Advertisement
ಭಾರತವನ್ನು ಎತ್ತರಕ್ಕೆ ಒಯ್ದಿತೇ ಟಾಪ್?ಕೇಂದ್ರ ಸರಕಾರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಪ್ರಮಾಣ ಹೆಚ್ಚಿಸಲಿಕ್ಕಾಗಿಯೇ 2014ರಿಂದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಮ್ (ಟಾಪ್)ಎಂಬ ಯೋಜನೆಯನ್ನು ಆರಂಭಿಸಿದೆ. 2016ರ ಒಲಿಂಪಿಕ್ಸ್‌ನಲ್ಲೇ ಇದರ ಸಣ್ಣ ಫಲಿತಾಂಶ ಸಿಕ್ಕಿದೆ. ಆ ಕೂಟದಲ್ಲಿ ಪಿ.ವಿ.ಸಿಂಧು ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಬೆಳ್ಳಿ, ಸಾಕ್ಷಿ ಮಲಿಕ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದರು. ಇನ್ನು ಅದೇ ವರ್ಷದ ಪ್ಯಾರಾಲಿಂಪಿಕ್‌ನಲ್ಲಿ ಭಾರತಕ್ಕೆ 2 ಚಿನ್ನ, 1 ಬೆಳ್ಳಿ, 1 ಕಂಚು ಲಭಿಸಿತ್ತು. ಇವರೆಲ್ಲ ಟಾಪ್ ಯೋಜನೆಯ ಲಾಭ ಪಡೆದವರು. ಈ ಬಾರಿಯ ಒಲಿಂಪಿಕ್ಸ್‌ಗೆ 121 ಆ್ಯತ್ಲೀಟ್‌ಗಳ ಪಟ್ಟಿ ಮಾಡಿ ಕೇಂದ್ರ ಹಲವು ರೀತಿಯ ಸಹಕಾರಗಳನ್ನು ನೀಡಿದೆ. ಹಾಗೆಯೇ ಈ ಬಾರಿ ಹಲವು ರಾಜ್ಯಸರಕಾರಗಳು ತಮ್ಮ ಪೂರ್ಣ ನೆರವು ನೀಡಿವೆ. ಕರ್ನಾಟಕ ಸರಕಾರ ರಾಜ್ಯದಿಂದ ಹೊರಟಿರುವ ಫೌವಾದ್ ಮಿರ್ಜಾ, ಶ್ರೀಹರಿ ನಟರಾಜ್, ಅದಿತಿ ಅಶೋಕ್‌ಗೆ 10 ಲಕ್ಷ ರೂ. ನೀಡಿದೆ. ಇವೆಲ್ಲ ಆ್ಯತ್ಲೀಟ್‌ಗಳ ಪಾಲಿಗೆ ಆಶಾದಾಯಕ ಬೆಳವಣಿಗೆ. ಇದು ಪದಕಗಳ ಸಂಖ್ಯೆ ಹೆಚ್ಚಿಸಬಹುದು, ಹಾಗೆಯೇ ಒಲಿಂಪಿಕ್ಸ್‌ನಲ್ಲಿ ಭಾರತದ ಚಹರೆ ಬದಲಿಸಲು ಇದು ವೇದಿಕೆಯಾಗಬಹುದು ಎಂಬ ನಿರೀಕ್ಷೆಯಿದೆ.
