Advertisement

TOLET: ಬಿಡದೇ ಕಾಡುವ ಬಾಡಿಗೆ ಮನೆ ಪ್ರಸಂಗಗಳು

03:44 PM Aug 19, 2017 | |

ಬೆಂಗಳೂರಿನಲ್ಲಿ ಶೇ.60 ಮಂದಿಯದ್ದ ಬಾಡಿಗೆ ಮನೆ ಜೀವನ. ಹೊಸ ಮನೆಗೆ ಹೋಗೋದು, ಹಳೇ ಮನೆಗೆ ಗುಡ್‌ಬೈ ಹೇಳ್ಳೋದು ಇದ್ದಿದ್ದೇ. “ಟು- ಲೆಟ್‌’ ಅಂತ ಬೋರ್ಡ್‌ ಕಾಣಿಸಿ, ಆ ಮನೆಯ ಮೇಲೆ ಪ್ರೀತಿಯುಕ್ಕಿ, ಅಲ್ಲಿಗೆ ಹೋದ ಮೇಲೆ ಇನ್ನೇನೋ ಮರೆಯಲಾಗದ ಘಟನೆಗಳು ಘಟಿಸಿರುತ್ತವೆ. ಅದೇ ಇಲ್ಲಿ “ಟು-ಲೆಟ್‌, ಏಕ್‌ ಪ್ರೇಮ್‌ ಕಥಾ’…  

Advertisement

ಬೋರ್ಡ್‌ ಆ್ಯಂಡ್‌ ಬ್ಯೂಟಿಫ‌ುಲ್‌!
ಲೇ, ಮನೆ ಚೇಂಜ್‌ ಮಾಡೋಣ್ವೇನೇ… 

ಇದ್ದಕ್ಕಿದ್ದಂತೆಯೇ ಮಧ್ಯಾಹ್ನ ಎದ್ದ ನನ್ನ ಪತಿರಾಯ ಈ ಪ್ರಶ್ನೆ ಕೇಳಿಯೇ ಬಿಟ್ಟರು. “ಯಾಕ್ರೀ… ಈ ಮನೆಗೇನಾಗಿದೆ?’ ಎಂಬ ನನ್ನ ಪ್ರಶ್ನೆಗೆ ಅವರ ಮರುಉತ್ತರ ಹೀಗಿತ್ತು; “ಅಲ್ವೇ… ಆ್ಯಪಲ್‌ ಕಂಪನಿಯವರೇ ಮೂರು ತಿಂಗಳಿಗೊಮ್ಮೆ ತಮ್ಮ ಫೋನ್‌ಗೆ ಅಪ್ಡೆàಟ್‌ ಕೊಡ್ತಾರಂತೆ. ನಾವೇಕೆ ವರ್ಷಕ್ಕೊಮ್ಮೆಯಾದ್ರೂ ಮನೆ ಚೇಂಜ್‌ ಮಾಡಾºರ್ದು? ಇಲ್ಲೇ ಫೆವಿಕಲ್‌ ಹಾಕ್ಕೊಂಡು ಇರೋಕೆ, ಇದೇನು ನಮ್ಮ ಸ್ವಂತ ಮನೆಯೇ? ಬಾ ಹುಡುಕೋಣ…’ ಎಂದು ಹೇಳಿ, ನನ್ನನ್ನೂ ಕರಕೊಂಡು ಹೊರಟೇಬಿಟ್ಟರು!

ಮನೆ ಹುಡುಕೋವಾಗ ನನ್ನ ಪತಿರಾಯರು, ಬಾಡಿಗೆಶಾಸ್ತ್ರದ (ವಾಸ್ತುಶಾಸ್ತ್ರದಂತೆ) ಪಾಂಡಿತ್ಯವನ್ನೆಲ್ಲ ಹೊರ ಹಾಕ್ತಾರೆ. ಅಂತೂ ಬೈಕ್‌ ಏರಿ, ಮನೆಯನ್ನು ಹುಡುಕಲು ಹೊರಟೇಬಿಟ್ಟೆವು. ಅಲ್ಲಿ ಕಂಡಿತು ಒಂದು, ಟು ಲೆಟ್‌ ಬೋರ್ಡಿನ ಮನೆ! ಬೋರ್ಡ್‌ ಅಂತೂ ಸುಂದರ, ಸುರಸುಂದರ. ಮನೆಯೂ ಚೆಂದವಿತ್ತು. ಆದರೆ, ಓನರ್‌ ಅವರನ್ನು ಮಾತಾಡಿಸಿದಾಗ ನೂರೆಂಟು ಷರತ್ತು, ನೆಂಟರಿಷ್ಟರಿಗೆ ಜಾಗವಿಲ್ಲ. ನಾಲ್ಕಕ್ಕಿಂತ ಹೆಚ್ಚು ಮಂದಿ ಇರೋ ಹಾಗಿಲ್ಲ ಎಂಬ ಖಡಕ್‌ ನುಡಿ.

