ದೋಹಾ (ಕತಾರ್): ಭಾರತದ ಶೂಟರ್ ತೇಜಸ್ವಿನಿ ಸಾವಂತ್ ಮುಂದಿನ ವರ್ಷದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದರೊಂದಿಗೆ ಭಾರತದ 12ನೇ ಶೂಟರ್ ಟೋಕಿಯೊ ಟಿಕೆಟ್ ಪಡೆದಂತಾಗಿದೆ.
ಶನಿವಾರ ದೋಹಾದಲ್ಲಿ ನಡೆದ 14ನೇ ಏಶ್ಯನ್ ಚಾಂಪಿಯನ್‌ಶಿಪ್ಸ್‌ನ ವನಿತೆಯರ 50 ಮೀ. ರೈಫಲ್ 3 ಪೊಸಿಶನ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ತೇಜಸ್ವಿನಿ ಸಾವಂತ್ 5ನೇ ಸ್ಥಾನ ಪಡೆದು (1,171 ಅಂಕ) ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಂಪಾದಿಸಿದರು. ಫೈನಲ್ ತಲುಪಿದ 8 ಶೂಟರ್‌ಗಳಲ್ಲಿ 6 ಮಂದಿಗೆ ಈಗಾಗಲೇ ಟೋಕಿಯೊ ಟಿಕೆಟ್ ಲಭಿಸಿತ್ತು.
ತೇಜಸ್ವಿನಿ ಸಾವಂತ್ 50 ಮೀ. ರೈಫಲ್ ಪ್ರೋನ್ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ. 2010ರ ಮ್ಯೂನಿಚ್ ವಿಶ್ವ ಚಾಂಪಿಯನ್‌ಶಿಪ್‌ನ 50 ಮೀ. ರೈಫಲ್ ಪ್ರೋನ್ ವಿಭಾಗದಲ್ಲಿ ವಿಶ್ವದಾಖಲೆಯನ್ನು ಸರಿದೂಗಿಸಿದ ಸಾಧನೆ ತೇಜಸ್ವಿನಿ ಅವರದಾಗಿತ್ತು. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದ ಭಾರತದ ವನಿತಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.