Advertisement

ನಿಯಮ ಪಾಲಿಸದವರ ವಿರುದ್ಧ ಕ್ರಮಕ್ಕೆ ಮುಂದಾದ ಮಹಾನಗರ ಪಾಲಿಕೆ

10:01 AM Dec 16, 2018 | |

ಮಹಾನಗರ : ಕೇಂದ್ರ ಸರಕಾರದ ನಿಯಮಾನುಸಾರ ಇಂಧನ ಪೂರೈಕೆ ಮಾಡುವ ಪೆಟ್ರೋಲ್‌ ಬಂಕ್‌ ಗಳಲ್ಲಿ ಸಾರ್ವಜನಿಕ ಶೌಚಾಲಯ ಹೊಂದಿರುವುದು ಕಡ್ಡಾಯ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಅಂತಹ ವ್ಯವಸ್ಥೆ ಇಲ್ಲದಿರುವ ಪೆಟ್ರೋಲ್‌ ಬಂಕ್‌ಗಳ ಮೇಲೆ ಕಾನೂನು ಕ್ರಮ ಜರಗಿಸುವುದಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವಾಲಯವು ದೇಶದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯಗೊಳಿಸಿ ಕಳೆದ ವರ್ಷ ಅಧಿಸೂಚನೆ ಹೊರಡಿಸಿತ್ತು. ಆ ಪ್ರಕಾರ, ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಅವುಗಳ ಮಾಲಕರು ಕಡ್ಡಾಯವಾಗಿ ಮಹಿಳೆಯರಿಗೆ, ಪುರುಷರಿಗೆ ಮತ್ತು ದಿವ್ಯಾಂಗರಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಿಸಬೇಕು.

ಅವುಗಳನ್ನು ಗ್ರಾಹಕರಿಗಷ್ಟೇ ಅಲ್ಲದೆ, ಸಾರ್ವಜನಿಕರ ಉಪ ಯೋಗಕ್ಕೂ ನೀಡಬೇಕು. ಒಂದುವೇಳೆ ಈ ನಿಯಮವನ್ನು ಗಾಳಿಗೆ ತೂರಿದರೆ ಮೊದಲ ಹಂತವಾಗಿ ಬಂಕ್‌ ಮಾಲಕರಿಗೆ 15 ಸಾವಿರ ರೂ. ಅನಂತರ 20ರಿಂದ 30 ಸಾವಿರ ರೂ.ವರೆಗೆ ದಂಡ ಕೂಡ ವಿಧಿಸಬಹುದು. ಆ ಅನಂತರವೂ ನಿಯಮ ಪಾಲನೆಯಾಗದಿದ್ದರೆ ಅಂಥ ಪೆಟ್ರೋಲ್‌ ಬಂಕ್‌ಗಳ ಪರವಾನಿಗೆಯನ್ನೇ ರದ್ದುಗೊಳಿಸುವ ಕಟ್ಟುನಿಟ್ಟಿನ ಅಧಿಸೂಚನೆ ಇದಾಗಿದೆ. 

ಆದರೆ, ವಾಸ್ತವದಲ್ಲಿ ಬಹಳಷ್ಟು ಕಡೆಗಳಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆಯೇ ಇಲ್ಲ. ಇನ್ನು ಕೆಲವು ಕಡೆ ಶೌಚಾಲಯ ಇದ್ದರೂ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಿಲ್ಲ. ಇನ್ನೊಂದೆಡೆ, ಕೇಂದ್ರ ಸರಕಾರದ ಈ ನಿಯಮವನ್ನು ಪೆಟ್ರೋಲ್‌ ಬಂಕ್‌ ಮಾಲಕರು ವಿರೋಧಿಸಿದ್ದು, ಒಂದುವೇಳೆ, ಗ್ರಾಹಕರ ಉಪಯೋಗಕ್ಕೆ ಇರುವ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದರಿಂದ ಸಾಕಷ್ಟು ತೊಂದರೆಯಾಗಲಿವೆ ಎನ್ನುವುದು ಅವರ ವಾದ. ಈ ಹಿನ್ನೆಲೆಯಲ್ಲಿ ನಗರದ ಯಾವೆಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಶೌಚಾಲಯದ ವ್ಯವಸ್ಥೆ ಇದೆ, ಅದರ ಸ್ಥಿತಿ-ಗತಿ ಹೇಗಿದೆ ? ಎಂಬ ಬಗ್ಗೆ ‘ಸುದಿನ’ವು ಕಳೆದ ವರ್ಷ ಕೆಲವು ಪೆಟ್ರೋಲ್‌ ಬಂಕ್‌ಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್‌ ಕೂಡ ನಡೆಸಿತ್ತು.