ಅಯ್ಯೋ ದೇವೆÅ ಅಂತ, ಪತಿರಾಯರ ಕಡೆ ತಿರುಗಿ ನೋಡಿದರೆ, “ಇಲ್ವೇ… ಈ ಓನರ್‌ಗಳದ್ದು ಇದೇ ಪ್ರಾಬ್ಲಿಮ್ಮು. ಆ ಬೋರ್ಡ್‌ ನೋಡು ಎಷ್ಟು ಚೆಂದ ಬರೆಸಿದ್ದಾರಂತ. ಇಂಥ ಬೋರ್ಡ್‌ ಕಂಡ ಕೂಡಲೇ ಓಡಿಹೋಗಿ ಕದ ಬಡಿಯಬಾರದು ಕಣೇ. ಯಾಕೆ ಗೊತ್ತಾ…?’ ಅಂತ ಫಿಲಾಸಫಿ ಶುರುಮಾಡಿಕೊಂಡರು. “ತುಂಬಾ ಚೆನ್ನಾಗಿ, ನೋಡಿದರೆ ಇನ್ನೊಮ್ಮೆ ನೋಡುವಂಥ ಟುಲೆಟ್‌ ಬೋರ್ಡ್‌ ಬರೆಸಿದ್ದರೆ, ಆ ಮನೆಯ ಹತ್ತಿರಕ್ಕೂ ಸುಳಿಯಬಾರದು. ಏಕೆಂದರೆ, ಆತ ಅಷ್ಟು ಚೆನ್ನಾಗಿ ಬರೆಸಿದ್ದಾನೆಂದರೆ ಆ ಮನೆ ಆಗಾಗ್ಗೆ ಖಾಲಿ ಆಗುತ್ತಲೇ ಇರುತ್ತೆ. ಅದಕ್ಕಾಗಿಯೇ ಒಂದು ಪರ್ಮನೆಂಟ್‌ ಬೋರ್ಡನ್ನು ಆತ ಯಾವಾಗಲೂ ಇಟ್ಟುಕೊಂಡಿರುತ್ತಾನೆ ಅಂತ ಲೆಕ್ಕ! ಒಂದು ಸಾದಾ ರಟ್ಟಿನ ಮೇಲೆ, ಸ್ಕೆಚ್‌ ಪೆನ್ನಿನಲ್ಲಿ “ಟುಲೆಟ್‌’ ಅಂತ ಬರೆದಿದ್ದರೆ, ಆ ಮನೆಯ ಬಗ್ಗೆ, ಆ ಓನರ್‌ ಬಗ್ಗೆ ಒಂದು ವಿಶ್ವಾಸ ಇಟ್ಟುಕೊಳ್ಳಬಹುದು’ ಎಂದು ಅವರು ಹೇಳುತ್ತಿದ್ದಾಗ, ನಾನು ಅವರ ಮಾತನ್ನು ನಂಬದೇ ವಿಧಿಯಿರಲಿಲ್ಲ. ಏಕೆಂದರೆ, ನನ್ನ ಪತಿರಾಯ ಈ ನಾಲ್ಕು ವರ್ಷದಲ್ಲಿ ಹೆಚ್ಚಾಕಡಿಮೆ 400 ಮನೆಗಳನ್ನು ನೋಡಿ, ಅದರಲ್ಲಿ ಮೂರು ಮನೆಗಳಿಗಷ್ಟೇ ಬಲಗಾಲಿಟ್ಟು ಪ್ರವೇಶ ಮಾಡಿದವರಲ್ಲವೇ!?

