Advertisement

ಟೋಕಿಯೊ ಒಲಿಂಪಿಕ್ಸ್‌ : ಉದ್ಘಾಟನೆಗೆ ಆರೇ ಅಧಿಕಾರಿಗಳಿಗೆ ಅವಕಾಶ

10:34 PM Jul 21, 2021 | Team Udayavani |

ಟೋಕಿಯೊ : ಶುಕ್ರವಾರ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳ ಜತೆಗೆ ಒಂದೊಂದು ದೇಶದ ತಲಾ 6 ಅಧಿಕಾರಿಗಳಿಗಷ್ಟೇ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಭಾರತ ತಂಡದ ಡೆಪ್ಯುಟಿ ಚೆಫ್ ಡಿ ಮಿಶನ್‌ ಆಗಿರುವ ಪ್ರೇಮ್‌ ಕುಮಾರ್‌ ಪಿಟಿಐ ವಾರ್ತಾಸಂಸ್ಥೆಗೆ ಈ ಮಾಹಿತಿ ನೀಡಿದರು.

Advertisement

ಭಾರತದ 127 ಕ್ರೀಡಾಪಟುಗಳು ಸೇರಿದಂತೆ ಒಟ್ಟು 226 ಸದಸ್ಯರು ಟೋಕಿಯೊಗೆ ತೆರಳಿದ್ದಾರೆ. ಕೊರೊನಾ ಕಾರಣದಿಂದ ಉದ್ಘಾಟನಾ ಕಾರ್ಯಕ್ರಮಕ್ಕೂ ಕಠಿನ ನಿರ್ಬಂಧ ವಿಧಿಸಲಾಗಿದೆ. ಕ್ರೀಡಾಪಟುಗಳಿಗೆಲ್ಲ ಮುಕ್ತ ಅವಕಾಶ ಇದೆಯಾದರೂ ಮರುದಿನ, ಅಂದರೆ ಶನಿವಾರ ಸ್ಪರ್ಧಾಕಣಕ್ಕೆ ಇಳಿಯುವವರಿಗೆ ಉದ್ಘಾಟನಾ ಸಮಾರಂಭದಿಂದ ದೂರ ಇರುವಂತೆ ಸೂಚಿಸಲಾಗಿದೆ ಎಂದು ಪ್ರೇಮ್‌ ಕುಮಾರ್‌ ಹೇಳಿದರು. ಇದು ಅನೇಕರಿಗೆ ನಿರಾಸೆ ಮೂಡಿಸಿದೆ.

“ಉದ್ಘಾಟನಾ ಸಮಾರಂಭ ಮಧ್ಯರಾತ್ರಿ ತನಕ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಮರುದಿನ ಸ್ಪರ್ಧೆಗಿಳಿಯುವವರು ವಿಶ್ರಾಂತಿ ತೆಗೆದುಕೊಳ್ಳುವುದು, ಅಥವಾ ಸ್ಪರ್ಧೆಯ ಮೇಲೆ ಗಮನ ಹರಿಸುವುದು ಒಳ್ಳೆಯದು. ಕ್ವಾರಂಟೈನ್‌ನಲ್ಲಿರುವವರಿಗೂ ಪ್ರವೇಶವಿಲ್ಲ’ ಎಂದು ಪ್ರೇಮ್‌ ಕುಮಾರ್‌ ಹೇಳಿದರು.

ಭಾರತದ ಶೂಟರ್, ಬಾಕ್ಸರ್, ಆರ್ಚರ್, ಹಾಕಿ ತಂಡಗಳಿಗೆ ಶನಿವಾರ ಸ್ಪರ್ಧೆ ಇದೆ. ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಧ್ವಜಧಾರಿಯಾಗಿರುವ ಕಾರಣ ಸಮಾರಂಭದಲ್ಲಿ ಹಾಜರಿರುವುದು ಅನಿ ವಾರ್ಯ. ಮತ್ತೋರ್ವ ಧ್ವಜಧಾರಿ ಮೇರಿ ಕೋಮ್‌ ಅವರಿಗೆ ಮರುದಿನ ಸ್ಪರ್ಧೆ ಇಲ್ಲ.

ಬ್ರಿಟನ್ನಿನ ಕೇವಲ 30 ಕ್ರೀಡಾಪಟುಗಳು
ಬ್ರಿಟನ್‌ ಟೋಕಿಯೋಗೆ 376 ಕ್ರೀಡಾಪಟುಗಳ ಬೃಹತ್‌ ದಂಡನ್ನೇ ಕಟಿಕೊಂಡು ಬಂದರೂ ಉದ್ಘಾಟನಾ ಸಮಾರಂಭದಲ್ಲಿ ಕೇವಲ 30 ಮಂದಿಯಷ್ಟೇ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.

