Advertisement
38 ವರ್ಷದ ಸುಹಾಸ್ ಪ್ರಸ್ತುತ ಉತ್ತರಪ್ರದೇಶದ ಗೌತಮಬುದ್ಧ ನಗರದ (ನೋಯ್ಡಾ) ಜಿಲ್ಲಾಧಿಕಾರಿ. ಸದ್ಯ ಅವರೀಗ ಎಸ್‌ಎಲ್4 ವಿಭಾಗದಲ್ಲಿ ವಿಶ್ವದ ನಂ.3 ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ.
Related Articles
Advertisement
ಮೂಲತಃ ಸುಹಾಸ್ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರ. ಪದವಿ ಪಡೆದದ್ದು ಸುರತ್ಕಲ್‌ನ ಎನ್‌ಐಟಿಕೆಯಲ್ಲಿ. ಜತೆಗೆ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಅದ್ಭುತ ಸಾಧನೆಗೈದಿದ್ದಾರೆ. ಸುಹಾಸ್ ಸಾಧನೆಗೆ ಐಎಎಸ್ ಅಧಿಕಾರಿಗಳ ಸಂಘ, ಸಾಮಾಜಿಕ ತಾಣಿಗರು ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸದ್ಯ ಗೌತಮ ಬುದ್ಧನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಇದಕ್ಕೂ ಮುನ್ನ ಪ್ರಯಾಗ್‌ರಾಜ್, ಆಗ್ರಾ, ಅಝಮ್‌ಗಢ, ಜೌನ್‌ಪುರ, ಸೋನಭದ್ರಾದಲ್ಲೂ ಇದೇ ಹುದ್ದೆಯನ್ನು ನಿರ್ವಹಿಸಿದ್ದರು. ಕಳೆದ ಒಂದೂವರೆ ವರ್ಷದಿಂದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಕೊರೊನಾ ನಿಗ್ರಹಕ್ಕೆ ಅವಿರತವಾಗಿ ದುಡಿದಿದ್ದಾರೆ.
ರಾತ್ರಿ ಹತ್ತರಿಂದ ಅಭ್ಯಾಸ! :
ಒಂದು ಕಡೆ ಕೊರೊನಾ, ಅದನ್ನು ನಿಭಾಯಿಸಬೇಕಾಗಿರುವ ಗುರುತರ ಜಿಲ್ಲಾಧಿಕಾರಿಯ ಹೊಣೆ. ಇದರ ನಡುವೆ ಪ್ಯಾರಾಲಿಂಪಿಕ್ಸ್‌ಗೆ ತಯಾರಾಗುವುದು ಹೇಗೆ? ಇದು ಅವರು ಟೋಕಿಯೊ ವಿಮಾನ ಹತ್ತುವುದಕ್ಕಿಂತ ಮುನ್ನ ಪತ್ರಕರ್ತರ ಪ್ರಶ್ನೆಯಾಗಿತ್ತು. ಇದಕ್ಕೆ ಅವರು ಕೊಟ್ಟ ಉತ್ತರ ಬಹಳ ಕುತೂಹಲಕರವಾಗಿದೆ.
“ನಾನು ದಿನವಿಡೀ ಕೊರೊನಾ ನಿಗ್ರಹ ಹಾಗೂ ಆಡಳಿತಾತ್ಮಕ ಸಂಗತಿಗಳಿಗಾಗಿ ಕರ್ತವ್ಯ ನಿರ್ವಹಿಸುತ್ತೇನೆ. ರಾತ್ರಿ ಹತ್ತರ ಅನಂತರ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತೇನೆ. ಆಡಳಿತಾಧಿಕಾರಿಯಾಗಿ, ಆಟಗಾರನಾಗಿ ಎರಡೂ ಜವಾಬ್ದಾರಿಯನ್ನು ಕಳೆದ 6 ವರ್ಷಗಳಿಂದ ಸರಿಯಾಗಿಯೇ ನಿಭಾಯಿಸುತ್ತಿದ್ದೇನೆ’ ಎಂದಿದ್ದರು ಸುಹಾಸ್.