ಟೋಕಿಯೊ: ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಈ ವರ್ಷವೂ ನಡೆಯುವ ಸಾಧ್ಯತೆ ಇಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯ (ಐಒಸಿ) ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ. ಕೆನಡಾದ ಐಒಸಿ ಸದಸ್ಯ ರಿಚರ್ಡ್ ಪೌಂಡ್ ಅವರು ಬಿಬಿಸಿಗೆ ನೀಡಿದ ಸಂದರ್ಶನವೊಂದರ ವೇಳೆ ಈ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಟೋಕಿಯೊ ಹಾಗೂ ರಾಜಧಾನಿಯ ಸುತ್ತಮುತ್ತಲಿನ ನಗರಗಳಲ್ಲಿ “ಕೋವಿಡ್ ತುರ್ತು ಪರಿಸ್ಥಿತಿ’ ಹೇರಿದ ಬಳಿಕ ಇಂಥದೊಂದು ಅನುಮಾನ ಕಾಡುತ್ತಿದೆ ಎಂಬುದಾಗಿ ಪೌಂಡ್ ಹೇಳಿದರು.
ದ.ಆಫ್ರಿಕಾ ತಂಡದಲ್ಲಿ ನೂತನ ಸೀಮರ್ :
ಜೊಹಾನ್ಸ್‌ಬರ್ಗ್: ಹದಿನಾಲ್ಕು ವರ್ಷಗಳ ಬಳಿಕ ಟೆಸ್ಟ್ ಸರಣಿಗಾಗಿ ಪಾಕಿಸ್ಥಾನಕ್ಕೆ ತೆರಳಲಿರುವ ದಕ್ಷಿಣ ಆಫ್ರಿಕಾ, ತನ್ನ 21 ಸದಸ್ಯರ ತಂಡದಲ್ಲಿ ಇಬ್ಬರು ನೂತನ ಸೀಮರ್‌ಗಳನ್ನು ಸೇರಿಸಿಕೊಂಡಿದೆ. ಇವರೆಂದರೆ ಡ್ಯಾರಿನ್ ಡುಪವಿಲ್ಲಾನ್ ಮತ್ತು ಓಟ್‌ನೀಲ್ ಬಾರ್ಟ್‌ಮ್ಯಾನ್. ವೇಗಿ ಕಾಗಿಸೊ ರಬಾಡ ತಂಡಕ್ಕೆ ಮರಳಿದ್ದಾರೆ.
ಆಲ್‌ರೌಂಡರ್ ಡ್ವೇನ್ ಪ್ರಿಟೋರಿ ಯಸ್, ಸ್ಪಿನ್ನರ್‌ಗಳಾದ ತಬ್ರೇಜ್ ಶಂಸಿ ಮತ್ತು ಜಾರ್ಜ್ ಲಿಂಡೆ ಕೂಡ ವಾಪಸಾಗಿದ್ದಾರೆ. ಕ್ವಿಂಟನ್ ಡಿ ಕಾಕ್ ತಂಡದ ನಾಯಕರಾಗಿದ್ದಾರೆ.
ಸರಣಿಯ ಮೊದಲ ಟೆಸ್ಟ್ ಜ. 26ರಿಂದ ಕರಾಚಿಯಲ್ಲಿ ಆರಂಭವಾಗಲಿದೆ. ದ್ವಿತೀಯ ಟೆಸ್ಟ್ ತಾಣ ರಾವಲ್ಪಿಂಡಿ. ಜ. 15ರಂದು ಪಾಕಿಸ್ಥಾನಕ್ಕೆ ತೆರಳಲಿರುವ ಹರಿಣಗಳ ಪಡೆ, ಕರಾಚಿಯಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ.