ಟೋಕ್ಯೊ: ದೇಶದ ಸರ್ವಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ, 6 ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಅವರ ಟೋಕ್ಯೊ ಒಲಿಂಪಿಕ್ಸ್ ಅಭಿಯಾನ ಅಚ್ಚರಿ ಹಾಗೂ ಆಘಾತಕರ ರೀತಿಯಲ್ಲಿ ಕೊನೆಗೊಂಡಿದೆ.
ಗುರುವಾರದ 51 ಕೆಜಿ ವಿಭಾಗದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಕೊಲಂಬಿಯದ ಇನ್‌ಗ್ರಿಟ್ ವಲೆನ್ಸಿಯಾ ವಿರುದ್ಧ 3-2 ಅಂತರದ ಸೋಲನುಭವಿಸಿ ಭಾರವಾದ ಹೃದಯದೊಂದಿಗೆ ನಿರ್ಗಮಿಸಿದರು. ವಲೆನ್ಸಿಯಾ ರಿಯೋ ಒಲಿಂಪಿಕ್ಸ್ ಕೂಟದ ಕಂಚಿನ ಪದಕ ವಿಜೇತ ಬಾಕ್ಸರ್ ಆಗಿದ್ದಾರೆ. ರೆಫ್ರಿಗಳ ತೀರ್ಪಿನಿಂದ ನೊಂದ ಮೇರಿ ಕಣ್ಣೀರು ಕೂಡಾ ಹಾಕಿದ್ದಾರೆ.
ಅಚ್ಚರಿಯೆಂದರೆ, ಮೂರು ಸುತ್ತುಗಳ ಪೈಕಿ ಎರಡರಲ್ಲಿ ಮೇರಿ ಕೋಮ್ ಅವರೇ ಜಯ ಸಾಧಿಸಿದ್ದರು. ಆದರೆ ಅಂತಿಮ ಫಲಿತಾಂಶ ವಲೆನ್ಸಿಯಾ ಪರವಾಗಿ ಬಂತು. ಮೊದಲ ಸುತ್ತಿನಲ್ಲಿ ಮೇರಿ ಕೋಮ್ 1-4ರ ಹಿನ್ನಡೆ ಅನುಭವಿಸಿದರು. ಎರಡನೇ ಸುತ್ತಿನಲ್ಲಿ ದಿಟ್ಟ ಹೋರಾಟ ನೀಡಿದರು. ಭರ್ಜರಿ ಪಂಚ್ ಮೂಲಕ ಗಮನ ಸೆಳೆದರು. ಇಲ್ಲಿ ಮೂವರು ತೀರ್ಪುಗಾರರು ಮೇರಿ ಪರ, ಇಬ್ಬರು ವಲೆನ್ಸಿಯಾ ಪರ ತೀರ್ಪು ನೀಡಿದರು. ನಿರ್ಣಾಯಕ ಸುತ್ತಿನಲ್ಲಿ ಮೇರಿ 3-2 ಮುನ್ನಡೆ ಸಾಧಿಸಿದರೂ ಮೊದಲ ಸುತ್ತಿನಲ್ಲಿ ಅನುಭವಿಸಿದ ಭಾರೀ ಹಿನ್ನಡೆ ಭಾರತೀಯಳಿಗೆ ಮುಳುವಾಗಿ ಪರಿಣಮಿಸಿತು.
4 ಮಕ್ಕಳ ತಾಯಿಯಾಗಿರುವ ಮೇರಿ, ರಾಜ್ಯಸಭಾ ಸದಸ್ಯೆ ಕೂಡ ಆಗಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಅವರು ಟೋಕ್ಯೊದಲ್ಲೂ ಭಾರತದ ಬಹು ದೊಡ್ಡ ಪದಕ ಭರವಸೆಯಾಗಿದ್ದರು.
ಕಳೆದ 20 ವರ್ಷಗಳಿಂದ ಹೋರಾಡುತ್ತಲೇ ಇದ್ದೇನೆ. ಇನ್ನೂ ಹೋರಾಡುವ ಶಕ್ತಿ ನನ್ನಲ್ಲಿದೆ. ನಾನಿನ್ನೂ ಬಲಿಷ್ಠವಾಗಿಯೇ ಇದ್ದೇನೆ. ಮಣಿಪುರದವರ ಹೋರಾಟಕಾರಿ ಗುಣ ಅಮೋಘ ಮಟ್ಟದ್ದು. ಅದರಲ್ಲೂ ವನಿತೆಯರಲ್ಲಿ ಇದು ಇನ್ನೂ ಹೆಚ್ಚು.
-ಮೇರಿ ಕೋಮ್, ಮಹಿಳಾ ಬಾಕ್ಸರ್