ರಾಮನಗರ: ಕಾಡಾನೆಗಳ ದಾಳಿಗೆ ರೈತರು ಬೆಳೆದ ಟೊಮ್ಯಾಟೋ ಬೆಳೆಗೆ ಹಾನಿಯಾಗಿರುವ ಘಟನೆ ಚನ್ನಪಟ್ಟಣದ ತಗಚಗೆರೆ, ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನವೀನ್ ಮರಿಸ್ವಾಮಿ ಎಂಬುವರಿಗೆ ಸೇರಿದ್ದ ಟೊಮ್ಯಾಟೋ ಬೆಳೆಯ ಮೇಲೆ ದಾಳಿ ಮಾಡಿದ ಕಾಡಾನೆಗಳ ಹಿಂಡು ಲಕ್ಷಾಂತರ ಮೌಲ್ಯದ ಬೆಳೆ ಹಾನಿ ಮಾಡಿದೆ.
ಟೊಮ್ಯಾಟೋಗೆ ಬಂಪರ್ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ರೈತರು ಒಳ್ಳೆಯ ಆದಾಯ ಪಡೆಯುವ ನಿರೀಕ್ಷೆ ಹೊಂದಿದ್ದರು. ಆದರೆ ಇದೀಗ ಕಾಡಾನೆ ಹಾವಳಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಗಚಗೆರೆ ಗ್ರಾಮದ ಶಶಿಧರ ಎಂಬುವರಿಗೆ ಸೇರಿದ ತೆಂಗಿನ ಮರಗಳು ಕಾಡಾನೆ ದಾಳಿಗೆ ನಾಶವಾಗಿವೆ. ದೊಡ್ಡದಾದ ಐದು ತೆಂಗಿನ ಮರಗಳು, 10 ಕ್ಕೂ ಹೆಚ್ಚು ಸಸಿಗಳಿಗೆ ಹಾನಿಯಾಗಿದೆ. ಪಕ್ಕದ ತೋಟದಲ್ಲಿಯೂ ತೆಂಗು, ಟೊಮ್ಯಾಟೊ ಬೆಳೆ ನಾಶವಾಗಿದೆ.
ಕಳೆದೊಂದು ತಿಂಗಳಿನಿಂದ ಈ ಭಾಗದಲ್ಲಿ ನಿರಂತರ ಕಾಡಾನೆ ದಾಳಿಯಾಗುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.