ಮಾಗಡಿ: ಟೊಮೆಟೋ ಸೇರಿದಂತೆ ಇತರೆ ತರಕಾರಿ ಬೆಲೆ ದಿಢೀರ್ ಕುಸಿತದಿಂದ ಟೊಮೆಟೋ ಬೆಳೆಗಾರರು ಕಂಗಾಲಾಗಿದ್ದಾರೆ. ತಾಲೂಕಿನ ಬಹುತೇಕ ರೈತರು ತರಕಾರಿ ಬೆಳೆ ಬೆಳೆದು ಬದುಕಿನ ಬಂಡಿ ಸಾಗಿಸುತ್ತಿದ್ದು, ತೋಟಗಾರಿಕೆ ಬೆಳೆ ಬೆಳೆದು ಮಾರುಕಟ್ಟೆ ತಂದರೆ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
10 ಕೆ.ಜಿ ಟೊಮೆಟೋ ಬ್ಯಾಗ್ ಕೇವಲ 10ರಿಂದ 20 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಖರೀದಿಸಿದ ವ್ಯಾಪಾರಿಗಳು
10 ರೂ.ಗೆ ಮೂರು ಕೆಜಿ ಎಂದು ಕೂಗಿ ಮಾರಾಟ ಮಾಡುತ್ತಿದ್ದಾರೆ. ಹುರುಳಿಕಾಯಿ ಕೆಜಿಯೊಂದಕ್ಕೆ 20 ರೂ., ಅಲೂಗಡ್ಡೆ, ಬದನೆಕಾಯಿ ಕೆ.ಜಿಗೆ 10 ರೂ., ಮೂಲಂಗಿ ಕಟ್ಟು 10 ರೂ., ದಂಟಿನ ಸೊಪ್ಪು, ಕೊತ್ತಂಬರಿ, ಸಬ್ಬಕ್ಕಿ ಸೊಪ್ಪು ಕಟ್ಟು 10 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ರೈತರು ಭೂಮಿ ಹದ ಮಾಡಿಕೊಂಡು ವಿವಿಧ ತರಕಾರಿ ಬೆಳೆ, ಟೊಮೆಟೋ ಸಸಿ ನೆಟ್ಟು ಮೂರು ತಿಂಗಳುಗಳ ಕಾಲ ಪೋಷಣೆ ಮಾಡಿ ಟೊಮೆಟೋ ಬೆಳೆದರೆ ಖರೀದಿಸುವವರಿಲ್ಲದೆ ತೋಟದಲ್ಲೇ ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ದಿನಕ್ಕೆ 500 ರೂ. ಕೂಲಿ ಕೊಟ್ಟು ಟೊಮೆಟೋ ಹಣ್ಣನ್ನು ಬಿಡಿಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ ಕನಿಷ್ಠ ಟೊಮೆಟೋ ಬಿಡಿಸಿದ ಕೂಲಿ ಸಿಗುತ್ತಿಲ್ಲ. ಹುರುಳಿಕಾಯಿ ಇತರೆ ತರಕಾರಿಯ ಬೆಲೆಯ ಗತಿಯೂ ಇದಕ್ಕೆ ಹೊರತಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ರೈತರು ಕಂಗಾಲಾಗಿದ್ದು, ಬ್ಯಾಂಕ್ ಗಳಲ್ಲಿ ಸಾಲ ಮಾಡಿ ತೋಟಗಾರಿಕೆ ಬೆಳೆದು ಜೀವನ ನಡೆಸಲು ಆಗದ ಪರಿಸ್ಥಿತಿ ರೈತರದಾಗಿದೆ. ಹೀಗಾದರೆ ಜೀವನವೂ ಕಷ್ಟ, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಇನ್ನೂ ಕಷ್ಟ. ಪಡೆದ ಸಾಲ ತೀರಿಸಲಾಗುತ್ತಿಲ್ಲ. ತುಂಬ ಕಷ್ಟ ಹೀಗಾದರೆ ರೈತರ ಬದುಕಿನ ಬಂಡಿ ಅಧೋಗತಿ ತಲುಪಿದೆ.