Advertisement

ಡೋಪಿಂಗ್‌ ಟೆಸ್ಟ್‌
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ 5 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಡೋಪಿಂಗ್‌ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಟೆಸ್ಟ್‌ ಏಜೆನ್ಸಿ (ಐಟಿಎ) ಐಒಸಿಗೆ ತಿಳಿಸಿದೆ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಡೋಪಿಂಗ್‌ ಪರೀಕ್ಷೆಗೆ ರವಾನಿಸಲಾಗಿದೆ.

ನಂ.1 ಮಹಿಳಾ ಶೂಟರ್‌ ಔಟ್‌!
ವಿಶ್ವದ ನಂ.1 ಶೂಟರ್‌, ಬ್ರಿಟನ್‌ನ ಅಂಬರ್‌ ಹಿಲ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ತಪ್ಪಿದೆ. ಜತೆಗೆ ಇವರ ಸ್ಥಾನಕ್ಕೆ ಬೇರೆ ಸ್ಪರ್ಧಿಗಳನ್ನು ಆಯ್ಕೆಮಾಡುವ ಅವಕಾಶವೂ ಇಲ್ಲದಂತಾಗಿದೆ. ರವಿವಾರ ಸ್ಪರ್ಧೆ ಆರಂಭವಾಗಲಿದ್ದು, ಅಷ್ಟರಲ್ಲಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಲು ಸಾಧ್ಯವಾಗದು ಎಂದು ಒಲಿಂಪಿಕ್ಸ್‌ ಸಮಿತಿ ತಿಳಿಸಿದೆ.

ಚಿಲಿ ಆಟಗಾರ್ತಿಗೆ ಕೊರೊನಾ: ಚಿಲಿಯ ಟೇಕ್ವಾಂಡೊ ಆಟಗಾರ್ತಿ ಫೆರ್ನಾಂಡೊ ಅಗುಯಿರ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

“ಟೋಕಿಯೋ ಒಲಿಂಪಿಕ್ಸ್‌ಗೆ ತೆರಳಬೇಕಿದ್ದ ಫೆರ್ನಾಂಡೊ ಅವರಿಗೆ ಬುಧವಾರ ಆರೋಗ್ಯ ತಪಾಸಣೆ ನಡೆಸಿದಾಗ ಕೊರೊನಾ ಪಾಸಿಟಿವ್‌ ಇರುವುದು ಪತ್ತೆ ಯಾಗಿದೆ. ಹೀಗಾಗಿ ಅವರು ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುತ್ತಿಲ್ಲ’ ಎಂದು ಚಿಲಿ ಒಲಿಂಪಿಕ್ಸ್‌ ಸಮಿತಿ ತಿಳಿಸಿದೆ.

ಸಾಫ್ಟ್ ಬಾಲ್: ಜಪಾನ್‌ ಭರ್ಜರಿ ಆರಂಭ
ಫ‌ುಕುಶಿಮಾ : ಒಲಿಂಪಿಕ್ಸ್‌ ಕ್ರೀಡಾಕೂಟದ ಅಧಿಕೃತ ಉದ್ಘಾಟನೆಗೆ ಇನ್ನೂ ಒಂದು ದಿನವಿದ್ದರೂ ಸ್ಪರ್ಧೆಗೆ ಬುಧವಾರವೇ ಚಾಲನೆ ಲಭಿಸಿದೆ. ಸಾಫ್ಟ್ ಬಾಲ್ ಮುಖಾಮುಖೀಯಲ್ಲಿ ಆಸ್ಟ್ರೇಲಿಯವನ್ನು 8-1ರಿಂದ ಮಣಿಸುವ ಮೂಲಕ ಆತಿಥೇಯ ಜಪಾನ್‌ ಭರ್ಜರಿ ಆರಂಭ ಪಡೆದಿದೆ.

ವನಿತಾ ಫ‌ುಟ್‌ಬಾಲ್‌: ಸ್ವೀಡನ್‌ಗೆ ಜಯ
ಬುಧವಾರ ನಡೆದ ವನಿತಾ ಫ‌ುಟ್‌ಬಾಲ್‌ ಲೀಗ್‌ ಪಂದ್ಯದಲ್ಲಿ ಸ್ವೀಡನ್‌ 3-0 ಗೋಲುಗಳಿಂದ ಅಮೆರಿಕವನ್ನು ಕೆಡವಿದೆ. ವಿಶ್ವದ ನಂ.1 ತಂಡವಾಗಿರುವ ಅಮೆರಿಕ ಟೋಕಿಯೊ ಕೂಟದ ನೆಚ್ಚಿನ ತಂಡಗಳಲ್ಲಿ ಒಂದಾಗಿತ್ತು. ಆದರೆ 5ನೇ ರ್‍ಯಾಂಕಿಂಗ್‌ನ ಸ್ವೀಡನ್‌ ಭರ್ಜರಿ ಪ್ರದರ್ಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next