– ವಿಶ್ವದ ಅತ್ಯುತ್ತಮ ತರಬೇತುದಾರರಿಂದ ತರಬೇತಿ
– ಕ್ರೀಡೋಪಕರಣ ಖರೀದಿಗೆ ಆರ್ಥಿಕ ನೆರವು
– ದೈಹಿಕ ತರಬೇತುದಾರರನ್ನು ಬಳಸಿಕೊಳ್ಳಲು ಸಹಾಯ
– ತಿಂಗಳಿಗೆ ನಿಗದಿತ ಹಣಕಾಸಿನ ನೆರವು
– ಅಗತ್ಯವಿರುವ ದೇಶಗಳಿಗೆ ತೆರಳಲು ಬೆಂಬಲ ಬಂಗಾರದಂತೆ ಮಿನುಗಬಲ್ಲ ಭಾರತೀಯರಿವರು :
ಸೌರಭ್ ಚೌಧರಿ
ಸ್ಪರ್ಧೆ: 10 ಮೀ. ಏರ್ ಪಿಸ್ತೂಲ್
ಶಕ್ತಿ: ನಿಖರ ಗುರಿಯ 19 ವರ್ಷದ ಶೂಟರ್. ಐದೂ ವಿಶ್ವಕಪ್ ಕೂಟಗಳಲ್ಲಿ ಪೋಡಿಯಂ ಏರಿದ ವೀರ.
2 ಚಿನ್ನ, 1 ಬೆಳ್ಳಿ, 2 ಕಂಚು ಕೊರಳಿಗೆ ಅಲಂಕಾರ. ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ಭಾರತದ ಕಿರಿಯ ಶೂಟರ್ ಎಂಬ ದಾಖಲೆ.
ದೌರ್ಬಲ್ಯ: ಗೋಚರಿಸುತ್ತಿಲ್ಲ. ಇದು ಮೊದಲ ಒಲಿಂಪಿಕ್ಸ್ ಎನ್ನುವುದೊಂದೇ ವಿಷಯ.
ಸವಾಲು: 4 ಒಲಿಂಪಿಕ್ಸ್ ಚಿನ್ನ ಗೆದ್ದ ಚೀನದ ವೀ ಪಾಂಗ್, ಇರಾನ್‌ನ ಜವಾದ್ ಫಾರೂಘಿ ಸವಾಲನ್ನು ನಿಭಾಯಿಸಿದರೆ ಚಿನ್ನ ಖಚಿತ.
**
ಮನು ಭಾಕರ್ -ಸೌರಭ್ ಚೌಧರಿ
ಸ್ಪರ್ಧೆ: 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ
ಶಕ್ತಿ: 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್‌ಗೂ ಮಿಗಿಲಾದ ಹಿಡಿತ. 6 ಸಲ ವಿಶ್ವಕಪ್‌ನಲ್ಲಿ ಜತೆಯಾಗಿ ಸ್ಪರ್ಧಿಸಿದ ಅನುಭವ. ಪ್ರತೀ ಸಲವೂ ಪೋಡಿಯಂ ಅಲಂಕಾರ.
Related Articles
ಸವಾಲು: ರಷ್ಯಾದ ಅರ್ಟೆಮ್ ಶೆರ್ನೂಸೋವ್-ವಿಟಾಲಿನಾ ಬಟ್ಸರಸ್ಕಿನಾ. ಒಸೆಜಿಕ್ ವಿಶ್ವಕಪ್‌ನಲ್ಲಿ ಭಾರತೀಯರನ್ನು ಸೋಲಿಸಿದ್ದು ಇದೇ ಜೋಡಿ.
**
ಪಿ.ವಿ.ಸಿಂಧು
ಸ್ಪರ್ಧೆ: ವನಿತಾ ಬ್ಯಾಡ್ಮಿಂಟನ್ ಸಿಂಗಲ್ಸ್
ಶಕ್ತಿ: 2019ರ ವಿಶ್ವ ಚಾಂಪಿಯನ್. ಅನಂತರ ನಿರೀಕ್ಷಿತ ಫಾರ್ಮ್ ಪ್ರದರ್ಶಿಸಿಲ್ಲ. ಆದರೆ ರಿಯೋದಲ್ಲಿ ಬೆಳ್ಳಿ ಗೆದ್ದ ತುಂಬು ಆತ್ಮವಿಶ್ವಾಸವಿದೆ. ಅಲ್ಲಿ ಇವರನ್ನು ಸೋಲಿಸಿದ ಕ್ಯಾರೋಲಿನಾ ಮರಿನ್ ಈ ಬಾರಿ ಗೈರಾಗಿದ್ದಾರೆ. ಇದು ಸಿಂಧು ಓಟದ ಹಾದಿಯನ್ನು ಸುಗಮಗೊಳಿಸಬಹುದು.
