ಹೈದರಾಬಾದ್ : ಟಾಲಿವುಡ್ ಸ್ಟಾರ್ ದಂಪತಿ ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ವಿಚ್ಛೇದನ ಪಡೆಯುತ್ತಿರುವುದು ಖಚಿತವಾಗಿದೆ. ಇಂದು ಇನ್‍ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಸಮಂತಾ, ಪತಿ ನಾಗಚೈತನ್ಯ ಅವರಿಂದ ದೂರ ಆಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಈ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆದರೆ, ವಿಚ್ಛೇದನದ ವದಂತಿ ಬಗ್ಗೆ ಈ ಜೋಡಿ ಇದುವರೆಗೆ ತುಟಿ ಬಿಚ್ಚಿರಲಿಲ್ಲ. ಇದೀಗ ಅಂತೆ-ಕಂತೆಗಳಿಗೆ ತೆರೆ ಬಿದ್ದಿದ್ದು, ಪತಿ ನಾಗಚೈತನ್ಯ ಅವರಿಂದ ದೂರ ಆಗುತ್ತಿರುವುದಾಗಿ ಸಮಂತಾ ಹೇಳಿದ್ದಾರೆ.
ಇಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಸಮಂತಾ, ಸಾಕಷ್ಟು ಸಮಾಲೋಚನೆ ನಂತರ ನಾನು ಹಾಗೂ ಚೈ ಸತಿ-ಪತಿಯ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಅಭಿಮಾನಿಗಳು, ಆಪ್ತರು ಹಾಗೂ ಮಾಧ್ಯಮದವರಲ್ಲಿ ಮನವಿ ಮಾಡಿರುವ ಸಮಂತಾ, ಇಂತಹ ಕಷ್ಟದ ಸಂದರ್ಭದಲ್ಲಿ ನಮ್ಮ ಜೊತೆ ಸಹಕರಿಸಿ, ನಮ್ಮ ಖಾಸಗಿತನ ಗೌರವಿಸಿ. ನಾವು ಬೇರೆಯಾಗಲೇಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.