ಹೊಸದಿಲ್ಲಿ : ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಅತೀ ದೊಡ್ಡ ಹಿನ್ನಡೆ ಎಂಬಂತೆ ಹಿರಿಯ ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ಅವರ ನಿಕಟವರ್ತಿ ಟಾಮ್ ವಡಕ್ಕನ್ ಅವರು ನಿರ್ಣಾಯಕ 2019ರ ಲೋಕಸಭಾ ಚುನಾವಣೆಗೆ ಮುನ್ನವೇ ಇಂದು ಗುರುವಾರ ಬಿಜೆಪಿ ಸೇರಿದರು.
ವಡಕ್ಕನ್ ಅವರನ್ನು ಹಿರಿಯ ಬಿಜೆಪಿ ನಾಯಕ, ಕೇಂದರ ಸಚಿವ ರವಿ ಶಂಕರ್ ಪ್ರಸಾದ್ ಅವರ ಸಮ್ಮುಖದಲ್ಲಿ ಮತ್ತು ಇತರ ಉನ್ನತ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಬಿಜೆಪಿ ಗೆ ಸೇರಿಸಿಕೊಳ್ಳಲಾಯಿತು.
ಬಿಜೆಪಿಗೆ ಅಧಿಕೃತವಾಗಿ ಸೇರಿದ ಒಡನೆಯೇ ಮಾಧ್ಯಮದವರೊಂದಿಗೆ ಮಾತನಾಡಿದ ವಡಕ್ಕನ್, ಪುಲ್ವಾಮಾ ಉಗ್ರ ದಾಳಿ ಮತ್ತು ಪಾಕ್ ಉಗ್ರ ಶಿಬಿರಗಳ ಮೇಲಿನ ಭಾರತೀಯ ವಾಯು ಪಡೆಯ ಪ್ರತಿ ದಾಳಿಯ ವಿಷಯದಲ್ಲಿ ಕಾಂಗ್ರೆಸ್ ಕೈಗೊಂಡಿರುವ ನಿಲುವು ನಿರಾಶಾದಾಯಕವಾಗಿದೆ ಎಂದು ಹೇಳಿದರು. ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅವರು ಪ್ರಶಂಸಿಸಿದರು.
‘ನಾನು 20 ವರ್ಷಗಳ ಕಾಲ ಇದ್ದ ನನ್ನ ಪಕ್ಷ (ಕಾಂಗ್ರೆಸ್) ಭಾರತೀಯ ಸೇನಾ ಪಡೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದಾಗ ನನಗೆ ಅತೀವ ನೋವಾಯಿತು’ ಎಂದು ವಡಕ್ಕನ್ ಹೇಳಿದರು.
‘ಭಾರವಾದ ಹೃದಯದಿಂದ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದೇನೆ. ರಾಷ್ಟ್ರ ಹಿತಾಸಕ್ತಿಗೆ ವಿರುದ್ಧವಾದ ಪಕ್ಷದ ನಿಲುವಿಗೆ ನೊಂದು ನಾನು ಪಕ್ಷವನ್ನು ಬಿಟ್ಟಿದ್ದೇನೆ’ ಎಂದು ಟಾಮ್ ವಡಕ್ಕನ್ ಅವರು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ವಡಕ್ಕನ್ ಅವರು ತನ್ನನ್ನು ಬಿಜೆಪಿಗೆ ಸೇರಿಸಿಕೊಂಡದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಅಮಿತ್ ಶಾ ಅವರಿಗೆ ಕೃತಜ್ಞತೆ ಹೇಳಿದರು.
ವಡಕ್ಕನ್ ಈ ಹಿಂದೆ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.