ಸರ್ಕಾರ ಬೆಂಬಲ ಬೆಲೆ ನೀಡದಿರುವುದೇ ಕಾರಣ: ತಮ್ಮನ್ನಾಳುವ ಸರ್ಕಾರಗಳು ರೈತರಿಗೆ ಅನುಕೂಲವಾಗುವಂತ ಯಾವುದೇ ಬೆಂಬಲ ಬೆಲೆ ನಿಗದಿಯ ಯೋಜನೆಗಳನ್ನು ರೂಪಿಸದಿರುವುದೇ ರೈತರ ನಷ್ಟಕ್ಕೆ ಕಾರಣವಾಗಿದೆ ಎಂದು ರೈತ ಕಲ್ಲೂರು ರಂಗನಾಥ್ ಅಳಲನ್ನು ತೋಡಿಕೊಂಡಿದ್ದಾರೆ. ಎರಡು ಎಕರೆಯಲ್ಲಿ ಟೊಮೆಟೋ ಬೆಳೆ ಇಟ್ಟಿದ್ದೇನೆ. ಪ್ರತಿದಿನ ಎರಡು ಟ್ರ್ಯಾಕ್ಟರ್ ಟೊಮೆಟೋ ಬಿಡಿಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ ಕನಿಷ್ಠ ಟ್ರ್ಯಾಕ್ಟರ್ ಡಿಸೇಲ್‌ಗೆ ಹಣ ಸಿಗುತ್ತಿಲ್ಲ ಎಂದ ಮೇಲೆ ಟೊಮೆಟೋ ಎಲ್ಲಿಗೆ ಕೊಂಡೊಯ್ಯಬೇಕು. ಕೂಲಿಯನ್ನು ಸಹ ಸಾಲ ಮಾಡಿ ಕೊಟ್ಟಿದ್ದೇವೆ ಎಂದ ಮೇಲೆ ಟೊಮೆಟೋ ಏಕೆ ಬಿಡಿಸಬೇಕೆಂದು ಪ್ರಶ್ನಿಸಿದರು.
ಕೂಲಿಯಾದರೂ ಸಿಗುತ್ತಿಲ್ಲ: ಟೊಮೆಟೋ ಹಣ್ಣನ್ನು ಗಿಡದಿಂದ ಬಿಡಿಸುವುದನ್ನೇ ನಿಲ್ಲಿಸಿದ್ದೇವೆ. ಕನಿಷ್ಠ ಹಣ್ಣು ಕೀಳುವ
ಕೂಲಿಯಾದರೂ ಉಳಿಯುತ್ತದೆ ದಾನ, ಧರ್ಮ ಮಾಡಿದರೆ ಒಳ್ಳೆಯದಾದರೂ ಆಗುತ್ತದೆ ಎಂದು ಯಾರದರೂ ತೋಟಕ್ಕೆ
ಬಂದು ಎಷ್ಟು ಬೇಕಾದರೂ ಟೊಮೆಟೋ ಕಿತ್ತು ಕೊಂಡು ಹೋಗಿ ತಿನ್ನಲಿ ಎಂದು ಸುಮ್ಮನಾಗಿದ್ದೇನೆ ಎಂದು ಬೇಸರ
ವ್ಯಕ್ತಪಡಿಸಿದರು.
ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸದಿದ್ದರೆ ರೈತರ ಬದುಕು ನಶಿಸಿ ಹೋಗಲಿದೆ ಎಂಬ ಆತಂಕವನ್ನು ಕಲ್ಲೂರು ರಂಗನಾಥ್ ವ್ಯಕ್ತಪಡಿಸಿದರು ತಮ್ಮಂತೆ ತಮ್ಮ ಮಕ್ಕಳು ಕಷ್ಟ ಅನುಭವಿಸುವುದು ಬೇಡ. ಎಲ್ಲಾದರೂ ನಗರ ಪ್ರದೇಶಕ್ಕೆ ಹೋಗಿ ಕೂಲಿನಾಲಿ ಮಾಡಿ ಬದುಕು ಕಟ್ಟಿಕೊಳ್ಳಲಿ ಎಂದು ಯಾವ ರೈತನೂ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗುತ್ತಿಲ್ಲ. ತನ್ನಂತೆ ಅನೇಕ ರೈತರು ಬೆಳೆದ ಹಣ್ಣು, ತರಕಾರಿ, ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸದೆ ಇರುವುದೇ ರೈತರು ನಷ್ಟಕ್ಕೊಳಗಾಗುತ್ತಿರುವುದು, ಆತ್ಮಹತ್ಯೆಗೆ ದಾರಿ ಹಿಡಿಯುತ್ತಿರುವುದು. ಕನಿಷ್ಠ ಜೀವನದ ಆಧಾರಕ್ಕಾದರೂ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದ ಮೇಲೆ ಬೆಳೆ ಏಕೆ ಬೆಳೆಯಬೇಕು.
ರಂಗನಾಥ್, ರೈತ, ಕಲ್ಲೂರು
ತಿರುಮಲೆ ಶ್ರೀನಿವಾಸ್