ಇವರ ಫಿಲಾಸಫಿ ಪಾಠ ಮುಗಿಯುತ್ತಿದ್ದಂತೆ, ಡಬಲ್‌ ಬೆಡ್‌ರೂಂ ಮನೆಯ ಮುಂದೆ ಟುಲೆಟ್‌ ಬೋರ್ಡ್‌ ಕಾಣಿಸಿತು. ಓನರ್‌ ಅವರ ಜತೆ ಮನೆಯನ್ನೂ ನೋಡಿದೆವು. ಮನಸ್ಸಿಗೂ ಹಿಡಿಸಿತು. ಆದರೆ, ಪಕ್ಕದಲ್ಲೇ ಇದ್ದ ಪರಿಚಿತರೊಬ್ಬರು, “ರೀ ಈ ಮನೆಯಲ್ಲಿ ವಾಸ್ತು ಸರಿ ಇಲ್ಲ ಕಣ್ರೀ. ಮನೆಯೇನೋ ಚೆನ್ನಾಗಿದೆ, ಆದ್ರೆ ಮೇಲಿನ ಸಿಂಗಲ್‌ ಬೆಡ್‌ರೂಂನ ಹೌಸ್‌ನಲ್ಲಿ ಅಗ್ನಿ ಮೂಲೆಯಲ್ಲಿ ಬೆಡ್‌ರೂಂ ಇದೆ’ ಅಂತ ಒಗ್ಗರಣೆ ಹಾಕಿದರು. ಅದಕ್ಕೆ ನನ್‌ ಗಂಡ ಹೇಳಿದ್ರು, “ಗ್ರೌಂಡ್‌ ಫ್ಲೋರ್‌ನ ಮನೆಯ ವಾಸ್ತು ಸರಿ ಇದ್ರೆ ಆಯ್ತು. ಮೇಲಿನ ಮನೆ ಕಟ್ಕೊಂಡು ನಮ್ಗೆàನಾಗ್ಬೇಕು? ಇದೇ ಮನೆಗೆ ಹೋಗೋಣ’ ಅಂತ ಹೇಳಿಯೇಬಿಟ್ಟರು. ನಾನೂ ಹೂnಂ ಎಂದು ಒಪ್ಪಿಕೊಂಡೆ.

Advertisement

ಈ ಮನೆಗೆ ಬಂದು ಈಗ ಒಂದೂವರೆ ವರುಷವೇ ಆಯಿತು. ವಾಸ್ತು ಸರಿ ಇದೆ ಅಂತ ನನಗೂ ಅನ್ನಿಸುತ್ತಿದೆ. ಏಕೆ ಗೊತ್ತಾ? ನಮ್‌ ಯಜಮಾನ್ರು, “ಈ ಮನೆ ಬೋರ್‌ ಆಯ್ತು. ಬೇರೆ ಮನೆಗೆ ಹೋಗೋಣ’ ಅಂತ ಹೇಳಲೇ ಇಲ್ವಲ್ಲ!
– ಬಿಂದು ಸೋಮಶೇಖರ್‌, ಮೂಡಲಪಾಳ್ಯ

ಹಾಲುಕ್ಕಿಸಿದ ದಿನವೇ ಮನೆ ಖಾಲಿ ಮಾಡಿದ್ವಿ!
ನಾನು ಬ್ಯಾಚುಲರ್‌. ಅದೇನೋ ಗೊತ್ತಿಲ್ಲ, ನನಗೆ ಮೊದಲಿಂದಲೂ ಗೆಳೆಯರು ಜಾಸ್ತಿ. ಹೋದಲ್ಲೆಲ್ಲ, ಹತ್ತಾರು ಮಂದಿ ಜತೆ ಸೇರುತ್ತಾರೆ. ಒಟ್ಟಿಗೆ ಕಾಫೀ ಕುಡಿಯೋದು, ತಿಂಡಿ ತಿನ್ನೋದು, ಎಲ್ಲಾದರೂ ಟ್ರಿಪ್‌ಗೆ ಹೋಗೋದು ಮಾಡುತ್ತಲೇ ಇರುತ್ತೇವೆ. ಆದರೆ, ಈ ಸ್ನೇಹಬಳಗವೇ ನನಗೆ ಒಂದು ದಿನ ಮುಳುವಾಯಿತು!

