ಬೆಂಗಳೂರು: ಕನ್ನಡ,ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿರುವ ‘ರಾಬರ್ಟ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಶುಕ್ರವಾರ (ಫೆ.26) ಮುತ್ತಿನ ನಗರಿ ಹೈದರಾಬಾದಿನಲ್ಲಿ ಅದ್ಧೂರಿಯಾಗಿ ನಡೆಯಿತು. ಮುಸ್ಸಂಜೆ ವೇಳೆಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿಅದ್ಧೂರಿಯಾಗಿ ಜರುಗಿದ ಈ ಕಾರ್ಯಕ್ರಮ ವಿಶೇಷತೆಯೊಂದಕ್ಕೆ ಸಾಕ್ಷಿಯಾಯಿತು.
ಹೌದು, ಕರ್ನಾಟಕ, ಕನ್ನಡ ಹಾಗೂ ದರ್ಶನ್ ಅವರ ಬಗ್ಗೆ ಟಾಲಿವುಡ್ ಹಿರಿಯ ನಟ ಜಗಪತಿ ಬಾಬು ಅದ್ಭುತ ನುಡಿಗಳನ್ನಾಡಿದರು. ಮುಖ್ಯವಾಗಿ ‘ಡಿ ಬಾಸ್’ ಬಗ್ಗೆ ಮನದಾಳದ ಮಾತು ಹಂಚಿಕೊಂಡ ಬಾಬು, ದರ್ಶನ್ ಅವರು ನಿಜವಾದ ಹೀರೋ. ನಟರು ತುಂಬಾ ಇರುತ್ತಾರೆ. ತೆರೆಯ ಮೇಲೆ ನಾಯಕನಾಗುವುದು ದೊಡ್ಡ ವಿಷಯವಲ್ಲ. ಆದರೆ, ದರ್ಶನ್ ನಿಜ ಜೀವನದ ರಿಯಲ್ ಹೀರೋ ಎಂದು ಬಾಯ್ತುಂಬ ಹೊಗಳಿದರು.
ಪರೋಪಕಾರಿಯಾಗಿರುವ ದರ್ಶನ್ ಸಹಾಯ ಅರಸಿ ಬಂದವರಿಗೆ ಎಂದಿಗೂ ಇಲ್ಲ ಎನ್ನುವುದಿಲ್ಲ. ಹಿಂದೆ ಮುಂದೆ ಯೋಚಿಸದೆ ಯಾರಿಗೆ ಏನು ಬೇಕೋ ಅದನ್ನ ನೀಡುತ್ತಾರೆ, ಸಹಾಯ ಮಾಡುತ್ತಾರೆ. ದರ್ಶನ್ ಅವರ ದಾನಧರ್ಮದ ಬಗ್ಗೆ ತುಂಬಾ ಕೇಳಿದ್ದೆ ಆದರೆ, ಸ್ವತಃ ನಾನೇ ನೋಡಿದ ಮೇಲೆ ಅವರು ನಿಜವಾದ ಹೀರೋ ಅಂತಾ ನನಗೆ ಅನ್ನಿಸಿತು. ಒಮ್ಮೆ ಮಾತು ನೀಡಿದರೆ ಎಷ್ಟೇ ಕೋಟಿ ಖರ್ಚಾದರೂ ಅದನ್ನು ನೆರವೇರಿಸುತ್ತಾರೆ. ಚಿತ್ರೀಕರಣಕ್ಕೆ ತೆರಳಿದ ನನ್ನನ್ನು ಮನೆಯ ಅತಿಥಿಯಂತೆ ನೋಡಿಕೊಂಡರು.
ಮೈಸೂರಿನಲ್ಲಿ ನಡೆಯುತ್ತಿದ್ದ ಉಮಾಪತಿ ನಿರ್ಮಾಣದ ಬೇರೆ ಚಿತ್ರದ ಚಿತ್ರೀಕರಣಕ್ಕೆ ನಾನು ತೆರಳಿದ್ದೆ. ಈ ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ದರ್ಶನ್, ನನಗಾಗಿ ಎಲ್ಲರನ್ನೂ ಸೇರಿಸಿ ಸುಂದರವಾದ ಗೆಟ್ ಟು ಗೆದರ್ ಮಾಡಿದ್ರು. ಅವರಿಂದ ನನಗೆ ದೊರೆತ ಗೌರವ ತೆಲುಗು ಚಿತ್ರರಂಗದಲ್ಲಿಯೂ ಇದುವರೆಗೆ ಸಿಕ್ಕಿಲ್ಲ ಎಂದು ನುಡಿದರು.
ಇನ್ನು ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಜಗಪತಿ ಬಾಬು ಸಹ ಅಭಿನಯಿಸಿದ್ದಾರೆ. ಉಮಾಪತಿ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅದ್ಧೂರಿಯಾಗು ಮೂಡಿ ಬರುವಂತೆ ಶ್ರಮಿಸಿದ್ದಾರೆ.