Advertisement
ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೊನಾ ಹಾವಳಿಯಿಂದಾಗಿ ನಿಗದಿಯಾಗಿರುವಂತೆ ಜುಲೈ 24ರಂದು ಟೋಕಿಯೊ ಒಲಿಂಪಿಕ್ಸ್ ಉದ್ಘಾಟನೆಯಾಗುವ ಸಾಧ್ಯತೆ ಇಲ್ಲ ಎಂದಿದ್ದಾರೆ ಜಪಾನ್ ಪ್ರಧಾನಿ ಶಿಂಜೊ ಅಬೆ. ಸೋಮವಾರ ಅವರು ಸಂಸತ್ತಿನಲ್ಲಿ ಈ ಹೇಳಿಕೆ ನೀಡಿದ್ದಾರೆ.ಕೆನಡಾದ ಒಲಿಂಪಿಕ್ ಮತ್ತು ಪ್ಯಾರಾಒಲಿಂಪಿಕ್ ಸಮಿತಿಗಳು ಆಟಗಾರರ ಆರೋಗ್ಯದ ಕಾಳಜಿ ಮುಖ್ಯವಾಗಿರುವುದರಿಂದ ಒಲಿಂಪಿಕ್ಸ್‌ಗೆ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಘೋಷಿಸಿದ ಬಳಿಕ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಸರಕಾರದ ಎದುರು ಮುಂದೂಡಿಕೆ ಹೊರತು ಬೇರೆ ದಾರಿ ಇಲ್ಲದಂತಾಗಿದೆ.
ಕೊರೊನಾ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಹೊರತಾಗಿಯೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮತ್ತು ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಒಲಿಂಪಿಕ್ಸ್ ಕ್ರೀಡಾಕೂಟದ ಸಿದ್ಧತೆಗಳನ್ನು ಮುಂದುವರಿಸಿದ್ದರು. ಒಲಿಂಪಿಕ್ಸ್‌ನ ಕೆಲವು ವಿಧಿವಿಧಾನಗಳು ಕೂಡ ನಡೆದಿವೆ.
Related Articles
Advertisement
ಮುಂದೂಡಿಕೆ ಸುಲಭವಲ್ಲ ಒಲಿಂಪಿಕ್ಸ್ ಕೂಟವನ್ನು ಮುಂದೂಡುವುದು ಎಣಿಸಿದಷ್ಟು ಸುಲಭವಲ್ಲ. ಒಲಿಂಪಿಕ್ಸ್‌ಗಾಗಿಯೇ ಜಪಾನ್ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದೆ. ಸಾವಿರಾರು ಹೊಟೇಲ್‌ಗಳನ್ನು ಕಾದಿರಿಸದೆ ಕ್ರೀಡಾಪಟುಗಳ ತಯಾರಿ ಕೊನೆಯ ಹಂತದಲ್ಲಿದೆ. ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ಮುಂದಿನ ಕೆಲವು ವರ್ಷಗಳ ಕ್ರೀಡಾ ಕ್ಯಾಲೆಂಡರ್ ವ್ಯತ್ಯಯವಾಗಲಿದೆ. ಇದು ಅತೀ ದೊಡ್ಡ ಸಮಸ್ಯೆ. ಜ್ಯೋತಿ ರಿಲೇಗೆ ನೂಕುನುಗ್ಗಲು
ಒಲಿಂಪಿಕ್ಸ್ ಜ್ಯೋತಿ ರಿಲೇ ಜಪಾನ್ ಪ್ರವೇಶಿಸುವ ತನಕ ಒಲಿಂಪಿಕ್ಸ್ ಸಮಿತಿ ಮತ್ತು ಟೋಕಿಯೊ ಒಲಿಂಪಿಕ್ಸ್ ಸಂಘಟಕರು ನಿಗದಿಯಾಗಿರುವಂತೆ ಜು. 24ರಂದೇ ಒಲಿಂಪಿಕ್ಸ್ ಪ್ರಾರಂಭಿಸುವ ವಿಶ್ವಾಸದಲ್ಲಿದ್ದರು. ಆದರೆ ಜ್ಯೋತಿಯ ರಿಲೇಯನ್ನು ನೋಡಲು ಜನರು ಎಲ್ಲ ನಿರ್ಬಂಧಗಳನ್ನು ಉಲ್ಲಂ ಸಿ ನುಗ್ಗಿ ಬಂದ ಬಳಿಕ ಕ್ರೀಡಾಕೂಟ ನಡೆಸಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬ ವಿಚಾರ ಮನವರಿಕೆಯಾಗಿದೆ. ಲೂಯಿಸ್, ಗಿರೊಡ್ ವಿರೋಧ
ಜಪಾನ್ ಜನರೂ ಕೊರೊನಾ ಭೀತಿಯ ನಡುವೆ ಒಲಿಂಪಿಕ್ಸ್ ನಡೆಸುವುದಕ್ಕೆ ಸಹಮತ ವ್ಯಕ್ತ ಪಡಿಸಿಲ್ಲ. ವಿವಿಧ ದೇಶಗಳ ಆಟಗಾರರು ಹಠದಿಂದ ಒಲಿಂಪಿಕ್ಸ್ ನಡೆಸುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇವರ ಸಾಲಿಗೆ 9 ಸಲ ಒಲಿಂಪಿಕ್ಸ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ ಆಗಿರುವ ಕಾರ್ಲ್ ಲೂಯಿಸ್ ಮತ್ತು ಫ್ರಾನ್ಸ್‌ನ ಆ್ಯತ್ಲೆಟಿಕ್ಸ್ ಮಂಡಳಿಯ ಮುಖ್ಯಸ್ಥ ಆ್ಯಂಡ್ರೆ ಗಿರೊಡ್ ಕೂಡ ಸೇರಿದ್ದಾರೆ. ಕಾರ್ಲ್ ಲೂಯಿಸ್ ಅವರಂತೂ ಎರಡು ವರ್ಷಗಳ ಮಟ್ಟಿಗೆ ಒಲಿಂಪಿಕ್ಸ್ ಮುಂದೂಡುವುದು ಕ್ಷೇಮಕರವಾದ ನಿರ್ಧಾರವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಮುಂದೂಡಿಕೆ ಅನಿವಾರ್ಯ. ನಿಗದಿತ ದಿನದಂದು ಪ್ರಾರಂಭವಾಗಬಹುದಾದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಹುಮ್ಮಸ್ಸು ಯಾರಲ್ಲೂ ಇಲ್ಲ’ ಎಂದಿದ್ದಾರೆ ಗಿರೊಡ್. ರದ್ದುಪಡಿಸುವ ಆಯ್ಕೆ ಇಲ್ಲ
ಸೋಮವಾರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅಬೆ, “ನಾವು ಸಂಪೂರ್ಣ ಕ್ರೀಡಾಕೂಟವನ್ನು ಸಂಘಟಿಸಲು ಈಗಲೂ ಬದ್ಧರಾಗಿದ್ದೇವೆ. ಆದರೆ ಇದು ಅಸಾಧ್ಯ ಎಂದಾದರೆ ಆಟಗಾರರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಮುಂದೂಡುವ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಒಲಿಂಪಿಕ್ಸ್ ರದ್ದುಪಡಿಸುವ ಆಯ್ಕೆ ನಮ್ಮ ಮುಂದಿಲ್ಲ’ ಎಂದಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಥಾಮಸ್ ಬಾಕ್ ಕೂಡ ಕ್ರೀಡಾಕೂಟವನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರವಿವಾರವೇ ಒಲಿಂಪಿಕ್ಸ್ ಸಮಿತಿ, ಕ್ರೀಡಾಕೂಟವನ್ನು ಮುಂದೂಡುವುದು ಸೇರಿದಂತೆ ಇತರ ಪರ್ಯಾಯ ಸಾಧ್ಯತೆಗಳ ಬಗ್ಗೆಯೂ ಚಿಂತಿಸಲಾಗುತ್ತಿದೆ ಎನ್ನುವ ಮೂಲಕ ಮುಂದೂಡಿಕೆಯ ಸುಳಿವು ನೀಡಿತ್ತು. ಒಲಿಂಪಿಕ್ಸ್ : ಭಾರತದ್ದು ಕಾದು ನೋಡುವ ತಂತ್ರ
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ಕೂಟದಿಂದ ಕೆನಡಾ ಹಿಂದೆ ಸರಿದ ಬಳಿಕ ಒಂದೊಂದೇ ದೇಶಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡುವ ಸಾಧ್ಯತೆ ಇದೆ. ಭಾರತ ಏನು ಮಾಡೀತೆಂಬುದು ಎಲ್ಲರ ಕುತೂಹಲ. ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಹೇಳಿಕೆಯೊಂದನ್ನು ನೀಡಿದ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ), ಕನಿಷ್ಠ ಒಂದು ತಿಂಗಳು ಕಾದು ನೋಡಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ಹೇಳಿದೆ. “ನಾವು ಮುಂದಿನೊಂದು ತಿಂಗಳು ಅಥವಾ 5 ವಾರಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಲಿದ್ದೇವೆ. ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಹಾಗೂ ಕ್ರೀಡಾ ಸಚಿವಾಲಯದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ’ ಎಂಬುದಾಗಿ ಐಒಎ ಮಹಾ ಕಾರ್ಯದರ್ಶಿ ರಾಜೀವ್ ಮೆಹ್ತಾ ಸೋಮವಾರ ಪಿಟಿಐಗೆ ತಿಳಿಸಿದರು. “ಕೊರೊನಾ ವೈರಸ್ ಎಲ್ಲ ಕಡೆ ಭೀತಿ ಮೂಡಿಸಿದೆ. ಆದರೆ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಬೇಕು…’ ಎಂದೂ ಮೆಹ್ತಾ ಹೇಳಿದರು. “ಒಲಿಂಪಿಕ್ಸ್ ಪಂದ್ಯಾವಳಿ ಮುಂದೂಡಲ್ಪಡಲಿದೆ ಎಂಬ ಬಗ್ಗೆ ನಾವು ಯೋಚಿಸಿಲ್ಲ. ಇದಕ್ಕೆ ಇನ್ನೂ ಕಾಲಾವಕಾಶ ಇರಬಹುದು. ಅಷ್ಟರಲ್ಲಿ ನಾವು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಐಒಎ ಸಲಹಾ ಸಮಿತಿ ಜತೆ ಮಾತುಕತೆ ನಡೆಸಬೇಕಿದೆ’ ಎಂದರು. ಭಾರತ ಕೂಡ ಕೆನಡಾ ಹಾದಿಯನ್ನೇ ಹಿಡಿದು ಕೂಟದಿಂದ ಹಿಂದೆ ಸರಿಯಲಿದೆಯೇ ಎಂಬ ಪ್ರಶ್ನೆ ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯ ಅವರಿಗೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ನಿಮ್ಮ ಪ್ರಶ್ನೆ ಊಹಾತ್ಮಕವಾಗಿದೆ. ಇಂಥ ಪ್ರಶ್ನೆಗಳಿಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.