ಟೋಕಿಯೊ : ಪ್ಯಾರಾಲಿಂಪಿಕ್ಸ್ ವನಿತಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಭವಿನಾಬೆನ್ ಪಟೇಲ್ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರದ ಮುಖಾಮುಖೀಯಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.2 ಖ್ಯಾತಿಯ ಸರ್ಬಿಯಾದ ಆಟಗಾರ್ತಿ ಬೊರಿಸ್ಲಾವ್ ಪೆರಿಕ್ ರಾಂಕೋವಿಕ್ ಅವರನ್ನು 11-5, 11-6, 11-7 ಅಂತರದಿಂದ ಮಣಿಸಿದರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಟಿಟಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಖಾತ್ರಿಪಡಿಸಿದ್ದಾರೆ.
ರಾಂಕೋವಿಕ್ ರಿಯೋ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇವರೆದುರು ಭವಿನಾಬೆನ್ ಕೇವಲ 18 ನಿಮಿಷಗಳಲ್ಲಿ ಗೆದ್ದು ಬಂದರು.
ಇದಕ್ಕೂ ಮುನ್ನ ಬ್ರಝಿಲ್‌ನ ಜಾಯ್ಸ ಡಿ ಒಲಿವೆರಾ ವಿರುದ್ಧ 12-10, 13-11, 11-6 ಅಂತರದ ಗೆಲುವು ಸಾಧಿಸಿದ ಭವಿನಾಬೆನ್ ಕ್ವಾರ್ಟರ್ ಫೈನಲ್ ತಲುಪಿದ್ದರು. ಪ್ಯಾರಾಲಿಂಪಿಕ್ಸ್ ಟಿಟಿಯಲ್ಲಿ ಎಂಟರ ಸುತ್ತಿಗೆ ಏರಿದ ಭಾರತದ ಮೊದಲ ವನಿತಾ ಟಿಟಿಪಟು ಎಂಬುದು ಇವರ ಹೆಗ್ಗಳಿಕೆಯಾಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಭವಿನಾಬೆನ್-ಜಾಯ್ಸ ನಡುವಿನ ಮುಖಾಮುಖೀ 23 ನಿಮಿಷಗಳ ಕಾಲ ಸಾಗಿತು. ಈ ಪಂದ್ಯದ ಮೊದಲೆರಡು ಗೇಮ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಇಲ್ಲಿ ಯಾರೂ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಭವಿನಾಬೆನ್ ಅದೃಷ್ಟ ಚೆನ್ನಾಗಿತ್ತು. ಅಂತಿಮ ಗೇಮ್‌ನಲ್ಲಿ ಬ್ರಝಿಲ್ ಆಟಗಾರ್ತಿಗೆ ಪೈಪೋಟಿಯೊಡ್ಡಲು ಸಾಧ್ಯವಾಗಲಿಲ್ಲ. ಇದನ್ನು ಭವಿನಾಬೆನ್ ದೊಡ್ಡ ಅಂತರದಲ್ಲಿ ಗೆದ್ದರು.
ಭವಿನಾಬೆನ್ ಟಿಟಿ ಸ್ಪರ್ಧೆಯಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ್ತಿ.