ಕೋಟ: ಒಂದೆರಡು ದಿನಗಳಿಂದ ಗುಂಡ್ಮಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ಕೆಲವು ವಾಹನಗಳಿಗೂ ಶುಲ್ಕ ಕಡಿತವಾಗುತ್ತಿದ್ದು ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ. ಈ ಕುರಿತು ಸ್ಪಷ್ಟನೆ ಪಡೆಯುವ ಸಲುವಾಗಿ ಟೋಲ್ ಅಧಿಕಾರಿಗಳೊಂದಿಗೆ ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರು ಬುಧವಾರ ಸಾಸ್ತಾನದಲ್ಲಿ ಸಭೆ ನಡೆಸಿದರು.
ಸ್ಥಳೀಯರಿಗೆ ಶುಲ್ಕ ವಿಧಿಸುತ್ತಿರುವ ಕುರಿತು ಹಾಗೂ ಸ್ಥಳೀಯರಿಗೆ ಸೀಮಿತವಾಗಿದ್ದ ಗೇಟ್‌ಗೂ ಸ್ಕ್ಯಾನರ್ ಅಳವಡಿಸಿರುವ ಬಗ್ಗೆ ಜಾಗೃತಿ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದಿನಂತೆ ಸ್ಥಳೀಯ ವಾಹನಗಳಿಗೆ ರಿಯಾಯಿತಿ ಮುಂದುವರಿಸಬೇಕು, ಇಲ್ಲವಾದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸ್ಥಳೀಯ ವಾಹನ ರಿಯಾಯಿತಿಯ ಜತೆಗೆ ಹಲವು ಹೊರ ಭಾಗದ ವಾಹನಗಳು ಶುಲ್ಕ ರಿಯಾಯಿತಿ ಪಡೆದು ಓಡಾಡುತ್ತಿವೆ. ಇದರಿಂದ ಕಂಪೆನಿಗೆ ನಷ್ಟವಾಗುತ್ತಿದೆ. ಹೀಗಾಗಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಹಿರಿಯ ಅಧಿಕಾರಿಗಳ ಸೂಚನೆ ಇದ್ದುದರಿಂದ ಸ್ಥಳೀಯ ವಾಹನಗಳಿಗೂ ಕಡಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಗೆ ಶುಲ್ಕ ವಿಧಿಸುವಂತಿಲ್ಲ ಎಂದು ಜಾಗೃತಿ ಸಮಿತಿಯ ಸದಸ್ಯರು ಎಚ್ಚರಿಕೆ ನೀಡಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ಟೋಲ್‌ನ ಅಧಿಕಾರಿಗಳು ಭರವಸೆ ನೀಡಿದರು. ಅನಂತರ ಸ್ಥಳೀಯ ವಾಹನಗಳಿಗೆ ಶುಲ್ಕ ಕಡಿತವನ್ನು ತತ್‌ಕ್ಷಣದಿಂದ ಸ್ಥಗಿತಗೊಳಿಸಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ.
ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮ್ ಸುಂದರ್ ನಾೖರಿ, ಪ್ರಮುಖರಾದ ಪ್ರತಾಪ್ ಶೆಟ್ಟಿ, ನಾಗರಾಜ್ ಗಾಣಿಗ, ಅಲ್ವಿನ್ ಅಂದ್ರಾದೆ, ವಿಟuಲ ಪೂಜಾರಿ ಇದ್ದರು.