ಬೆಂಗಳೂರು: ರಾಜಧಾನಿಯ ಜನಸಂಖ್ಯೆಗೆ ಅನುಗಣವಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವಲ್ಲಿ ವಿಫಲವಾಗಿರುವ ಬಿಬಿಎಂಪಿ, ಶೌಚಾಲಯಗಳಿಂದ ಪಾಲಿಕೆಗೆ ಬರಬೇಕಾದ ಕೋಟ್ಯಂತರ ರೂ. ಸಂಗ್ರಹಿಸುವಲ್ಲಿ ವಿಫಲವಾಗಿರುವುದು ಬಯಲಾಗಿದೆ.
ಸಾರ್ವಜನಿಕರ ಬಳಕೆಗಾಗಿ ಪಾಲಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ 587 ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಗುತ್ತಿಗೆ ಅವಧಿ ಮುಗಿದು ಹಲವು ವರ್ಷ ಕಳೆದರೂ ಟೆಂಡರ್ ಕರೆಯಲು ಅಧಿಕಾರಿಗಳು ಆಸಕ್ತಿ ತೋರಿಸಿಲ್ಲ. ಪರಿಣಾಮ ಪಾಲಿಕೆಗೆ ಬರಬೇಕಾದ ಕೋಟ್ಯಂತರ ರೂ. ಆದಾಯ ಖಾಸಗಿಯವರ ಪಾಲಾಗುವಂತಾಗಿದೆ.
ನಗರದಲ್ಲಿ ಒಟ್ಟು 780 ಸಾರ್ವಜನಿಕ ಶೌಚಗೃಹಗಳಿವೆ. ಆ ಪೈಕಿ 98 ಸಮುದಾಯ ಶೌಚಾಲಯಗಳು ಹಾಗೂ 73 ಇ-ಟಾಯ್ಲೆಟ್‌ಗಳ ನಿರ್ವಹಣೆ ಮಾಡುತ್ತಿರುವವರ ಮಾಹಿತಿಯಷ್ಟೇ ಪಾಲಿಕೆ ಬಳಿ ಇದೆ. ಆದರೆ, ಉಳಿದ 500ಕ್ಕೂ ಹೆಚ್ಚಿನ ಶೌಚಗೃಹ ನಿರ್ವಹಣೆ ಮಾಡುವವರ ವಿವರ ಹಾಗೂ ಪಾಲಿಕೆಗೆ ಸಂಗ್ರಹಿಸುತ್ತಿರುವ ಆದಾಯದ ಕುರಿತು ಯಾವುದೇ ಮಾಹಿತಿಯಿಲ್ಲ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಪಾಲಿಕೆ ವತಿಯಿಂದ 400ಕ್ಕೂ ಹೆಚ್ಚಿನ ಶೌಚಗೃಹಗಳನ್ನು ನಿರ್ಮಾಣವಾಗಿವೆ. ಆದರೆ, ಅವುಗಳ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ನಡೆಸಿ ನಿಯಮಾನುಸಾರ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ಕೆಲವೆಡೆ ಶೌಚಾಲಯಗಳು ಪಾಳು ಬಿದ್ದ ಸ್ಥಿತಿಯಲ್ಲಿದ್ದರೆ, ಇನ್ನು ಹಲವು ಕಡೆಗಳಲ್ಲಿ ಖಾಸಗಿಯವರು ಅನಧಿಕೃತವಾಗಿ ಶೌಚಾಲಯಗಳನ್ನು ನಿರ್ವಹಿಸುತ್ತಿರುವುದು ಗೊತ್ತಾಗಿದೆ.
ಅನಧಿಕೃತ ಶೌಚಾಲಯ: ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ, ನಗರ ರೈಲು ನಿಲ್ದಾಣ, ಚಿಕ್ಕಪೇಟೆ ಸೇರಿದಂತೆ ನಗರದ ಕೇಂದ್ರ ಭಾಗಗಳಿಗೆ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಆದರೆ ಬೆರಳೆಣಿಕೆ ಶೌಚಾಲಯಗಳಿರುವುದರಿಂದ ಕೆಲವೆಡೆ ಪಾಲಿಕೆಯ ಅನುಮತಿಯನ್ನೂ ಪಡೆಯದೆ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಶೌಚಾಲಯ ನಿರ್ಮಿಸಿರುವುದು ಕಂಡುಬಂದಿದೆ. ಕೆಲವೆಡೆ ಶೌಚಾಲಯದ ಕೊಳಚೆ ನೀರನ್ನು ನೇರವಾಗಿ ತೆರೆದ ಚರಂಡಿಗಳಿಗೆ ಹರಿಸಿರುವುದು ನಡೆದಿದೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ನೀಡಿಲ್ಲ.
ಪಾಲಿಕೆಗೆ 25 ಕೋಟಿ ರೂ. ನಷ್ಟ: ಕೇಂದ್ರ ಭಾಗದಲ್ಲಿರುವ ಪ್ರತಿ ಶೌಚಾಲಯಗಳಲ್ಲಿ ಬಳಕೆದಾರರಿಂದ ನಿತ್ಯ 2ರಿಂದ 3 ಸಾವಿರ ರೂ. ಸಂಗ್ರಹವಾಗುತ್ತಿದೆ ಎನ್ನಲಾಗಿದ್ದು, ಅದರಂತೆ ಪಾಲಿಕೆಯ 500ಕ್ಕೂ ಹೆಚ್ಚು ಶೌಚಾಲಯಗಳಿಂದ ವಾರ್ಷಿಕ ಪಾಲಿಕೆಗೆ ಸುಮಾರು 25 ಕೋಟಿ ರೂ. ಆದಾಯ ಬರಲಿದೆ. ಆದರೆ, ಪಾಲಿಕೆಗೆ ಆದಾಯ ತರಲು ಅಧಿಕಾರಿಗಳು ನಿರಾಕಸ್ತಿ ತೋರಿದ್ದು, ಇದೀಗ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ಶೌಚಾಲಯಗಳ ಕೊರತೆ: ಸ್ವತ್ಛ ಭಾರತ್ ಅಭಿಯಾನದ ಪ್ರಕಾರ ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ 6,595 ಕಮೋಡ್‌ಸಹಿತ ಶೌಚಾಲಯಗಳು ಇರಬೇಕು. ಆದರೆ 2,000 ಕಮೋಡ್ ಶೌಚಾಲಯಗಳಷ್ಟೇ ಇವೆ. ಇದರಿಂದಾಗಿ ಬಯಲು ಪ್ರದೇಶದಲ್ಲಿ ಮಲ-ಮೂತ್ರ ವಿಸರ್ಜನೆ ಮುಂದುವರಿದಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನಗರದಾದ್ಯಂತ 2,212 ಕಡೆಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್‌ಶೆಲ್ಟರ್‌ಗಳಲ್ಲಿ ಸೂಕ್ತ ಸ್ಥಳಾವಕಾಶವಿರುವ 300 ಕಡೆ ಶೌಚಗೃಹ ನಿರ್ಮಾಣಕ್ಕೂ ಟೆಂಡರ್ ಆಹ್ವಾನಿಸಲಾಗಿದೆ.