Advertisement
ಅರ್ಧದಲ್ಲೇ ನಿಂತ ಫ್ಲೈಓವರ್ ಕಾಮಗಾರಿತೊಕ್ಕೊಟ್ಟಿನಲ್ಲಿ ಫ್ಲೈಓವರ್ ಕಾಮಗಾರಿ ಪ್ರಾರಂಭಗೊಂಡು 8 ವರ್ಷಗಳೇ ಕಳೆದಿದೆ. ಪ್ರಾರಂಭದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿತ್ತು. ಆದರೆ ಫ್ಲೈಓವರ್ ರಸ್ತೆಗೆ ಸಂಪರ್ಕಿಸುವ ಬಾಕ್ಸ್ ನಿರ್ಮಾಣವನ್ನು ಸಂಸ್ಥೆ ಹೊರಗುತ್ತಿಗೆ ನೀಡಿದ ಬಳಿಕ ಕಾಮಗಾರಿ ನಿಧಾನ ಗತಿಯತ್ತ ಸಾಗಿದೆ. ತೊಕ್ಕೊಟ್ಟು ಜಂಕ್ಷನ್‌ನಿಂದ ಓವರ್ ಬ್ರಿಡ್ಜ್ ಸಂಪರ್ಕಿಸುವವರೆಗಿನ ಬಾಕ್ಸ್ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಸಮಸ್ಯೆ ಕಡಿಮೆಯಿತ್ತು. ಆದರೆ ಆರು ತಿಂಗಳ ಹಿಂದೆ ತೊಕ್ಕೊಟ್ಟು ಜಂಕ್ಷನ್ ನಿಂದ ಕಲ್ಲಾಪು ಸಂಪರ್ಕಿಸುವ ಭಾಗದಲ್ಲಿ ಬಾಕ್ಸ್ ಕಾಮಗಾರಿಗೆ ರಸ್ತೆ ಅಗೆದದ್ದೇ ತೊಕ್ಕೊಟ್ಟಿನ ಅವ್ಯವಸ್ಥೆಗೆ ಕಾರಣವಾಗಿದೆ.
ಫುಟ್‌ಪಾತ್ ನಲ್ಲಿ ಗುಂಡಿಗಳು
ಫುಟ್ ಪಾತ್ ನಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು, ರಸ್ತೆಗಳ ಮಟ್ಟದಲ್ಲಿರುವುದರಿಂದ ಫುಟ್ ಪಾತ್ ನಲ್ಲಿ ಸಂಚರಿಸುವ ಪಾದಚಾರಿಗಳು ಈ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಘಟನೆಗಳು ಅನೇಕ ಬಾರಿ ನಡೆದಿದೆ. ತೊಕ್ಕೊಟ್ಟು ಜಂಕ್ಷನ್ ತಗ್ಗು ಪ್ರದೇಶದಲ್ಲಿದ್ದು, ಚೆಂಬುಗುಡ್ಡೆ ಭಟ್ನಗರ ಕಡೆಯಿಂದ ಬರುವ ನೀರು ಹರಿಯಬೇಕಾದ ಚರಂಡಿ ಸಂಪೂರ್ಣ ಮಣ್ಣಿನಿಂದ ಮುಚ್ಚಿ ಹೋಗಿವೆ. ಮಳೆ ನೀರೆಲ್ಲ ರಸ್ತೆಯಲ್ಲಿ ಹರಿದು ಹೊಂಡ ಬಿದ್ದಿದೆ. ಇದರಿಂದ ಮಳೆ ಸುರಿದಾಗ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ವಾಹನಗಳಿಗೂ ಹಾನಿ
ಮಂಗಳೂರು ಕಡೆಯಿಂದ ವೇಗವಾಗಿ ಬರುವ ವಾಹನಗಳು ಹೊಂಡಕ್ಕೆ ಬಿದ್ದು ಕಾರುಗಳ ಬಂಪರ್ ಗೆ ಹಾನಿಯಾದರೆ ಕೆಲವು ದ್ವಿಚಕ್ರ ವಾಹನ ಚಾಲಕರು ಹೊಂಡಕ್ಕೆ ಬಿದ್ದು ಗಾಯಮಾಡಿಕೊಳ್ಳುತ್ತಿರುವ ಘಟನೆ ಇಲ್ಲಿ ದಿನನಿತ್ಯ ನಡೆಯುತ್ತಿದೆ.
Related Articles
ರಸ್ತೆ ದಾಟಲು ಸರ್ಕಸ್
ಎರಡೂ ಕಡೆ ಪೊಲೀಸರಿದ್ದೇ ರಸ್ತೆ ದಾಟಬೇಕಾದ ಅನಿವಾರ್ಯತೆ ಇಲ್ಲಿದೆ. ರಸ್ತೆ ದಾಟಿದ ಬಳಿಕ ಫ್ಲೈಓವರ್ ಅಡಿಯಲ್ಲಿ ಸಾಗುವುದೇ ಒಂದು ರೀತಿಯ ಸರ್ಕಸ್ ಮಾಡಿದ ಹಾಗೆ. ತೊಕ್ಕೊಟ್ಟು ಒಳಪೇಟೆ ಸಹಿತ ಮಂಗಳೂರು ಕಡೆ ಬಸ್ಸಿಗೆ ಸಂಚರಿಸುವವರು ಮತ್ತು ಕಾಸರಗೋಡು ಉಳ್ಳಾಲ ತಲಪಾಡಿ ಕಡೆಯಿಂದ ಮಂಗಳೂರು ವಿವಿ, ದೇರಳಕಟ್ಟೆಗೆ ಬರುವವರು ಫ್ಲೈಓವರ್ ಅಡಿಯಿಂದಲೇ ತೆರಳಬೇಕಾಗಿದೆ. ಫ್ಲೈಓವರ್ ದಾಟುವಲ್ಲಿ ಕಾಮಗಾರಿ ನಡೆಸುವ ಸಂಸ್ಥೆ ಅಡ್ಡಕಟ್ಟಿರುವ ಕಬ್ಬಿಣದ ಶೀಟ್ ತುಕ್ಕು ಹಿಡಿದಿದ್ದು, ಒಬ್ಬರು ಮಾತ್ರ ಸಂಚರಿಸಲು ಸಾಧ್ಯವಿದೆ. ಕಬ್ಬಿಣದ ಶೀಟ್ ನಡುವೆ ಇರುವುದರಿಂದ ಶಾಲಾ ಮಕ್ಕಳು ಸಹಿತ ಜನರು ದಾಟಲು ತೊಂದರೆ ಅನುಭವಿಸುತ್ತಿದ್ದಾರೆ. ಕಬ್ಬಿಣ ಶೀಟ್ ದಾಟುವಲ್ಲಿ ಕೆಸರು ತುಂಬಿದ್ದು ಕಲ್ಲುಗಳ ಮೇಲೆ ಕಾಲನ್ನಿಟ್ಟು ತೆರಳಬೇಕಾಗಿದೆ.
Advertisement
ಫುಟ್ ಪಾತ್ ನಲ್ಲಿ ಅಂಗಡಿ; ರಸ್ತೆಯಲ್ಲಿ ಜನರು !
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಚೆಂಬುಗುಡ್ಡೆ, ಭಟ್ನಗರ ಕಡೆಯಿಂದ ಮುಖ್ಯ ರಸ್ತೆಗೆ ಮತ್ತು ಜಂಕ್ಷನ್ ಗೆ ಬರಲು ಜನರು ಪರದಾಡಬೇಕಾಗಿದೆ. ದೇರಳಕಟ್ಟೆ ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳು ಸಂಧಿಸುವಲ್ಲಿ ಫುಟ್ ಪಾತ್ ನಲ್ಲಿ ತೆರೆದ ನೀರಿನ ಚರಂಡಿ ಮತ್ತು ಬೀದಿ ಬದಿ ಅಂಗಡಿಗಳು ಆಕ್ರಮಿಸಿದ್ದು, ಜನರು ರಸ್ತೆಯಲ್ಲೇ ನಡೆದಾಡುವ ಸ್ಥಿತಿ ಇದೆ. ಇದು ಕೂಡ ಅಪಘಾತ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಸಂಬಂಧಿತ ಇಲಾಖೆಗೆ ದೂರು
ತೊಕ್ಕೊಟ್ಟು ಜಂಕ್ಷನ್ ಸಮಸ್ಯೆ ಬಗ್ಗೆ ಈಗಾಗಲೇ ಸಂಬಂಧಿತ ಇಲಾಖೆ ಸಹಿತ ಸಚಿವ ಖಾದರ್ ಗೆ ದೂರು ನೀಡಿದ್ದು, ಚರಂಡಿ ಸಮಸ್ಯೆಯಿಂದ ಅನೇಕ ಅಪಘಾತಗಳು ನಡೆಯುತ್ತಿವೆ. ಈ ಕುರಿತು ಉಳ್ಳಾಲ ನಗರಸಭೆಯ ಮುಖಾಂತರ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ, ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ.
– ಬಾಝಿಲ್ ಡಿ’ಸೋಜಾ ಸ್ಥಳೀಯ ಕೌನ್ಸೆಲರ್ ಕಾಂಕ್ರೀಟ್ ಒಂದೇ ಪರಿಹಾರ
ಮಳೆಗಾಲಕ್ಕೆ ಕೆಲವುಕಾಲ ಮುಂಚೆ ಫ್ಲೈಓವರ್ ಕಾಮಗಾರಿ ಆರಂಭಿಸಿದ್ದರಿಂದ ಸಮಸ್ಯೆ ಆರಂಭವಾಗಿದ್ದು, ನೀರು ರಸ್ತೆಯಲ್ಲಿ ಹರಿದು ಹೊಂಡಗಳಾಗುತ್ತಿವೆ. ಇದಕ್ಕೆ ಜಲ್ಲಿ ಹುಡಿ ಹಾಕಿದರೂ ಪ್ರಯೋಜನವಾಗುತ್ತಿಲ್ಲ. ದೊಡ್ಡ ಜಲ್ಲಿಕಲ್ಲುಗಳನ್ನು ಹಾಕಿ ಕಾಂಕ್ರೀಟ್ ಹಾಕಿದರೆ ಸಮಸ್ಯೆ ಪರಿಹಾರವಾಗಲಿದೆ.
– ನವೀನ್ ಡಿ’ಸೋಜಾ, ಸ್ಥಳೀಯರು — ವಸಂತ್ ಎನ್. ಕೊಣಾಜೆ