ಅದಕ್ಕೆ ಕಾರಣವೂ ಇತ್ತು. ನಂದಿನ ಲೇಔಟ್‌ನಲ್ಲಿ ಟುಲೆಟ್‌ ಬೋರ್ಡ್‌ ನೋಡಿ, ಎರಡನೇ ಮಹಡಿಯ ಮನೆಗೆ ಅಡ್ವಾನ್ಸ್‌ ಮಾಡಿದೆ. ಬ್ಯಾಚುಲರ್‌ ಅಂತ ಗೊತ್ತಾದ ತಕ್ಷಣ ಓನರ್‌ ಆಂಟಿ ಒಂದಿಷ್ಟು ಕಂಡೀಶನ್‌ ಹೇಳಿದ್ದರು. “ಇಲ್ಲ, ಆಂಟಿ… ನಾನು ಮತ್ತು ನನ್ನ ಸ್ನೇಹಿತ ಇಬ್ಬರಷ್ಟೇ ಇರೋದು. ಯಾರನ್ನೂ ಮನೆಗೆ ಸೇರಿಸ್ಕೊಳ್ಳೋದಿಲ್ಲ’ ಅಂತ ಅವರೆದೆರು ಪ್ರತಿಜ್ಞೆಯನ್ನೂ ಮಾಡಿಬಿಟ್ಟೆ. ಆ ಮನೆ ಬಹಳ ಬೊಂಬಾಟ್‌ ಆಗಿತ್ತು.

ಕೊನೆಗೆ, ಹಾಲುಕ್ಕಿಸುವ ದಿನ ಬಂತು. ನನ್ನ ದೊಡ್ಡ ಸ್ನೇಹ ಬಳಗಕ್ಕೆ ಅದೆಲ್ಲಿಂದ ಸುಳಿವು ಸಿಕ್ಕಿತೋ, ಗೊತ್ತಿಲ್ಲ. ನನಗೆ ಸರ್‌ಪ್ರೈಸ್‌ ಕೊಡ್ಬೇಕು ಅಂತ ಹೇಳಿ, 15- 20 ಮಂದಿ ಒಟ್ಟಿಗೆ ಹೊಸಮನೆಗೆ ಬಂದು ಬಿಟ್ಟರು. ಹಾಲು ಉಕ್ಕಿಸಿ ಆಯಿತು. ಸ್ವೀಟ್‌ ಹಂಚಿದ್ದೂ ಆಯಿತು. ಕೆಳಗಿದ್ದ ಓನರ್‌ ಆಂಟಿಯಿಂದ ಫೋನು. “ಸಂಜೆಯೊಳಗೆ ಮನೆ ಖಾಲಿ ಮಾಡಿ. ನೀವು ಮೊದಲ ದಿನವೇ ಇಷ್ಟು ಜನ ಸೇರಿದವರು, ಮುಂದೆಯೂ ಮನೆಯನ್ನು ಸಂತೆ ಮಾಡೋಲ್ಲ ಅನ್ನೋ ಗ್ಯಾರಂಟಿ ಏನು?’ ಅನ್ನೋ ಪ್ರಶ್ನೆ ಅವರದು. ಜಗಳ ಮಾಡಿಯೂ ಸೋತೆವು. ಕೊನೆಗೆ ವಿಧಿಯಿಲ್ಲದೆ, ಬಂದಿದ್ದ ಎಲ್ಲ ಸ್ನೇಹಿತರಿಗೆ ವಸ್ತುಗಳನ್ನು ಪ್ಯಾಕ್‌ ಮಾಡಲು ಹೇಳಿ, ಆ ಗೆಳೆಯರನ್ನೆಲ್ಲ ಕರೆದುಕೊಂಡು ಬಂದಿದ್ದ “ಗ್ಯಾಂಗ್‌ ಲೀಡರ್‌’ ಮನೆಯಲ್ಲಿ ತಾತ್ಕಾಲಿಕವಾಗಿ ಬೀಡುಬಿಟ್ಟೆವು.

– ರಾಜೇಶ್‌ ಬಿ.ಆರ್‌., ಮಹಾಲಕ್ಷ್ಮೀ ಲೇಔಟ್‌

ಬಾಯ್ಲರ್‌ ಇಲ್ಲ ಅಂದಾಗ, ಮಂಡೆಬಿಸಿ ಆಯ್ತು!
ಅದು 2010ರ ಸಮಯ. ನಾನು ಮಂಗಳೂರಿನಲ್ಲಿ ಬ್ಯಾಂಕ್‌ ಹುದ್ದೆಯಲ್ಲಿದ್ದೆ. ನನ್ನ ಮಕ್ಕಳ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯುತ್ತಿದ್ದರಿಂದ, ಪತ್ನಿಯನ್ನು ಮತ್ತು ಇಬ್ಬರು ಮಕ್ಕಳನ್ನು ಬೆಂಗಳೂರಿನಲ್ಲಿಯೇ ಪುಟ್ಟ ಮನೆಯಲ್ಲಿ ಇರಿಸಿದ್ದೆ. ಕೊನೆಗೂ ನನಗೆ ಬೆಂಗಳೂರಿಗೆ ವರ್ಗಾವಣೆ ಭಾಗ್ಯ ಸಿಕ್ಕಿತ್ತು.