ದೌರ್ಬಲ್ಯ: ದೀರ್ಘ ಹೋರಾಟದಲ್ಲಿ ಕೈಚೆಲ್ಲುವುದು!
**
ಯಶಸ್ವಿನಿ ದೇಸ್ವಾಲ್, ಅಭಿಷೇಕ್ ವರ್ಮ
ಸ್ಪರ್ಧೆ: 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ
ಶಕ್ತಿ: ಯಶಸ್ವಿನಿ-ಅಭಿಷೇಕ್ ಜೋಡಿಗೆ ಪದಕ ಜಯಿಸುವ ಉತ್ತಮ ಅವಕಾಶ ಇದೆ. 3 ವಿಶ್ವಕಪ್‌ಗ್ಳಲ್ಲಿ ಒಂದು ಬೆಳ್ಳಿ, ಒಂದು ಕಂಚು ಗೆದ್ದು ಮಿಂಚಿದ್ದಾರೆ.
ದೌರ್ಬಲ್ಯ: ಒಸೆಜಿಕ್‌ನಲ್ಲಿ ಪೋಡಿಯಂ ಏರದ ನೋವು ಕಾಡುತ್ತಿದೆ.
ಸವಾಲು: ಭಾರತದವರೇ ಆದ ಮನು ಭಾಕರ್-ಸೌರಭ್ ಚೌಧರಿ ಸವಾಲನ್ನೂ ನಿಭಾಯಿಸಬೇಕಿದೆ!
**
ನೀರಜ್ ಚೋಪ್ರಾ
ಸ್ಪರ್ಧೆ: ಜಾವೆಲಿನ್ ಎಸೆತ
ಶಕ್ತಿ: ಸತತ ಗಾಯದಿಂದ ಚೇತರಿಸಿಕೊಂಡ ಬಳಿಕ ಸರಾಸರಿ 85 ಮೀ. ಸಾಧನೆ ಕಾಯ್ದುಕೊಂಡಿದ್ದಾರೆ. ಪದಕ ಗೆಲ್ಲುವ ಭರವಸೆಯಿದೆ.
ದೌರ್ಬಲ್ಯ: ಸ್ಥಿರ ಪ್ರದರ್ಶನವೇನೋ ಇದೆ. ಆದರೆ ಇವರಿಗಿಂತ ಶ್ರೇಷ್ಠ ವೈಯಕ್ತಿಕ ದಾಖಲೆ ಹೊಂದಿರುವ 11 ಮಂದಿ ಕಣದಲ್ಲಿರುವುದು ನೀರಜ್ ಮೇಲೆ ಒತ್ತಡ ಉಂಟುಮಾಡಬಹುದು.
ಸವಾಲು: 96.29 ಮೀ. ದಾಖಲೆಯ ಜರ್ಮನಿಯ ಜೊಹಾನ್ಸ್ ವೆಟರ್, ಕೆಶೋರ್ನ್ ವಾಲ್ಕಾಟ್ (89.12 ಮೀ.), ಮರಿನ್ ಕ್ರುಕೋವ್‌ಸ್ಕಿಯನ್ನು (89.55 ಮೀ.) ಮೀರಿಸುವುದೇ ದೊಡ್ಡ ಸವಾಲು.
**
ರವಿ ದಹಿಯ
ಸ್ಪರ್ಧೆ: ಫ್ರೀಸ್ಟೈಲ್ ಕುಸ್ತಿ (57 ಕೆಜಿ)
ಶಕ್ತಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ವಿಜೇತ, 2 ಬಾರಿಯ ಏಷ್ಯನ್ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ. ದಹಿಯ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿದ್ದಾರೆ.
ದೌರ್ಬಲ್ಯ: ಒಲಿಂಪಿಕ್ಸ್‌ನಂಥ ತೀವ್ರ ಒತ್ತಡವನ್ನು ಎದುರಿಸುವ ಬಗ್ಗೆ ಪ್ರಶ್ನೆಯಿದೆ.
