Advertisement

“ಬಯಲು ಶೌಚ ಮುಕ್ತಕ್ಕೆ ಜನಾಂದೋಲನ ಆಗಲಿ’

08:59 AM Sep 27, 2017 | Team Udayavani |

ಕೊಣ್ಣೂರು(ಗದಗ): “ಬಯಲು ಬಹಿರ್ದೆಸೆ ಮುಕ್ತ ಭಾರತಕ್ಕೆ ಸಾರ್ವಜನಿಕರು ಪಾಲುದಾರರಾದಾಗ ಮಾತ್ರ ಅದು ಜನಾಂದೋಲನ ರೂಪ ಪಡೆಯುತ್ತದೆ ಎಂಬುದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಬೀತಾಗಿದೆ. 2019ರ ಅ.2ಕ್ಕೆ ಮಹಾತ್ಮಗಾಂಧಿ 150ನೇ ಜನ್ಮದಿನೋತ್ಸವಕ್ಕೆ ಬಯಲು ಶೌಚ ಮುಕ್ತ ಭಾರತ ನಿರ್ಮಾಣ ಮೂಲಕ ಗೌರವ ಸಲ್ಲಿಸಬೇಕಾಗಿದೆ’ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದರು. 

Advertisement

ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಮಂಗಳವಾರ ನರಗುಂದ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಘೋಷಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ಸ್ವಚ್ಛ ಭಾರತ ಯೋಜನೆ ರಾಜಕೀಯ ಇಲ್ಲವೇ ಸರ್ಕಾರಿ ಯೋಜನೆ ಅಥವಾ ಕಾರ್ಯಕ್ರಮ ಆಗಬಾರದು. ಬದಲಾಗಿ ಜನಾಂದೋಲನ ರೂಪ ಪಡೆಯಬೇಕು ಎಂಬುದು ಪ್ರಧಾನಿ ಮೋದಿ ಆಶಯ’ ಎಂದರು. “ಯುನೆಸೆಫ್ ವರದಿ ಪ್ರಕಾರ, ಸ್ವತ್ಛತೆ ಇಲ್ಲದ ಕಾರಣದಿಂದ ಬರುವ ರೋಗಗಳಿಗಾಗಿ ದೇಶದಲ್ಲಿ ವಾರ್ಷಿಕವಾಗಿ ಜನರು ಅಂದಾಜು 50 ಸಾವಿರ ರೂ.ವೆಚ್ಚ ಮಾಡಬೇಕಾಗಿದೆ. ಅದೇ ರೀತಿ ಡಯೇರಿಯಾ ಇನ್ನಿತರ ರೋಗಳಿಂದಾಗಿ ವಾರ್ಷಿಕ ಒಂದು ಲಕ್ಷ ಮಕ್ಕಳು ಮೃತಪಡುತ್ತಿವೆ. ವಿಶ್ವಬ್ಯಾಂಕ್‌ನ ವರದಿಯಂತೆ ಸ್ವತ್ಛತೆ ಇಲ್ಲದ ಕಾರಣದ ಆರೋಗ್ಯಕ್ಕಾಗಿ ಜನರು ಮಾಡುವ ವೆಚ್ಚ ದೇಶದ ಒಟ್ಟು ಆಂತರಿಕ ಬೆಳವಣಿಗೆ ದರ (ಜಿಡಿಪಿ)ಕ್ಕಿಂತ ಶೇ.6ರಷ್ಟು ಹೆಚ್ಚಾಗಿದೆ ಎಂಬುದಾಗಿದೆ’ ಎಂದರು.

ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಹಾಯಕ ಸಚಿವ ರಮೇಶ ಜಿಗಜಿಣಗಿ, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಬಿ.ಆರ್‌ .ಪಾಟೀಲ, ಗದಗ ಜಿಪಂ ಅಧ್ಯಕ್ಷ ವಾಸಪ್ಪ ಕುರಡಗಿ ಇತರರಿದ್ದರು. 

