ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬ್ರಹ್ಮರಕೂಟ್ಲು ಹಾಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್ ಟೋಲ್‌ಗೇಟ್ ರದ್ದುಗೊಳಿಸಲು ರಾಜ್ಯ ಸರಕಾರದಿಂದಲೂ ಪ್ರಸ್ತಾವನೆ ಸಲ್ಲಿಕೆಯಾಗಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಜಿಲ್ಲೆಯಲ್ಲಿ ಹಾದು ಹೋಗಿರುವ ರಾ. ಹೆದ್ದಾರಿಗಳಿಗೆ ಸಂಬಂಧಿಸಿದ ಸಭೆಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಸದರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಜಿಲ್ಲಾಧಿ ಕಾರಿ ಸೆಂಥಿಲ್, ಹೆ. ಪ್ರಾಧಿಕಾರದ ವಲಯ ಅಧಿಕಾರಿ, ಯೋಜನಾ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು. ಹೆದ್ದಾರಿ ಪ್ರಾಧಿಕಾರದ ಹೊಸ ಯೋಜನೆಗಳು, ಹಾಲಿ ಯೋಜನೆಗಳ ಪ್ರಗತಿ ಕುರಿತು ಚರ್ಚೆ ನಡೆಯಿತು. ಈಗಾಗಲೇ ವಿವಾದಕ್ಕೆ ಎಡೆಯಾಗಿರುವ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ಟೋಲ್‌ಗೇಟ್ ರದ್ದುಗೊಳಿಸುವ ಬಗ್ಗೆಯೂ ಪ್ರಸ್ತಾಪವಾಗಿದೆ.
ಸಭೆಯ ಬಳಿಕ “ಉದಯವಾಣಿ’ಯೊಂದಿಗೆ ಮಾತನಾಡಿದ ಸಂಸದ ನಳಿನ್, ಸುರತ್ಕಲ್ ಹಾಗೂ ಬ್ರಹ್ಮರಕೂಟ್ಲು ಟೋಲ್‌ಗಳನ್ನು ರದ್ದುಪಡಿಸಬೇಕು ಎಂದು ರಾ. ಹೆ. ಪ್ರಾಧಿಕಾರದ ವಲಯ ಅಧಿಕಾರಿಗೂ ನಾನು ಪತ್ರ ಬರೆದಿದ್ದೆ. ಇದರ ಆಧಾರದಲ್ಲಿ ವಲಯ ಅಧಿಕಾರಿ ಪ್ರಾಧಿಕಾರದ ಹೊಸದಿಲ್ಲಿ ಕಚೇರಿಗೆ ಪತ್ರ ಬರೆದಿದ್ದಾರೆ. ಇದೇ ಸಂದರ್ಭದಲ್ಲಿ ಟೋಲ್‌ಗೇಟ್ ರದ್ದುಪಡಿಸುವಂತೆ ರಾಜ್ಯ ಸರಕಾರದಿಂದಲೂ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸ ಬೇಕಾಗುತ್ತದೆ. ಟೋಲ್‌ಗೇಟ್ ರದ್ದುಪಡಿಸಿದರೆ ಇದರ ನಿರ್ವಹಣೆಯನ್ನು ಯಾರು ಮಾಡಬೇಕು ಎಂಬ ವಿಚಾರ ಉದ್ಭವಿಸುತ್ತದೆ ಎಂಬುದಾಗಿ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿಗಳು ವಿವರಿಸಿದ್ದಾರೆ ಎಂದು ನಳಿನ್ ತಿಳಿಸಿದರು.
ಪಂಪ್‌ವೆಲ್, ತೊಕ್ಕೊಟ್ಟು ಫ್ಲೈಓವರ್
ಪಂಪ್‌ವೆಲ್, ತೊಕ್ಕೊಟ್ಟು ಫ್ಲೈಓವರ್ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ನಿಗದಿತ ಗಡುವಿನೊಳಗೆ ತೊಕ್ಕೊಟ್ಟಿನ ಫ್ಲೆ$çಓವರ್ ಹಾಗೂ ಪಂಪ್‌ವೆಲ್‌ನ ಫ್ಲೆ$çಓವರ್ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸುರತ್ಕಲ್‌ನಿಂದ ಮಂಗಳೂರು ವರೆಗೆ ಸರ್ವಿಸ್ ರಸ್ತೆಯ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಸುರತ್ಕಲ್ ಹಾಗೂ ತೊಕ್ಕೊಟ್ಟಿನಲ್ಲಿ ಭೂಸ್ವಾಧೀನ ಪರಿಹಾರ ಧನ ಪಡೆದು ಇನ್ನೂ ತೆರವುಗೊಳಿಸದಿರುವ ಕಟ್ಟಡಗಳನ್ನು ಕೆಡವಲು ಸೂಚಿಸಲಾಗಿದೆ. ಬಿ.ಸಿ. ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಮುಂದುವರಿಸಲು ಎಲ್ ಆ್ಯಂಡ್ ಟಿ ಸಂಸ್ಥೆಯು ಒಪ್ಪಿಕೊಂಡಿದೆ. ಯೋಜನೆಯಲ್ಲಿ ಇರುವ ಕೆಲವು ಸಮಸ್ಯೆಗಳ ಕುರಿತು ಚರ್ಚಿಸಲು ಹೊಸದಿಲ್ಲಿಯ ಎನ್‌ಎಚ್‌ಎಐ ಕಚೇರಿಯಲ್ಲಿ ಡಿ.14ರಂದು ಗುತ್ತಿಗೆ ದಾರ ಸಂಸ್ಥೆ ಹಾಗೂ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದವರು ತಿಳಿಸಿದರು.
ಕುಲಶೇಖರ- ಕಾರ್ಕಳ ರಸ್ತೆ ಉನ್ನತ ಗೊಳಿಸುವ ಯೋಜನೆಗೆ ಭೂಸ್ವಾಧೀನ ಕುರಿತು ಪ್ರಥಮ ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದ್ದು, ಜನವರಿಯಲ್ಲಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕಾರ್ಕಳ- ಮೂಡುಬಿದಿರೆ-ಬಿ.ಸಿ. ರೋಡ್ ರಸ್ತೆ, ಬಿ.ಸಿ. ರೋಡ್-ಕೈಕಂಬ-ಕಟೀಲು- ಮೂಲ್ಕಿ, ರಸ್ತೆ ಹಾಗೂ ತೊಕ್ಕೊಟ್ಟು-ಮುಡಿಪು- ಮೆಲ್ಕಾರ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಜನವರಿಯಲ್ಲಿ ಭೂಸ್ವಾಧೀನ ಅಧಿಸೂಚನೆ ಹೊರಬೀಳಲಿದೆ ಎಂದವರು ಹೇಳಿದ್ದಾರೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಲಯ ಅಧಿಕಾರಿ ಉಪಸ್ಥಿತಿಯಲ್ಲಿ ಪ್ರತಿ ತಿಂಗಳು ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದರು.