Advertisement

Wayanad ನಲ್ಲಿ ಘೋರ ದೃಶ್ಯಗಳು: 156 ಕ್ಕೇರಿದ ಸಾವಿನ ಸಂಖ್ಯೆ

11:27 AM Jul 31, 2024 | Team Udayavani |

ವಯನಾಡ್ : ಭೀಕರ ಭೂಕುಸಿತಕ್ಕೆ ಸಿಲುಕಿ ನಲುಗಿ ಹೋಗಿರುವ ಕೇರಳದ ವಯನಾಡ್ ನಲ್ಲಿ ಸಾವನ್ನಪ್ಪಿದ ದುರ್ದೈವಿಗಳ ಸಂಖ್ಯೆ 156 ಕ್ಕೇರಿದೆ. ಒಟ್ಟು 45 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 3,069 ಜನರಿಗೆ ವಸತಿ ಕಲ್ಪಿಸಲಾಗಿದೆ.

Advertisement

ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 156 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 130 ಜನರು ಗಾಯಗೊಂಡಿದ್ದಾರೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ಸುಮಾರು 100 ಜನರು ನಾಪತ್ತೆಯಾಗಿದ್ದಾರೆ.ಮಂಗಳವಾರ ನಾಲ್ಕು ಗಂಟೆಗಳ ಅವಧಿಯಲ್ಲಿ ವಯನಾಡ್‌ನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ್ದವು.

ಸಚಿವೆಯ ಕಾರು ಅಪಘಾತ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ವಾಹನ ಮಲಪ್ಪುರಂ ಜಿಲ್ಲೆಯ ಮಂಜೇರಿ ಬಳಿ ಸಣ್ಣ ಅಪಘಾತವಾಗಿದೆ. ವಯನಾಡಿಗೆ ಪ್ರಯಾಣಿಸುತ್ತಿದ್ದ ಸಚಿವೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪೋಲೀಸರು ತಿಳಿಸಿದ್ದಾರೆ.

Advertisement

ಎರಡು ದಿನಗಳ ಶೋಕಾಚರಣೆ
ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ ನಂತರ ಕೇರಳದಲ್ಲಿ ಎರಡು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುತ್ತಿದ್ದು, ಕೇರಳ ವಿಧಾನಸಭೆಯಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ.

ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಎನ್‌ಡಿಆರ್‌ಎಫ್, ಕೇರಳ ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ, ಭಾರತೀಯ ಸೇನಾ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಫ್ 4 ತಂಡಗಳನ್ನು ನಿಯೋಜಿಸಿದೆ. ಅವುಗಳು ಸಾಮಗ್ರಿ, ಯಂತ್ರಗಳು, ಆಧುನಿಕ ಬೋಟ್‌ಗಳು, ಔಷಧಗಳನ್ನು ಹೊಂದಿವೆ. ಪ್ರತೀ ತಂಡದಲ್ಲಿ 30 ಸದಸ್ಯರಿದ್ದು ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿದೆ.

ಭಾರತೀಯ ಸೇನೆಯೂ ಭಾಗಿ: ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆ, ನಾಪತ್ತೆಯಾದವರ ಹುಡುಕಾಟಕ್ಕೆ ಭಾರತೀಯ ಸೇನೆಯೂ ಕೈಜೋಡಿಸಿದ್ದು ಮದ್ರಾಸ್‌ ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಸೆಕೆಂಡ್‌ ಇನ್‌ ಕಮಾಂಡ್‌ನ‌ 43 ಯೋಧರ ತಂಡ ವಯನಾಡ್‌ನ‌ಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಇದರಲ್ಲಿ ಓರ್ವ ಮೆಡಿಕಲ್‌ ಆಫೀಸರ್‌, ಇಬ್ಬರು ಜೂನಿಯರ್‌ ಕಮಿಷನ್ಡ್ ಅಧಿಕಾರಿ, 40 ಯೋಧರಿದ್ದು ತೀವ್ರ ಕಠಿನ ಪ್ರದೇಶದಲ್ಲಿ ನೆರವು ನೀಡಲು ಅಗತ್ಯ ಉಪಕರಣಗಳನ್ನು ಈ ತಂಡ ಹೊಂದಿದೆ. ಇದರ ಜತೆಗೆ ಸೇನಾ ಎಂಜಿನಿಯರಿಂಗ್‌ ತಂಡ ಕೂಡ ವಯನಾಡಿಗೆ ಬಂದಿದೆ. ಜತೆಗೆ 67 ಮಂದಿ ಡಿಫೆನ್ಸ್‌ ಸೆಕ್ಯುರಿಟಿ ಕಾರ್ಪ್ಸ್‌ ಯೋಧರು ಕಣ್ಣೂರಿನಿಂದ ಆ್ಯಂಬುಲೆನ್ಸ್‌, 3 ಟ್ರಕ್‌ ಲೋಡ್‌ ಸಾಮಗ್ರಿಗಳ ಜತೆ ಬಂದಿದ್ದಾರೆ. ಇದಲ್ಲದೆ ಎಳಿಮಾಲಾ ನೌಕಾ ಅಕಾಡೆಮಿಯ ನೌಕಾ ತಂಡ ಕೂಡ ವಯನಾಡಿಗೆ ಆಗಮಿಸಿದೆ. ಡ್ರೋನ್‌ ಮತ್ತು ಪೊಲೀಸ್‌ ಶ್ವಾನದಳವನ್ನು ರಕ್ಷಣ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next