ಇಂಗ್ಲಿಷ್‌ ಮೋಹ ತೊರೆದು ಮಾತೃಭಾಷೆಗೆ ಒತ್ತು ಕೊಡಿ
“ಇಂಗ್ಲಿಷ್‌ ವ್ಯಾಮೋಹ ತೊರೆದು ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ಕೊಡಿಸಲು ಹಾಗೂ ಮನೆಯಲ್ಲಿ ಮಾತೃಭಾಷೆ ಮಾತನಾಡಲು ಮುಂದಾಗಬೇಕೆಂದು’ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪಾಲಕರಿಗೆ ಕರೆ ನೀಡಿದರು. ನರಗುಂದ ತಾಲೂಕು ಬಯಲು ಬಹಿರ್ದೆಸೆ ಮುಕ್ತ ಘೋಷಣೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ಇಂಗ್ಲಿಷ್‌  ವಿರೋಧಿ ಅಲ್ಲ. ಆದರೆ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಮಾತೃಭಾಷೆ ಸಂರಕ್ಷಣೆಗೆ ಆಯಾ ಭಾಷಿಕರು ತಮ್ಮ ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡದಲ್ಲೇ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು ಎಂದರು.

ಕನ್ನಡದಲ್ಲಿ ಮಾತು: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬಹುಭಾಷಾ ಬಲ್ಲವರಾಗಿದ್ದು, ಭಾಷಣದ ಆರಂಭದಲ್ಲಿ ಕನ್ನಡದಲ್ಲೇ ಮಾತನಾಡಿದಾಗ ನೆರೆದ ಪ್ರೇಕ್ಷಕರು ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದರು. ಕನ್ನಡ ನನಗೆ ಶೇ.95ರಷ್ಟು ಅರ್ಥವಾಗುತ್ತದೆ. ಆದರೆ ಮಾತನಾಡಲು ಹೆಚ್ಚಿಗೆ ಬರುವುದಿಲ್ಲ ಎಂದು ಹೇಳಿ ಅನಂತರ ಹಿಂದಿಯಲ್ಲಿ ಭಾಷಣ ಮಾಡಿದರು. ಕರ್ನಾಟಕವನ್ನು ನಾನೆಂದೂ
ಮರೆಯಲಾರೆ. ನಾನು ಉಪ ರಾಷ್ಟ್ರಪತಿ ಆಯ್ಕೆ ಮೊದಲು ಎರಡು ಸ್ಥಳಗಳಿಗೆ ಭೇಟಿ ನೀಡಿದ್ದೆ. ನನ್ನನ್ನು ರಾಜ್ಯಸಭಾ ಸದಸ್ಯನ್ನಾಗಿ ಮಾಡಿದ ಕರ್ನಾಟಕದ ಬೆಂಗಳೂರಿಗೆ ಬಂದು ಅನೇಕರಿಗೆ ಅಭಿನಂದನೆ ಸಲ್ಲಿಸಿದ್ದೆ. ನಂತರ ತಿರುಪತಿಗೆ ತೆರಳಿ ಬಾಲಾಜಿಗೆ ವಂದಿಸಿ ಬಂದಿದ್ದೆ ಎಂದು ಸ್ಮರಿಸಿದರು.

Advertisement

ಚುನಾವಣೆಯಲ್ಲಿ ಮಾತ್ರ ರಾಜಕಾರಣ ಇರಬೇಕು. ಅಭಿವೃದ್ಧಿ ವಿಚಾರ ಬಂದಾಗ ಎಲ್ಲ ಪಕ್ಷಗಳು ಟೀಂ ಇಂಡಿಯಾ ರೀತಿ ಕಾರ್ಯ ನಿರ್ವಹಿಸಬೇಕಿದೆ. ಕರ್ನಾಟಕದ ಕೊಣ್ಣೂರಿನಲ್ಲಿ ನರಗುಂದ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ  ತಾಲೂಕು ಎಂದು ಘೋಷಣೆ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸ ತಂದಿದೆ. ಇದು ಇತಿಹಾಸ ಪುಟದಲ್ಲಿ ದಾಖಲಾರ್ಹ ಸಮಾರಂಭ.
ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ 

Advertisement

Udayavani is now on Telegram. Click here to join our channel and stay updated with the latest news.

Next