೊಳ್ಳೋದಕ್ಕಿಂತ ಅದರ ತಾಜಾತನ, ಅದರ ಆಕಾರ, ಅದರ ಸೌಂದರ್ಯ ನೋಡೊದಿರತದ. ಹೊಟ್ಟಿಗೆ ಹಸಿವಿದ್ದಂಗ ಕಣ್ಣಿಗೂ ಹಸಿವಿ ಇರತದ. ಪ್ರೀತಿ ಮಾತ ಕೇಳಲಿಕ್ಕೆ ಕಿವಿಗೆ ಹಸಿವು ಇರತದ. ಒಳ್ಳೆ ಸುಗಂಧದ ವಾಸನಿಗೆ ಮೂಗು. ಇನ್ನ ನಾಲಿಗೆಗಂತೂ ಥರಥರದ ರುಚಿ ಬೇಕು. ಸ್ಪರ್ಶ ಸುಖದ ಬಗ್ಗೆ ಏನೇನ ಹೇಳಬೇಕು. ಎಷ್ಟೆಷ್ಟು ಹೇಳಬೇಕು. ಈ ಪಂಚೇಂದ್ರಿಯಗಳ ಸುಖ ಎಲ್ಲಾರಿಗೂ ಸಿಗೋದಿಲ್ಲರಿ. ಸಿಕ್ಕಷ್ಟು ಸಿಕ್ಕಿತು. ಸಿಗದಿದ್ದರೆ ಶಿವಾಯ ನಮಃ!
Related Articles
Advertisement
ಮಾರನೇ ದಿನದಿಂದ ನನ್ನ ಅಡುಗೆಮನೀ ಟೊಮೆಟೋದ ವಿವಿಧ ಪದಾರ್ಥಗಳ ತಯಾರಿಕೆಯ ಪ್ರಯೋಗಾಲಯ ಆತು! ಟೊಮೆಟೋ ಜ್ಯೂಸು, ಉಪ್ಪಿನಕಾಯಿ, ಚಟ್ನಿ, ಕೋಸಂಬ್ರಿ, ಟೊಮೆಟೋ ಉತ್ತಪ್ಪ, ಥಾಲಿಪಟ್ಟು, ಟೊಮೆಟೋ ಪಲಾವ, ಟೊಮೆಟೋ ದ್ವಾಸಿ, ಮತ್ತ ಎಂಟದಿನಾ ಮುಂಜೆನೆ ಸಂಜಿ, ಬಿಟ್ಟೂ ಬಿಡದಂಗ ಟೊಮೆಟೋದ ರಸಕ್ಕೆ ಒಗ್ಗರಣೆ ಹಾಕಿದ ಸಾರೇ ಸಾರು. ಒಂದಿನಾ ನನ್ನ ಮಗಾ ಬಂಡೆದ್ದು “”ಅವ್ವಾ , ಪ್ಲೀಜ್ ಒಂದ ಮಾಡವ್ವಾ, ನನ್ನ ಮ್ಯಾಲಿನ ನಿನ್ನ ಟೊಮೆಟೋ ಪ್ರಯೋಗ ಬ್ಯಾಡ, ಇನ್ನೆರಡು ತಿಂಗಳ ಅಡಗೇ ಮನ್ಯಾಗ, ಟೊಮೆಟೋ ಕಾಲಿಡೂ ಹಾಗಿಲ್ಲ” ಅಂದ.