ಇರುವ ಮನೆ ಸಾಕಾಗೋದಿಲ್ಲ, ದೊಡ್ಡ ಮನೆ ಹುಡುಕಬೇಕು ಅಂತ ತ್ಯಾಗರಾಜನಗರ ಪೂರಾ ಸುತ್ತಾಡಿದೆ. ಅಲ್ಲೊಂದು 3 ಬೆಡ್‌ರೂಮಿನ ಮನೆ ಮುಂದೆ “ಟು ಲೆಟ್‌’ ಅಂತ ಫ‌ಲಕ ನೇತುಹಾಕಲಾಗಿತ್ತು. ಮೊದಲ ಮಹಡಿ. ಮನೆಯೇನೋ ಚೆಂದವಿತ್ತು. ಮಾತುಕತೆಯೂ ಮುಗಿಯಿತು.

ಮಂಗಳೂರಿನಿಂದ ನಾನು ಟ್ರಕ್‌ ಮಾಡಿಕೊಂಡು, ಲಗ್ಗೇಜ್‌ ತಂದಿದ್ದೆ. ಆದರೆ, ಇನ್ನೇನು ಲಗ್ಗೇಜನ್ನು ಮನೆ ತುಂಬಿಸಬೇಕು ಎನ್ನುವಾಗ ನನ್ನ ಮಗ, “ಅಪ್ಪಾ… ಇಲ್ಲಿ ಬಾಯ್ಲರ್‌ ಇಲ್ಲ’ ಎಂದು ಬ್ರೇಕಿಂಗ್‌ನ್ಯೂಸ್‌ನಂತೆ ಹೇಳಿದ! ಬೆಂಗಳೂರಿನ ಮನೆಗಳ ಬಗ್ಗೆ ಅಷ್ಟೇನೂ ಗೊತ್ತಿರದ ನನಗೆ, ಅಚ್ಚರಿಯಾಗಿ, ಓನರ್‌ ಬಳಿ ಕೇಳಿದೆ. ಅವರು, “ಇಲ್ಲಾ… ಅದನ್ನೆಲ್ಲ ನೀವೇ ಹಾಕಿಸಿಕೊಳ್ಬೇಕು’ ಅಂತ ವಾದ ಶುರುಮಾಡಿದರು. ನಾವೂ “ಬಾಯ್ಲರ್‌ ಬೇಕೇ ಬೇಕು. ಇಲ್ಲದಿದ್ರೆ ಆಗೋಲ್ಲ’ ಎಂದು ಪಟ್ಟುಹಿಡಿದೆವು. ಕೊನೆಗೆ ನಮ್ಮ ಮನೆ ಸಾಮಾನುಗಳನ್ನು ತಂದಿದ್ದ ಟ್ರಕ್‌ ಡ್ರೈವರ್‌ ಹೇಳಿದ, “ಈ ಓನರ್‌ ಈಗಲೇ ಕಿರಿಕ್‌ ಮಾಡ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಸುಮ್ಮನೆ ಇರ್ತಾರಾ?’ ಎಂದ. ನಮಗೂ ಹೌದೆನ್ನಿಸಿ, ಇನ್ನೂ ಖಾಲಿ ಮಾಡಿರದ, ಹೆಂಡ್ತಿ- ಮಗ ಇದ್ದ ಚಿಕ್ಕ ಮನೆಗೆ ಎಲ್ಲ ಲಗ್ಗೇಜನ್ನೂ ಸಾಗಿಸಿ, ತಾತ್ಕಾಲಿಕ ಆಶ್ರಯ ಪಡೆದೆವು.
– ಎಚ್‌. ಡುಂಡಿರಾಜ್‌, ಜೆ.ಪಿ. ನಗರ

(“ಟು-ಲೆಟ್‌’ ಫ‌ಲಕ ನೋಡಿ, ಮನೆ ಹುಡುಕುವ ವೇಳೆ ನಿಮ್ಮ ಬದುಕಿನಲ್ಲೂ ಸ್ವಾರಸ್ಯಕರ ಘಟನೆಗಳು ನಡೆದಿದ್ದರೆ, ಅದನ್ನು ನಮಗೆ ಬರೆದುಕಳುಹಿಸಿ.) 

Advertisement

Udayavani is now on Telegram. Click here to join our channel and stay updated with the latest news.

Next