Advertisement

ಟೋಲ್‌ ಸಂಗ್ರಹ ವಿವಾದ: ದಿಲ್ಲಿಯಲ್ಲೇ ಪರಿಹಾರ ಆಗಲಿ: ಜನಪ್ರತಿನಿಧಿಗಳ ಒಕ್ಕೊರಲ ಆಗ್ರಹ

12:14 AM Dec 04, 2022 | Team Udayavani |

ಉಡುಪಿ : ಹೆಜಮಾಡಿ ಟೋಲ್‌ನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಅವೈಜ್ಞಾನಿಕ. ಇದನ್ನು ದಿಲ್ಲಿ ಮಟ್ಟದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಚರ್ಚಿಸಿ ಪರಿಹಾರ ನೀಡಬೇಕು ಮತ್ತು ಕೆಎ-20 ನೋಂದಣಿಯ ವಾಣಿಜ್ಯ ಬಳಕೆಯ ವಾಹನ ಸಹಿತ ಎಲ್ಲ ವಾಹನಗಳಿಗೂ ಟೋಲ್‌ನಲ್ಲಿ ವಿನಾಯಿತಿ ನೀಡ ಬೇಕು ಎನ್ನುವ ಬೇಡಿಕೆಯನ್ನು ಜಿಲ್ಲೆಯ ಜನ
ಪ್ರತಿನಿಧಿಗಳು ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳಿಗೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕೂರ್ಮಾರಾವ್‌ ಅಧ್ಯಕ್ಷತೆಯಲ್ಲಿ ಸಚಿವ ಸುನಿಲ್‌ ಕುಮಾರ್‌ ಹಾಗೂ ಶಾಸಕರ ಸಮ್ಮುಖ ದಲ್ಲಿ ನಗರದ ತಾ.ಪಂ. ಕಚೇರಿಯಲ್ಲಿ ಶನಿವಾರ 45 ನಿಮಿಷಕ್ಕೂ ಅಧಿಕ ಕಾಲ ಈ ವಿಚಾರವಾಗಿ ಚರ್ಚೆ ನಡೆಯಿತು.

ಅನಾರೋಗ್ಯದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಅವರು ವರ್ಚುವಲ್‌ ವ್ಯವಸ್ಥೆಯ ಮೂಲಕ ಸಭೆಯಲ್ಲಿ ಭಾಗವಹಿಸಿ, ಟೋಲ್‌ ದರ ವಿಚಾರದ ಗೊಂದಲ ಬಗೆಹರಿಯುವವರೆಗೂ ಯಥಾಸ್ಥಿತಿ ಮುಂದುವರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಒಪ್ಪಲಾಗದು: ಸಚಿವ ಸುನಿಲ್‌
ಸಭೆಯ ಅನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವ ಸುನಿಲ್‌ ಕುಮಾರ್‌, ಅಧಿಕಾರಿಗಳ ಕಾರಣದಿಂದ ಹೆಜಮಾಡಿ ಟೋಲ್‌ನಲ್ಲಿ ಅವೈಜ್ಞಾನಿಕ ವ್ಯವಸ್ಥೆಯೊಂದು ಜಾರಿಯಾಗಿದೆ. ಸುರತ್ಕಲ್‌ ಟೋಲ್‌ ರದ್ದು ಮಾಡುವ ವೇಗದಲ್ಲಿ ಅದರ ಭಾರವನ್ನು ಹೆಜಮಾಡಿ ಟೋಲ್‌ಗೆ ವರ್ಗಾಯಿಸುವ ಆದೇಶ ಬಂದಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ಸಂಬಂಧ ಈಗಾಗಲೇ ಶಾಸಕ ರಘುಪತಿ ಭಟ್‌ ಅವರು ಕೇಂದ್ರ ಹೆದ್ದಾರಿ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂದಿನ ವಾರದಲ್ಲಿ ನಾವು ಕೂಡ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡಿ, ಸ್ಥಳೀಯ ಲೋಕಸಭಾ ಸಂಸದರ ಮೂಲಕ ಸಂಬಂಧಪಟ್ಟ ಇಲಾಖೆಯ ಕೇಂದ್ರ ಸಚಿವರೊಂದಿಗೂ ಚರ್ಚೆ ನಡೆಸಲಿದ್ದೇವೆ ಎಂದರು.

ಕೆಎ-20 ನೋಂದಣಿಯ ಜಿಲ್ಲೆಯ ಎಲ್ಲ ವಾಹನಗಳಿಗೂ ರಿಯಾಯಿತಿ ನೀಡಬೇಕು. ಹೆಜಮಾಡಿ ಟೋಲ್‌ನಲ್ಲಿ ಈ ಮೊದಲು ಎಷ್ಟು ಹಣ ಸಂಗ್ರಹ ಮಾಡುತ್ತಿದ್ದರೋ ಅಷ್ಟಕ್ಕೇ ಸೀಮಿತವಾಗಿರಬೇಕು. ಹೆಚ್ಚುವರಿ ಸಂಗ್ರಹ ಮಾಡಬಾರದು. ಕೆಎ-20 ವಾಹನಕ್ಕೆ ಪ್ರತ್ಯೇಕ ಮಾರ್ಗ ಕಲ್ಪಿಸ ಬೇಕು. ಹಾಗೆಯೇ ಸುರತ್ಕಲ್‌ ಟೋಲ್‌ ಹೊರೆಯನ್ನು ಬೇರೆ ಟೋಲ್‌ಗೆ
ವರ್ಗಾಯಿಸುವ ಮೊದಲು ಸಾಧಕ- ಬಾಧಕ ಅರಿತು ಯಾವ ರೀತಿಯಲ್ಲಿ ನಿಭಾಯಿಸಬೇಕು ಎಂಬುದನ್ನು ದಿಲ್ಲಿ ಮಟ್ಟದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ಹೆಜಮಾಡಿ ಟೋಲ್‌ಗೆ ಹೆಚ್ಚುವರಿ ಹೊರೆ ನೀಡಬಾರದು ಎಂಬ ನಿರ್ದೇಶನವನ್ನು ಪ್ರಾದೇಶಿಕ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ಹೇಳಿದರು.

Advertisement

ಒಂದು ಟೋಲನ್ನು ರದ್ದು ಮಾಡಿದ ಅದರ ದರವನ್ನು ಇನ್ನೊಂದು ಕಡೆ ವಸೂಲಿ ಮಾಡುವುದು ಅಧಿಕಾರಿಗಳ ಅವೈಜ್ಞಾನಿಕ ನಡೆ ಎಂದು ಜನಪ್ರತಿನಿಧಿ ಗಳು ಆಕ್ರೋಶ ಹೊರಹಾಕಿದರು.

ಜಿಲ್ಲಾಧಿಕಾರಿ ಗರಂ
ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ತುರ್ತು ಸಭೆಗೆ ತಡವಾಗಿ ಬಂದಿರು ವುದಕ್ಕೆ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಅವರು ಗರಂ ಆಗಿ, ಸರಿಯಾದ ಸಮಯಕ್ಕೆ ಸಭೆಗೆ ಬರಲೂ ಸಾಧ್ಯ ವಿಲ್ಲವೇ ಎಂದು ಪ್ರಶ್ನಿಸಿದರು.

ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಹಿಂದು ಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ, ಎಡಿಸಿ ವೀಣಾ ಬಿ.ಎನ್‌. ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next