“”ಪುಕ್ಕಟೆ ಅಂತ ಮೂರ್ ನಾಲ್ಕ ಕಿಲೋ ಕೊಂಡು ಏಳ ರಾಜ್ಯ ಗೆದ್ದಂಗ ಆಗಿರಬೇಕಲ್ಲೇನ ಅವ್ವಾ? ಸಾಕು ಸಾಕು ಅವ್ವಾ , ನಿನ್ನ ಪ್ರಯೋಗಾ ಬಂದ ಮಾಡು, ನಾನು ಎಲ್ಲಾ ಬಾಗಿಲಿಗೆ, ಕಿಡಕಿಗೆ ಟೊಮೆಟೋ ಸರಾ ಮಾಡಿ ಹಾಕತೀನಿ. ದೇವರ ಫೋಟೋಕ್ಕ ಹಾರಾ ಮಾಡತೇನಿ, ನನ್ನ ಸ್ಕೂಟರು, ನಿನ್ನ ಸ್ಕೂಟರು, ಅಪ್ಪನ ಕಾರು, ತಂಗೀ ಸೈಕಲ್ಲು, ಎಲ್ಲಾಕ್ಕೂ ಟೊಮೆಟೋ ಹಾರಾ ಮಾಡತೇನವ್ವಾ. ಆದ್ರ ಇನ್ನಮ್ಯಾಲೆ ಟೊಮೆಟೋದ ಅಡಿಗಿ ಪ್ರಯೋಗ ಮುಗಿಸಿಬಿಡವ್ವ ಕೈ ಮುಗಿತೀನಿ” ಅಂದ. ನಾನು ಹೊಟ್ಟಿ ಹುಣ್ಣಾಗುವಂಗ ನಕ್ಕೆ. ಅವನೂ ನಕ್ಕ.
ನಮ್ಮ ಬಳಗದವರು, ಸ್ನೇಹಿತರು ದಿನಾ ಯಾರರೇ ಮನಿಗೆ ಬಂದೇ ಬರತಾರ. ಹತ್ತ ಹತ್ತ ಟೊಮೆಟೋನ ಹತ್ತ ಪ್ಲಾಸ್ಟಿಕ್ ಚೀಲಾ ಕಟ್ಟಿಟ್ಟು ಮನಸ್ಸಿನೊಳಗ ಖುಷ್ ಆದೆ. ಬಂದವರಿಗೆ ಹೋದವರಿಗೆ ಗಿಫ್ಟ್ ಗಿಫ್ಟ್ಂತ ಕೊಟ್ಟರ ಅವರು ಶಬ್ಯಾಸ್ ಕೊಡತಾರ ಅಂತ ನಕ್ಕೆ. ಆದ್ರ ನನ್ನ ಲೆಕ್ಕಾಚಾರ ತಪ್ಪಿ ಹೋತು. ಬಂದಾವರಿಗೆ ಕೊಟ್ಟ ಚೀಲಾ ಅವರ ಹೋದ ಮ್ಯಾಲೆ ನೋಡಿದ್ರ ಅಲ್ಲೆ ಇಲ್ಲೆ ಮರೀಯೊಳಗ ನನ್ನ ಮನ್ಯಾಗ ಕುಂತಬಿಟ್ಟಿದ್ದವು. ಅದೇನೋ ಅಂತಾರಲ್ಲಾ “ಬೂಮೆರಾಂಗ’ ಅಂತ ತೂರಿದ ವಸ್ತು ತಿರಗಿ ಅದ ಕೈಗೆ ಬರ್ತದಲ್ಲಾ ಹಂಗ. ಈ ಪ್ರಯೋಗಾನೂ ಫೇಲಾತು. ಇನ್ನೇನು ಮಾಡೋದು ಅಂತ ಅಂದಾಗ ಹೊಳದ ವಿಚಾರ ದಾನಾ ಮಾಡಬೇಕು ಅನ್ನಿಸಿತು. ತಕ್ಷಣ ಅಟೋರಿಕ್ಷಾ ಮಾಡಿಕೊಂಡ ದೊಡ್ಡ ಚೀಲಾ ತುಂಬಿಕೊಂಡ ಹೊಂಟೆ. ರಿûಾದಾಗ ಬರೂದು ಹೋಗುದಕ್ಕ 200 ರೂಪಾಯಿಗೆ ಹೊಂದಿಸಿದೆ. ಅನಾಥಾಶ್ರಮದ ಬಾಗಲಾ ಹೊಕ್ಕೆ. ಆಫೀಸಿನ ಕ್ವಾಣ್ಯಾಗ ಒಬ್ಬರು ಕೂತಿದ್ರು, “ಏನು ಬೇಕು?’ ಅಂದ್ರು, “”ಏನೂ ಇಲ್ಲಾ ಒಂದಿಷ್ಟು ಟೊಮೆಟೋ ಕೊಟ್ಟು ಹೋಗೋಣಾ ಅಂತಾ ಬಂದೆ” ಅಂದೆ. ಆ ಮನಶ್ಯಾ ನಕ್ಕ ಬಿಟ್ಟ. “”ಅವ್ವಾ ಅವರ ನಿನ್ನೆ ನಾವೂ ಮೂರು ಗೋಣಿ ಚೀಲಾ ತುಂಬಿ ತುಂಬಿ 50 ಕೆ.ಜಿ. ಟೊಮೆಟೋ ಹಣ್ಣು ಪುಕ್ಕಟೆಯಾಗಿ ತಂದ್ವಿರಿ” ಅಂದ. ದಾನದ ಧಿಮಾಕನ್ಯಾಗ ಕುಂಬಳಕಾಯಿ ಆಗಿದ್ದ ನನ್ನ ಮಾರಿ ಈಗ ಸುಟ್ಟ ಬದನೆಕಾಯಿ ಆತು. ಪಿಟ್ ಅಂತ ಅನ್ನದೆ ಹೊಂಟು ಬಂದು ಮನೀ ಸೇರಿದೆ. 200 ರೂಪಾಯಿ ಕಳದೆ, ನನ್ನ ಮಿಶನ್ನೂ ಫೇಲ್ ಆತು ಅಂತ ಮನಸ್ಸಿನ್ಯಾಗ ಮರ ಮರ ಮರುಗಿದೆ.
ಹಿಂಗ ನಾಲ್ಕ ದಿನಾ ಕಳದವು. ಇನ್ನ ಉಳಿದ ಟೊಮೆಟೋ ಹ್ಯಾಂಗ ಖರ್ಚು ಮಾಡೋದು ಅಂತ ಯೋಚನೆಯಲ್ಲಿ ಗಂಟೆಗಟ್ಟಲೇ ಕೂತೆ. ಹಾ… ಆಗ ಬುದ್ಧಗ ಜ್ಞಾನೋದಯ ಆದಂಗ ನನಗೂ ಒಂದು ಉಪಾಯದ ಉದಯ ಆತು. ಕಂಪನೀ ನಾಟಕದ ಪಾತ್ರದಾಂಗ ಎದ್ದು ನಿಂತು ನನಗೆ ನಾನೇ ಹೇಳಕೊಂಡೆ. “”ಓ ಹುಲು ಮಾನವಾ, ನಿನಗೆ ಕೊಟ್ಟರೆ ನನಗೇನು ಬಂದೀತು? ಈ ಜಗತ್ತಿನೊಳಗ ಪ್ರಾಣಿಪಕ್ಷಿ ಇರುವಾಗ ಅವರಿಗೆ ದಾನ ಮಾಡಿದರೆ ಅವು ಒಲ್ಲೆ ಬ್ಯಾಡ ಅಂತ ಅನ್ನುವವೇ ಎಂದಾದರೂ? ಇಲ್ಲಾ” ಅನ್ನುತ್ತ ಕೊಳೆತ ಹಣ್ಣುಗಳನ್ನು ತೆಗೆದು ಉಳಿದ ಒಂದು ಕಿಲೋ ಹಣ್ಣು ಅವು ಬೆಳಗಾದರೆ ಕೊಳತೇ ಹೋಗುವಂಥವು. ಇನ್ನ ಪೇಟೆಯೊಳಗೆ ಹಸು ಪರದಾಡುವ ತುಡುಗು ದನಕ್ಕೆ ತಿನ್ನಿಸಿದರಾಯಿತು ಅಂದುಕೊಂಡೆ. ನನ್ನ ಪ್ರಾಣಿದಯೆಯ ವಿಚಾರಕ್ಕೆ ನನಗ ಹೆಮ್ಮೆ ಎನಿಸಿತು. ಮತ್ತೆ ಹೊರಟೆ ನೋಡ್ರಿ, ನನ್ನ ಸ್ವರ್ಗದಂಥ ಪೇಟೆಗೆ.
ಎದುರಿಗೆ ಒಂದು ಆಕಳು ಒಂದು ಸಿವಡು ಮಂತೆ ತುಡುಗು ಮಾಡಿದ್ದಕ್ಕೆ ಪಲ್ಲೆಯವಳು ಬಡಿಗೆಯಿಂದ ಅದರ ಮುಖಕ್ಕೆ ಮಾರಿಗೆ ಬಾರಿಸಿ, ಅರ್ಧ ತಿಂದ ಸಿವಡನ್ನು ಎಳೆದುಕೊಂಡು ಚೆಂದ ಚೆಂದ ಬೈಗುಳ ಬೈಯುತ್ತ ಹೋದಳು. ಆಕಳು ನಿರ್ವಾಹವಿಲ್ಲದೆ ಬೇರೆ ಕಡೆ ಹೊರಟಿತು. ನಾನು ಹತ್ತಿರ ಹೋಗಿ ಮೈಮೇಲೆ ಕೈಯಾಡಿಸಿ ಮನಸ್ಸಿನ್ಯಾಗ ಹಾಡಿದೆ. “ಗಂಗೆ ಬಾರೆ ಗೌರಿ ಬಾರೆ, ತುಂಗಭದ್ರೆ ತಾಯಿ ಬಾರೆ’ ಅನ್ನುತ್ತ ಟೊಮೆಟೋದ ಚೀಲಾ ಮುಂದೆ ಸುರಿವಿದೆ. ಸುರವಿದ್ದೇ ತಡ, ಯಾವ ಜನ್ಮದ ಹಸಿವಿತ್ತೋ ಏನೋ ಗಬಗಬ ತಿನ್ನತ್ತ ಒಮ್ಮೊಮ್ಮೆ ನನ್ನತ್ತ ಕೃತಜ್ಞತೆಯಿಂದ ನೋಡುತ್ತ ಹೊಟ್ಟೆ ತುಂಬಿಕೊಂಡಿತು. ಆ ಪ್ರಾಣಿಯ ಕೃತಜ್ಞತೆಯ ನೋಟ ನನ್ನ ಜನ್ಮಕ್ಕೆ ಸಾರ್ಥಕತೆ ತಂದಂತೆ ಆಗಿತ್ತು.
ಮನೆಗೆ ಬಂದು ಉಳಿದ ಕೊಳೆತ ಟೊಮೆಟೋಗಳನ್ನು ಒಂದು ಬುಟ್ಟಿಯಲ್ಲಿಟ್ಟುಕೊಂಡು ಖನ್ನ ಮನಸ್ಸಿನಿಂದ ಹಿತ್ತಲದಲ್ಲಿ ಮೂಲೆಯೊಳಗ ಸುರುವುತ್ತ ಇಲ್ಲಿಗೆ ಟೊಮೆಟೋ ರಾಮಾಯಣದ ಕಥೆ ಮುಗಿಯಿತಪಾ ಅನ್ನುತ್ತ, ಮತ್ತೂಮ್ಮೆ ಟೊಮೆಟೋ ಪುಕ್ಕಟೆ ಕೊಟ್ಟವನನ್ನ ನೆನೆಯುತ್ತ ನಾನು ಟೊಮೆಟೊ ಖರ್ಚ ಮಾಡಲಿಕ್ಕೆ ಎಂಥ ಶತಪ್ರಯತ್ನ ಮಾಡಿದೆ ಅಂತ ಮನಸ್ಸಿನಲ್ಲೇ ಹೇಳುತ್ತ ಆ ಬಡ ರೈತನಿಗೆ ಮನಸ್ಸಿನಲ್ಲೇ ಕೈಮುಗಿದೆ. ನಮ್ಮ ಸರಕಾರ ಹೀಗೆ ಹೆಚ್ಚು ಬೆಳೆದ ರೈತರ ಕೈ ಹಿಡಿದುಕೊಂಡು ಒಂದಿಷ್ಟು ದುಡ್ಡು ಪಾವತಿಸಿದರೆ ರೈತ ಬಾಂಧವರು ಎಷ್ಟು ಖುಷಿ ಪಡಬಲ್ಲರು ಎನ್ನುತ್ತ ನಿರಾಶಾದ ಕತ್ತಲ್ಯಾಗ ಆಶಾದ ದೀಪಾ ಹಚ್ಚಿಟ್ಟೆ.