ಕೊನೆಗೂ ಎಚ್ಚೆತ್ತ ಪಾಲಿಕೆ
ಪೆಟ್ರೋಲ್‌ ಬಂಕ್‌ಗಳಲ್ಲಿ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂಬ ಬಗ್ಗೆ ಸಾರ್ವಜನಿಕ ಪ್ರಕಟನೆ ಹೊರಡಿಸಿ ಕಳೆದ ಒಂದು  ವರ್ಷದಿಂದ ನಿಯಮವನ್ನು ಕಟ್ಟು-ನಿಟ್ಟಾಗಿ ಜಾರಿಗೊಳಿಸುವುದಕ್ಕೆ ಮಹಾನಗರ ಪಾಲಿಕೆ ಮುಂದಾಗಿರಲಿಲ್ಲ. ಆದರೆ, ಇದೀಗ ಪಾಲಿಕೆ ಎಚ್ಚೆತ್ತುಕೊಂಡಿದ್ದು, ನಿಯಮಗಳ ಪಾಲನೆಯಾಗುತ್ತಿದೆಯೇ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಅಲ್ಲದೆ ನಿಯಮ ಉಲ್ಲಂ ಸಿದವರ ವಿರುದ್ಧ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಕೇಂದ್ರ ಸರಕಾರದ ಈ ನಿಯಮಕ್ಕೆ ಪೆಟ್ರೋಲ್‌ ಬಂಕ್‌ ಮಾಲಕರ ಸಂಘ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಇದೀಗ ಪಾಲಿಕೆಯು ಆ ನಿಯಮವನ್ನು ನಗರ ವ್ಯಾಪ್ತಿಯಲ್ಲಿ ಕಟ್ಟು-ನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವುದಕ್ಕೆ ಮತ್ತೆ ಅಪಸ್ವರ ಎತ್ತಿದೆ. ಈ ಬಗ್ಗೆ ಮಂಗಳೂರು, ಉಡುಪಿ ಪೆಟ್ರೋಲ್‌ ಮಾಲಕರ ಸಂಘದ ಅಧ್ಯಕ್ಷ ಸತೀಶ್‌ ಕಾಮತ್‌ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ‘ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ತುಂಬಿಸಲು ಬರುವವರಿಗೆ ಶೌಚಾಲಯ ವ್ಯವಸ್ಥೆ ನೀಡಲು ನಮ್ಮ ಅಭ್ಯಂತರವಿಲ್ಲ. ಈಗಾಗಲೇ ಈ ನಿಯಮ ಪಾಲನೆ ಮಾಡುತ್ತಿದ್ದೇವೆ. ಆದರೆ ಸಾರ್ವಜನಿಕರ ಉಪಯೋಗಕ್ಕೆ ನೀಡುವುದಕ್ಕೆ ನಮ್ಮ ವಿರೋಧವಿದೆ.

Advertisement

ಬಂಕ್‌ ಸುರಕ್ಷತೆ
ನಗರದ ಕೆಲವು ಪ್ರದೇಶಗಳಲ್ಲಿನ ಈ ಹಿಂದೆ ಪೆಟ್ರೋಲ್‌ ಬಂಕ್‌ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗಿತ್ತು. ಸಾರ್ವಜನಿಕರಲ್ಲಿ ಕೆಲವರು ಶೌಚಾಲಯದ ಒಳಗೆ ಪ್ರವೇಶಿಸಿ ಬೀಡಿ, ಸಿಗರೇಟ್‌ ಸಹಿತ ಮಾದಕ ವಸ್ತುಗಳ ಸೇವನೆ ಮಾಡುವುದು ಗಮನಕ್ಕೆ ಬಂದಿದೆ. ಪೆಟ್ರೋಲ್‌ ಬಂಕ್‌ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ನಾವು ಒಪ್ಪಲು ತಯಾರಿಲ್ಲ’ ಎಂದಿದ್ದಾರೆ.

