ಹೊಸದಿಲ್ಲಿ /ಮಂಗಳೂರು/ಉಡುಪಿ: ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರಸ್ ವೇಗಳ ಟೋಲ್ ದರ ಎ.1ರಿಂದ ಜಾರಿಗೆ ಬರುವಂತೆ ಶೇ. 5ರಿಂದ 10ರಷ್ಟು ಏರಿಸಲಾಗಿದೆ.
ಹೊಸ ವಿತ್ತೀಯ ವರ್ಷ ಆರಂಭವಾಗು ತ್ತಿರುವ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರ (ಎನ್‌ಎಚ್‌ಎಐ) ವರ್ಷಂ ಪ್ರತಿ ದರ ಪರಿಷ್ಕರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ.
ಇತ್ತೀಚೆಗೆ ಉದ್ಘಾಟನೆಗೊಂಡಿರುವ ಬೆಂಗಳೂರು ಮತ್ತು ಮೈಸೂರು ನಡುವಿನ ಟೋಲ್ ದರ 17 ದಿನಗಳ ಅವಧಿಯಲ್ಲಿ ಪರಿಷ್ಕರಣೆ ಯಾಗಿದೆ. ಈ ಎಕ್ಸ್‌ಪ್ರೆಸ್ ವೇಯ ಟೋಲ್ ಶುಲ್ಕ ಶೇ.22ರಷ್ಟು ಏರಿದ್ದು, ಇದು ದೇಶದಲ್ಲೇ ಅತ್ಯಧಿಕ ಎಂದು ಹೇಳಲಾಗುತ್ತಿದೆ.
ರಾ.ಹೆ. 73ರ ಬ್ರಹ್ಮರಕೂಟ್ಲು, ರಾ.ಹೆ. 66ರ ಗುಂಡ್ಮಿ, ಹೆಜಮಾಡಿ ಹಾಗೂ ತಲಪಾಡಿ ಟೋಲ್ ಬೂತ್‌ಗಳಲ್ಲಿ ಪರಿಷ್ಕೃತ ಟೋಲ್ ಪ್ರಕಟಿಸಲಾಗಿದೆ.
ಬ್ರಹ್ಮರಕೂಟ್ಲು ಟೋಲ್ ಸಂಬಂಧಿಸಿ, ಎನ್‌ಎಚ್‌ಎಐ ಪ್ರಕಾರ ಯೋಜನೆಯ ಬಂಡವಾಳ ವೆಚ್ಚವು 363 ಕೋ.ರೂ. ಆಗಿದ್ದು, ಕಳೆದ ವರ್ಷದವರೆಗೆ ಅದರಲ್ಲಿ 253.14 ಕೋ.ರೂ. ಮರಳಿ ಪಡೆಯಲಾಗಿದೆ ಎಂದು ತಿಳಿಸ ಲಾಗಿತ್ತು. ಈ ಬಾರಿ ಮರಳಿ ಪಡೆದ ಮೊತ್ತವನ್ನು ತಿಳಿಸದೆ ಬಂಡವಾಳ ವೆಚ್ಚ ಪೂರ್ತಿ ಸಂಗ್ರಹವಾದರೆ ಬಳಕೆದಾರರ ಶುಲ್ಕವನ್ನು ಶೇ. 40ಕ್ಕೆ ಇಳಿಸಲಾಗುತ್ತದೆ ಎಂಬುದನ್ನು ಮಾತ್ರ ತಿಳಿಸಲಾಗಿದೆ. ಬ್ರಹ್ಮರಕೂಟ್ಲು ಟೋಲ್‌ನಲ್ಲಿ ವಾಹನಗಳ ಸರತಿಯನ್ನು ತಪ್ಪಿಸುವ ದೃಷ್ಟಿಯಿಂದ ಮೂರನೇ ಟೋಲ್ ಬೂತ್ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಅದಕ್ಕಾಗಿ 2 ವರ್ಷ ಹಿಂದೆಯೇ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭಗೊಂಡು, ಕಳೆದ ವರ್ಷ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇನ್ನೂ 3ನೇ ಬೂತ್ ಆರಂಭಗೊಂಡಿಲ್ಲ ಎಂಬ ಆರೋಪ ಜನರದ್ದಾಗಿದೆ.
ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಿಂದ 20 ಕಿ.ಮೀ.ಯೊಳಗೆ ವಾಸಿಸುವವರ ಎಲ್ಲ ವಾಣಿಜ್ಯೇತರ ವಾಹನ ಗಳಿಗೆ 330 (315) ತಿಂಗಳ ಪಾಸ್ ಲಭ್ಯ ವಿದೆ. ಜತೆಗೆ ಜಿಲ್ಲೆಯೊಳಗಿನ ವಾಣಿಜ್ಯ ಉದ್ದೇ ಶದ ಕಾರು, ಜೀಪ್ 15 ರೂ., ವಾಣಿಜ್ಯ ಲಘು ವಾಹನ 25 ರೂ., ಘನ ವಾಣಿಜ್ಯ ವಾಹನ 55 (50) ರೂ., ಭಾರೀ ಗಾತ್ರದ ವಾಣಿಜ್ಯ ವಾಹನ ಗಳಿಗೆ 80 ರೂ., ಮಿತಿ ಮೀರಿದ ವಾಣಿಜ್ಯ ವಾಹನ ಗಳಿಗೆ 100 (95) ರೂ. ಶುಲ್ಕ ನಿಗದಿ ಮಾಡಲಾಗಿದೆ.