ಎಂಟು ದಿನ ಕಳೆದಿರಬಹುದು. ಏನೋ ಕಾರಣಕ್ಕೆ ಹಿತ್ತಲಕ್ಕೆ ಹೋದೆ. ನನ್ನ ಕಣ್ಣು ಕೊಳೆತ ಟೊಮೆಟೋ ಚೆಲ್ಲಿದ ಮೂಲೆಯತ್ತ ಹೋದವು. ಓ ದೇವರೆ! ಎರಡೆರಡು ಪುಟ್ಟ ಎಲೆಗಳನ್ನು ಬಿಟ್ಟು ಎರಡೆರಡು ಕೈಯೆತ್ತಿ ಕರೆವ ಮಕ್ಕಳಂತೆ ಮೂವತ್ತು ನಾಲ್ವತ್ತು ಟೊಮೆಟೋ ಸಸಿಗಳು. ಬೇಡವೆಂದು ಚೆಲ್ಲಿದ ಟೊಮೆಟೋ ಮತ್ತೆ ಹತ್ತು ಪಟ್ಟಾಗಿ ಬೆಳೆದು ನಿಂತ ಎಳೆಯ ಸಸಿಗಳ ದೃಶ್ಯಕ್ಕೆ ನಾನು ಬೆರಗಾದೆ. ನನ್ನ ವಿಷಣ್ಣತೆ ಮಾಯವಾಗಿ ಹರ್ಷ ಉಕ್ಕಿತು. “ನೀನು ಚೆಲ್ಲಿದರೆ ಏನಾಯಿತು ಮತ್ತೆ ಬಂದಿದ್ದೇವವ್ವಾ ನಮ್ಮನ್ನು ಸ್ವಾಗತಿಸು’ ಅನ್ನುವಂತೆ ತಾಜಾ ಸಸಿಗಳು ಮೌನದ ಮಾತು ಹೇಳಿದವು.
ನನ್ನ ಟೊಮೆಟೋ ರಾಮಾಯಣ ಮುಗಿಯಲಿಲ್ಲ. ಮತ್ತೆ ಶುರುವಾಯ್ತು ಅಂದುಕೊಂಡೆ. ರಾಮಾಯಣದ ಸೀತಾ ಕಟ್ಟಕಡೇಕ ಭೂಮಿತಾಯಿ ಸೇರಿಬಿಟ್ಲು ಆದರ ನಮ್ಮ ಟೊಮೇಟೋ ಸಸಿಗಳೆಲ್ಲ ಭೂಮ್ಯಾಗಿಂದ ಮತ್ತ ಹುಟ್ಟಿ ಬಂದವು! ಟೊಮೆಟೋ ಕೊಟ್ಟ ಆ ರೈತನ ಔದಾರ್ಯವನ್ನ ನೆನೆದು ಸಾರ್ಥಕ ಭಾವದಾಗ ಸಂತಸಪಟ್ಟೆ. “ನೀನು ಕೊಟ್ಟಿದ್ದನ್ನು ತಮ್ಮಾ ನಾ ಹಾಳು ಮಾಡಿಲ್ಲಪ್ಪಾ ಬೆಳೆದಿದ್ದೇನೆ’ ಅಂತ ಅನ್ನುತ್ತ ಕೃತಜ್ಞತೆಯಿಂದ ಕೈ ಮುಗಿದೆ.
ಆ ಸಂಜೆಯ ಮುಗಿಲಿನತ್ತ ನೋಡಿದಾಗ ಅದರ ತುಂಬ ಬೆಳ್ಳಕ್ಕಿ ಹಿಂಡು ಮನೆಯತ್ತ ಹೊರಟ ಸುಂದರ, ಅಪರೂಪದ ನೋಟ ಕಣ್ಣತುಂಬಿಕೊಂಡಿತು. ನನ್ನ ಕೃತಜ್ಞತ ಭಾವಗಳ ಹಕ್ಕಿಗಳೂ ಹೀಗೆಯೇ ಆ ಬಡ ರೈತನತ್ತ ಹೊರಟಿವೆ ಎಂದು ಭಾವಿಸುತ್ತ ಎಷ್ಟೋ ಹೊತ್ತು ಹಾಗೇ ನಿಂತುಕೊಂಡೆ.
ಮಾಲತಿ ಪಟ್ಟಣಶೆಟ್ಟಿ