ನಗರದಲ್ಲಿ ಮತ್ತಷ್ಟು ಶೌಚಾಲಯ 
ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್‌ ನಜೀರ್‌ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ‘ಕಾನೂನ್ನು ಎಲ್ಲರೂ ಪಾಲನೆ ಮಾಡಬೇಕು. ನಿಯಮ ಪಾಲನೆ ಮಾಡದ ಪೆಟ್ರೋಲ್‌ ಬಂಕ್‌ ಮಾಲಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತೇವೆ. ನಗರವನ್ನು ಸ್ವತ್ಛವಾಗಿಡಬೇಕು ಎಂಬ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನಷ್ಟು ಹೆಚ್ಚಿನ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದೆ. ಇದಕ್ಕಾಗಿ ಎಂಆರ್‌ ಪಿಎಲ್‌ ಮತ್ತು ಎನ್‌ಎಂಪಿಟಿ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದು, ಸಿಎಸ್‌ಆರ್‌ ಹಣದಲ್ಲಿ ಸದ್ಯದಲ್ಲಿಯೇ ನಗರದಲ್ಲಿ ಮತ್ತಷ್ಟು ಶೌಚಾಲಯ ನಿರ್ಮಾಣವಾಗಲಿದೆ’ ಎಂದು ತಿಳಿಸಿದ್ದಾರೆ.

ಕಾನೂನು ಪಾಲನೆ
ಕೇಂದ್ರ ಸರಕಾರದ ನಿಯಮವನ್ನು ಯಾವೆಲ್ಲ ಪೆಟ್ರೋಲ್‌ ಬಂಕ್‌ ಗಳು ಪಾಲನೆ ಮಾಡುತ್ತಿಲ್ಲ ಎಂಬುವುದನ್ನು ಗುರುತಿಸಲಾಗುವುದು. ಕಾನೂನು ಪಾಲಿಸದೇ ಇರುವ ಬಂಕ್‌ ಮಾಲಕರ ವಿರುದ್ಧ ಅಧಿಕಾರ ವ್ಯಾಪ್ತಿಯೊಳಗೆ ಕ್ರಮ ಜರಗಿಸುತ್ತೇವೆ.
– ಭಾಸ್ಕರ್‌ ಕೆ., ಮೇಯರ್‌

ಸುರಕ್ಷೆಗೆ ತೊಂದರೆ
ಪೆಟ್ರೋಲ್‌ಬಂಕ್‌ನಲ್ಲಿರುವ ಶೌಚಾಲಯಕ್ಕೆ ದಿನಂಪ್ರತಿ ನೂರಾರು ಮಂದಿ ಸಾರ್ವಜನಿಕರು ಬಂದರೆ ನಿರ್ವಹಣೆ, ಸುರಕ್ಷತೆಗೆ ಪೆಟ್ಟು ಬೀಳುತ್ತದೆ. ಬಂಕ್‌ ಗಳಲ್ಲಿ ಸುರಕ್ಷತೆಗೆ ತೊಂದರೆಯಾಗದ ರೀತಿಯಲ್ಲಿ ಸರಕಾರ ಅಥವಾ ಸ್ಥಳೀಯಾಡಳಿತವೇ ಶೌಚಾಲಯ ನಿರ್ಮಿಸಲಿ. ಅಲ್ಲದೆ, ಇದರ ನಿರ್ವಹಣೆಗೆ ಸಿಬಂದಿ ನಿಯೋಜನೆ ಮಾಡಿದರೆ ಅಭ್ಯಂತರವಿಲ್ಲ.
– ಸತೀಶ್‌ ಕಾಮತ್‌,
ಮಂಗಳೂರು, ಉಡುಪಿ ಪೆಟ್ರೋಲ್‌ ಮಾಲಕರ ಸಂಘದ ಅಧ್ಯಕ್ಷ

‡ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next