ಚಿಕ್ಕಬಳ್ಳಾಪುರ: ಒಂದೂವರೆ ತಿಂಗಳ ಹಿಂದೆ ದೇಶಾದ್ಯಂತ ಮಾರುಕಟ್ಟೆಯಲ್ಲಿ ತನ್ನ ಬೆಲೆ ಹೆಚ್ಚಿಸಿ ಕೊಂಡು ಅಲ್ಲೋಲ ಕಲ್ಲೋಲ ಸೃಷ್ಠಿಸಿದ್ದ ಟೊಮೇಟೊ ದರ ಈಗ ಪತಾಳಕ್ಕೆ ಕುಸಿದಿದೆ.
ಕೆ.ಜಿ. ಟೊಮೇಟೊ 6 ರಿಂದ 8ರೂ.ಗೆ ಮಾರಾಟವಾಗುತ್ತಿದ್ದು, 15 ಕೆ.ಜಿ. ಟೊಮೇಟೊ ಬಾಕ್ಸ್ ಮಾರುಕಟ್ಟೆಯಲ್ಲಿ 80 ರಿಂದ 100 ರೂ.ಗೆ ಮಾರಾಟಗೊಳ್ಳುತ್ತಿದೆ.
ಜುಲೈ, ಆಗಸ್ಟ್ ತಿಂಗಳಲ್ಲಿ ಟೊಮೇಟೊ 15 ಕೆ.ಜಿ. ಬಾಕ್ಸ್ 200 ರೂ, ಗಡಿ ದಾಟಿತ್ತು. ಚಿಲ್ಲರೆ ಮಾಡು ಕಟ್ಟೆಯಲ್ಲಿ ಅಂತೂ ಟೊಮೇಟೋಗೆ ಚಿನ್ನದ ಬೆಲೆ ಬಂತು ಕೆ.ಜಿ. ಟೊಮೇಟೊ ದರ 150ರಿಂದ 200ರೂ , ಅಸುಪಾಸಿನವರೆಗೂ ಮಾರಾಟಗೊಂಡು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೇಟೊ ಈಗ ಬೇಡಿಕೆ ಕಳೆದು ಕೊಂಡಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಟೊಮೇಟೊ ಬೆಳೆಯುವ ಜಿಲ್ಲೆಯಲ್ಲಿ ಶುಕ್ರವಾರ ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೇಟೊ 15 ಕೆ.ಜಿ. ಬಾಕ್ಸ್ 60, 70 ರೂಗೆ ಮಾರಾಟವಾದರೆ ಉತ್ತಮ ಗುಣಮಟ್ಟದ ಟೊಮೇಟೊ ಕೇವಲ 90 ರಿಂದ 100 ರೂ, ವರೆಗೂ ಮಾರಾಟಗೊಂಡಿತು. ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಟೊಮೇಟೊ ದರ ಗಗನಕ್ಕೇರಿದ್ದನ್ನು ನೋಡಿ ರೈತರು ಲಕ್ಷಾಂತರ ಸಂಖ್ಯೆಯಲ್ಲಿ ಟೊಮೇಟೊ ಸಸಿಗಳನ್ನು ಪೈಪೋಟಿಗೆ ಇಳಿದು ನಾಟಿ ಮಾಡಿದರು.
ಇದೀಗ ಫಸಲು ಆರಂಭ ವಾಗಿ ಮಾರು ಕಟ್ಟೆಗೆ ಟೊಮೇಟೊ ನಿರೀಕ್ಷೆಗೂ ಮೀರಿ ಬರಲಾಂಭಿಸಿದ್ದು ಬೆಲೆ ಮಾತ್ರ ರೈತರಿಗೆ ನಿರಾಸೆ ಮೂಡಿಸಿದೆ. ಒಂದೂವರೆ ತಿಂಗಳ ಬಳಿಕ ಟೊಮೇಟೊ ದರ ತೀವ್ರ ಇಳಿಕೆ ಕಂಡಿದ್ದು, ಹಾಕಿದ ಬಂಡವಾಳ ಕೂಡ ಕೈ ಸೇರಿದೇ ಸಾಲ, ಸೋಲ ಮಾಡಿ ಟೊಮೇಟೊ ಬೆಳೆ ಇಟ್ಟಿರುವ ರೈತರು ಈ ಕೈ ಸುಟ್ಟುಕೊಳ್ಳುವಂತಾಗಿದೆ.
ಸದ್ಯ ಮಾರು ಕಟ್ಟೆಯಲ್ಲಿ ಟೊಮೇಟೊಗೆ ಸಿಗುತ್ತಿರುವ ಬೆಲೆಯಿಂದ ತೀವ್ರ ಕಂಗಾಲಾಗಿರುವ ರೈತರ ಸ್ಥಿತಿ ದಿಕ್ಕು ತೋಚದಂತಾಗಿದೆ.
ಮಾರುಕಟ್ಟೆಯಲ್ಲಿ ಹರಾಜುಗಾಗಿ ಗಂಟೆಗಟ್ಟಲೇ ಕಾದ ರೈತರು: ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ದರ ಕುಸಿತದಿಂದಾಗಿ ಟೊಮೇಟೊ ತಂದಿದ್ದ ರೈತರು ಹರಾಜಿಗಾಗಿ ಗಂಟೆಗಟ್ಟಲೇ ಕಾದರು. ಎಪಿಎಂಸಿ ವರ್ತಕರು ಕೂಡ ವ್ಯಾಪಾರಸ್ಥರಿಗೆ ಬಲವಂತದಿಂದ ಟೊಮೇಟೊ ಹರಾಜು ಕೂಗಿ ಮಾರಾಟ ಮಾಡಿದರು. ಒಂದಿಷ್ಟು ಟೊಮೇಟೊ 15 ಕೆ.ಜಿ. 60, 70 ರೂಗೂ ಮಾರಾಟಗೊಂಡಿದ್ದು ಕಂಡು ಬಂತು.
– ಕಾಗತಿ ನಾಗರಾಜಪ್ಪ