ಸವಾಲು: ರಷ್ಯಾದ ಝವುರ್ ಉಗೇವ್, ಸ್ಟೀವನ್ ಮಿಕಿಕ್, ಕಝಕಸ್ತಾನ ನೂರಿಸ್ಲಾಮ್ ಸನ ಯೇವ್ ಅವರಿಂದ ಕಠಿನ ಸ್ಪರ್ಧೆ.
**
ಭಜರಂಗ್ ಪುನಿಯ
ಸ್ಪರ್ಧೆ: ಫ್ರೀಸ್ಟೈಲ್ ಕುಸ್ತಿ (65 ಕೆಜಿ)
ಶಕ್ತಿ: ಒಲಿಂಪಿಕ್ಸ್ ಅರ್ಹತೆಗಾಗಿ ನಡೆದ ಕೂಟದಲ್ಲಿ ಭಾರೀ ಯಶಸ್ಸು ಕಂಡ ಹೆಗ್ಗಳಿಕೆ ಹೊಂದಿದ್ದಾರೆ. ಶಕ್ತಿ ಅಮೋಘ. ಎದುರಾಳಿಯನ್ನು ಒತ್ತಡಕ್ಕೆ ಬೀಳಿಸುವಲ್ಲಿ ನಿಷ್ಣಾತರು. ಸ್ಥಿರ ಪ್ರದರ್ಶನದಿಂದಾಗಿ ಒಲಿಂಪಿಕ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕ ಪ್ರಾಪ್ತವಾಗಿದೆ.
ದೌರ್ಬಲ್ಯ: ಸಾಮಾನ್ಯ ಎದುರಾಳಿ ವಿರುದ್ಧ ಅತಿಯಾದ ಆತ್ಮವಿಶ್ವಾಸ ತೋರುವುದು.
ಸವಾಲು: ಈ ವಿಭಾಗದಲ್ಲಿ ಪ್ರತಿಭಾನ್ವಿತರ ದಂಡೇ ಇದೆ. ರಷ್ಯಾದ ಗಾಜಿಮುರಾದ್ ರಶಿದೋವ್, ಹಂಗೇರಿಯ ಇಸಾಮೇಲ್ ಮುಸುjಕಾಜೇವ್ ಪ್ರಮುಖರು.
**
ಅಮಿತ್ ಪಂಘಲ್
ಸ್ಪರ್ಧೆ: ಬಾಕ್ಸಿಂಗ್ (52 ಕೆ.ಜಿ. ಫ್ಲೈವೇಟ್)
ಶಕ್ತಿ: ಅಗ್ರಶ್ರೇಯಾಂಕದ ಗೌರವ. ಅಗ್ರ 8 ಶ್ರೇಯಾಂಕಿತರು ಕ್ವಾರ್ಟರ್ ಫೈನಲ್ ತನಕ ಎದುರಾಗುವ ಸಾಧ್ಯತೆ ಇಲ್ಲ. ಇವರ ಫಾಸ್ಟ್ ಪಂಚಿಂಗ್ ಸಾಮರ್ಥ್ಯ ಇಲ್ಲಿ ನೆರವಿಗೆ ಬರಬಹುದು. ಬಲಿಷ್ಠ ಎದುರಾಳಿ ವಿರುದ್ಧ ಇನ್ನಷ್ಟು ಆಕ್ರಮಣಕಾರಿಯಾಗಿ ಗೋಚರಿಸುತ್ತಾರೆ.
ದೌರ್ಬಲ್ಯ: ನಿಧಾನಗತಿಯ ಆರಂಭ.
ಸವಾಲು: ಸ್ಪರ್ಧೆಯ ಡ್ರಾ ಇನ್ನಷ್ಟೇ ನಡೆಯಬೇಕು. ಆದರೆ ಫ್ರಾನ್ಸ್‌ನ ಬಿಲಾಲ್ ಬೆನಾಮ, ಚೀನದ ಹು ಜಿಯಾಂಗುವಾನ್, ಥಾಯ್ಲೆಂಡ್‌ನ ಯುವ ವಿಶ್ವವಿಜೇತ ತಿತಿಸಾನ್ ಪನ್ಮೋದ್ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ.
**
ಮೀರಾಬಾಯಿ ಚಾನು
ಸ್ಪರ್ಧೆ: ವನಿತಾ ವೇಟ್‌ಲಿಫ್ಟಿಂಗ್ (49 ಕೆಜಿ)
ಶಕ್ತಿ: ಮಾಜಿ ವಿಶ್ವ ಚಾಂಪಿಯನ್. ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ ವಿಶ್ವದಾಖಲೆ ಹೊಂದಿದ್ದಾರೆ. ಇವರಿಗಿಂತ ಉನ್ನತ ರ್‍ಯಾಂಕಿಂಗ್‌ನಲ್ಲಿರುವ ಇಬ್ಬರು ಇಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಭಾರತೀಯಳನ್ನು ದ್ವಿತೀಯಸ್ಥಾನಕ್ಕೆ ಮೀಸಲಿರಿಸಬಹುದು.
ದೌರ್ಬಲ್ಯ: ಗೋಚರಿಸದು.
ಸವಾಲು: 49 ಕೆಜಿ ವಿಭಾಗದ ಫೇವರಿಟ್ ಆಗಿರುವ ಚೀನಾದ ಹೌ ಜಿಹುಯಿ, ಅಮೆರಿಕದ ಜೋರ್ಡಾನ್ ಡೆಲಾಕ್ರುಝ್ರನ್ನು ಮೀರಿ ನಿಲ್ಲುವುದು.
**
ಖರ್ಚೆಷ್ಟು? ಆದಾಯ ಹೇಗೆ?
ಒಂದು ಒಲಿಂಪಿಕ್ಸ್ ಕೂಟ ನಡೆಸಲು ಅಗಾಧ ಖರ್ಚಿರುತ್ತದೆ. ಕ್ರೀಡಾಗ್ರಾಮ ನಿರ್ಮಾಣ, ಊಟವಸತಿ, ಮೈದಾನ ನಿರ್ಮಾಣ, ಪ್ರಚಾರ, ಸಂಬಳ ಇನ್ನಿತರ ನೂರಾರು ಕಾರಣಗಳಿಗೆ ಖರ್ಚಾಗುತ್ತಲೇ ಇರುತ್ತದೆ. ಈ ಹಣವನ್ನು ವಾಪಸ್ ಪಡೆಯಲು ಸಂಘಟಕರು ಹಲವು ಆದಾಯ ಮೂಲಗಳನ್ನು ಹೊಂದಿರುತ್ತಾರೆ. ಈ ಬಾರಿ ದೊಡ್ಡ ಸಮಸ್ಯೆಯಾಗಿರುವುದೇನೆಂದರೆ ದೇಶದ, ವಿದೇಶದ ಪ್ರೇಕ್ಷಕರಿಗೆ ಸಂಘಟಕರು ಪೂರ್ಣ ನಿಷೇಧ ಹೇರಿರುವುದು. ಹಾಗಾಗಿ ಬಹುದೊಡ್ಡ ಆದಾಯ ಮೂಲ ತಪ್ಪಿ ಹೋಗಿದೆ. ವಿದೇಶೀಯರು ಒಲಿಂಪಿಕ್ಸ್ ನೋಡಲು ಬರುವುದರಿಂದ ಬರೀ ಸಂಘಟಕರಿಗೆ ಮಾತ್ರವಲ್ಲ, ಹತ್ತಾರು ರೀತಿಯಲ್ಲಿ ಜಪಾನ್ ಸರಕಾರಕ್ಕೂ ಲಾಭವಾಗುತ್ತದೆ. ಅದೀಗ ತಪ್ಪಿಹೋಗಿದೆ. ಇನ್ನೀಗ ಈ ಖರ್ಚುಗಳನ್ನು ತೂಗಿಸುವುದು ಹೇಗೆ ಎಂಬ ಪ್ರಶ್ನೆಯಿದೆ.
Advertisement